ಹೊಸದಿಲ್ಲಿ : ಪ್ರತಿಯೋರ್ವ ಭಾರತೀಯನಿಗೂ ತಿಳಿಯುವ ಹಕ್ಕಿದೆ ಮತ್ತು ಅದನ್ನು ಸರಕಾರ ನಿರಾಕರಿಸುವಂತಿಲ್ಲ ಎಂದು ಗುಡುಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಹಿತಿ ಹಕ್ಕು ಕಾಯಿದೆಗೆ ಸರಕಾರ ತರಲು ಬಯಸಿರುವ ತಿದ್ದುಪಡಿಯನ್ನು ವಿರೋಧಿಸಿದ್ದಾರೆ; ಸರಕಾರ ಜನರಿಂದ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪಾರದರ್ಶಕತೆ ಮತ್ತು ಮಾಹಿತಿ ಗಾಗಿರುವ ಮೈಲುಗಲ್ಲು ಕಾನೂನು ಎಂದೇ ತಿಳಿಯಲ್ಪಟ್ಟಿರುವ ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ತಂದಲ್ಲಿ ಅದರಿಂದ ಆ ಕಾಯಿದೆಯು ನಿರುಪಯುಕ್ತವಾಗುತ್ತದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇದೀಗ ಸಾಗುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಾಹಿತಿ ಹಕ್ಕು ವಿವಾದಾತ್ಮಕ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದೆ ಮತ್ತು ಅದಕ್ಕೆ ಮೊದಲೇ ರಾಹುಲ್ ಈ ತಿದ್ದುಪಡಿಗಿರುವ ತಮ್ಮ ವಿರೋಧವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಆರ್‌ಟಿಐ ಕಾಯಿದೆಯ ತಿದ್ದುಪಡಿ ಮಸೂದೆಯು ಚುನಾವಣಾ ಆಯೋಗಕ್ಕೆ ಸಮನಾಗಿ ಮಾಹಿತಿ ಆಯೋಗಕ್ಕೆ ನೀಡಲಾಗಿರುವ ಸ್ಥಾನಮಾನ, ಸಂಬಳ, ಭತ್ತೆ ಮತ್ತು ಸೇವಾ ನಿಯಮಗಳನ್ನು ಅನೂರ್ಜಿತಗೊಳಿಸುವ ಉದ್ದೇಶ ಹೊಂದಿದೆ.
ಈ ತಿದ್ದುಪಡಿ ಮಸೂದೆ ಪಾಸಾಗಿ ಕಾಯಿದೆಯಾದಲ್ಲಿ ಮಾಹಿತಿ ಆಯೋಗದ ಸ್ವಾಯತ್ತೆ ನಷ್ಟವಾಗುತ್ತದೆ; ಆದುದರಿಂದ ಎಲ್ಲರೂ ಇದನ್ನು ವಿರೋಧಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.