ಬದುಕೊಂದು ಪುಸ್ತಕದಂತೆ. ಹಲವಾರು ವಿಷಯಗಳು ಗೊತ್ತಿವೆ ಅನ್ನಿಸುತ್ತದೆ ಮುಂದೆ ಓದಿದಂತೆ ಕೆಲವೊಮ್ಮೆ ಗೊಂದಲ, ಸಂತೋಷ, ದುಃಖ, ಉದ್ವೇಗಕ್ಕೆ ಒಳಗಾಗುತ್ತೆ ಕೊನೆ ಘಟ್ಟ ತಲುಪಿದಾಗ ನೆಮ್ಮದಿಯ ನಿಟ್ಟುಸಿರು. ಹೀಗೆ ಜೀವನ ದಲ್ಲಿ ಸಾಕಷ್ಟು ಗೊಂದಲ, ಉದ್ವೇಗ, ಸರಿ-ತಪ್ಪುಗಳು ಎಲ್ಲವನ್ನೂ ಕಾಣುತ್ತೇವೆ. ಹುಟ್ಟಿನಿಂದ ಸಾಯುವರೆಗೆ ಜೀವನದಲ್ಲಿ ಹಲವಾರು ಏಳುಬೀಳುಗಳೊಂದಿಗೆ ಎಲ್ಲವನ್ನೂ ಸಂಪಾದಿಸಿ ಮುಪ್ಪಿನಲ್ಲಿ ನೆಮ್ಮದಿಯಿಂದ ಇರುವಂತಿರಬೇಕು ನಮ್ಮ ಜೀವನ.
ಪುಸ್ತಕದ ಪುಟವೊಂದನ್ನು ಹರಿದಾಗ ಅದನ್ನು ಜೋಡಿಸಿ ಮತ್ತೆ ಓದಲಾರಂಭಿಸುತ್ತೇವೆ, ಕಾರಣ ಆ ಪುಸ್ತಕದ ಸೆಳೆತ. ಹಾಗೆಯೇ ಜೀವನದಲ್ಲಿ ಆಗುವ ಕೆಲವೊಂದು ಸಮಸ್ಯೆಗಳಿಗೆ ಕುಗ್ಗದೆ ಗುರಿಯ ಸೆಳೆತಕ್ಕೆ ಓಡುತ್ತಿರಬೇಕು. ಪುಸ್ತಕದ ಕಿವಿಗಳು ಮುಚ್ಚಿದಾಗ ಅದನ್ನ ಬಿಡಿಸಿ ಮತ್ತೆ ಸುಂದರರೂಪ ನೀಡುತ್ತೇವೆ ಹಾಗೆ ಜೀವನದಲ್ಲಿ ಪರರ ಮಾತುಗಳಿಗೆ ಕಿವಿಕೊಡದೆ ನಮ್ಮ ಜೇವನವನ್ನು ಸುಂದರವಾಗಿ ರೂಪುಗೊಳಿಸುವಲ್ಲಿ ಶ್ರಮಿಸಬೇಕು.
ನೆನಪಿರಲಿ, ಪ್ರತಿಯೊಂದು ಪುಸ್ತಕವೂ ನಮ್ಮನ್ನು ಸೆಳೆಯುವುದಿಲ್ಲ. ಯಾವ ಪುಸ್ತಕ ಓದಿದರೆ ಜ್ಞಾನ ಹೆಚ್ಚುತ್ತದೆಯೂ ಮತ್ತು ಮನಸ್ಸಿಗೆ ಮುದ ನೀಡುತ್ತದೆಯೋ ಅಂತಹ ಪುಸ್ತಕದ ಕಡೆಗೆ ಆಸಕ್ತಿ ಬೆಳೆಸುತ್ತೇವೆ. ಹಾಗೆ ಜೀವನದಲ್ಲಿ ಪರಿಚಯ ಆಗೋ ಅದೆಷ್ಟೋ ಜನರು ಬದುಕಿಗೊಂದು ಪಾಠ ಕಲಿಸಿ ಹೋಗುತ್ತಾರೆ. ಆದರೆ ನಾವು ಯಾರನ್ನು ಹಿಂಬಾಲಿಸುತ್ತೇವೆ, ಯಾರನ್ನು ಮಾರ್ಗದರ್ಶಕರಾಗಿ ಸ್ವೀಕರಿಸುತ್ತೇವೆಯೋ ಮುಂದೆ ಜೀವನದಲ್ಲಿ ನಾವು ಸಹ ಅವರಂತೆಯೇ ಆಗುತ್ತೇವೆ.
ಹಾಗಾಗಿ ಉತ್ತಮರ ಮಾರ್ಗದರ್ಶನದಿಂದ ನಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳೋಣ. ಪುಸ್ತಕ ಓದುವಾಗ ಪ್ರಸ್ತುತ ಪುಟದ ಕುರಿತು ಗೊತ್ತಿದೆಯೇ ವಿನಃ ಮುಂದಿನ ಪುಟದ ಬಗ್ಗೆ ತಿಳಿದಿರುವುದಿಲ್ಲ. ಹಾಗೆಯೇ ಭವಿಷ್ಯದ ಬಗ್ಗೆ ಚಿಂತಿಸದೆ ಈ ಕ್ಷಣವನ್ನು ಅನುಭವಿಸಿ, ಬದುಕು ಬಂದಂತೆ ಸ್ವೀಕರಿಸಿ. ಪುಸ್ತಕದ ಪುಟಗಳಂತೆ ನಮ್ಮೆಲ್ಲರ ಬದುಕಿನ ಪುಟವೂ ಸುಂದರವಾಗಿರಲಿ, ಪರಿಶುದ್ಧವಾಗಿರಲಿ.
-ಪ್ರಮೀಳ
ಮಂಗಳೂರು