ಕುರುಗೋಡು: ಪಟ್ಟಣದಲ್ಲಿ ಡಿಪೋ ಉದ್ಘಾಟನೆಯಾಗಿ ಒಂದು ವರ್ಷವಾದರೂ ಸರಿಯಾಗಿ ಬಸ್ ಬರದಿರುವುದರಿಂದ ದೂರದ ಗ್ರಾಮಗಳಿಂದ ನಿತ್ಯ ಬೆಳಗ್ಗೆ ಮತ್ತು ಸಂಜೆ ಶಾಲಾ-ಕಾಲೇಜುಗಳಿಗೆ ಹೊರಡುವ ವಿದ್ಯಾರ್ಥಿಗಳು ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ.
ಬೆಳಗ್ಗೆ ಪಟ್ಟಣದಿಂದ ಬಳ್ಳಾರಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಗಂಟೆಗಟ್ಟಲೇ ಮುಖ್ಯವೃತ್ತದಲ್ಲಿ ನಿಂತು ಬಸ್ ಕಾಯುವಂತಾಗಿದೆ. ಅಪರೂಪಕ್ಕೆ ಬರುವ ಬಸ್‌ಗಳಿಗೆ ಕುರಿ ಹಿಂಡಿನಂತೆ ಮುಗಿಬಿದ್ದು ಡೋರ್‌ನಲ್ಲಿ ನಿಂತು ವಿದ್ಯಾರ್ಥಿಗಳು ಪ್ರಯಾಣಿಸಬೇಕಾಗಿದೆ.
ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲಾಗಿತ್ತಿಲ್ಲ. ಡಿಪೋದಲ್ಲಿ ವಾರ್ಷಿಕ ಬಸ್ ಪಾಸ್ ವ್ಯವಸ್ಥೆ ಮಾಡಿಸಿದ್ದರೂ ದುಡ್ಡು ಕೊಟ್ಟು ಟಾಟಾ ಏಸ್‌ಗಳಲ್ಲಿ ಪ್ರಯಾಣಿಸಿಬೇಕಾದ ಅನಿವಾರ್ಯತೆ ಉಂಟಾಗಿದೆ.
ವಿದ್ಯಾರ್ಥಿಗಳ ನಿರೀಕ್ಷೆ ಹುಸಿ: ವರ್ಷದ ಹಿಂದೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಘಟಕವನ್ನು ಆಗಿನ ಕಾಂಗ್ರೆಸ್ ಸರ್ಕಾರದ ರಾಜ್ಯಸಾರಿಗೆ ಸಚಿವ ಎಚ್ಎಂ.ರೇವಣ್ಣ ಉದ್ಘಾಟಿಸಿದ್ದರು. ಆಗ ಜನರಲ್ಲಿ ಹೊಸ ಬಸ್‌ಗಳು ಬರುತ್ತವೆ ಮತ್ತು ಬಸ್‌ಗಳ ಸಂಖ್ಯೆ ಹೆಚ್ಚುತ್ತದೆ ಎಂಬ ಆಸೆ ಚಿಗುರಿತ್ತು, ಅದರೆ ಅದೇ ಪರಿಸ್ಥಿತಿ ಇನ್ನೂ ಮುಂದುವರೆದಿದ್ದು ಪಟ್ಟಣದಲ್ಲಿ ಡಿಪೋ ಇದ್ರೂ ಇಲ್ಲದಂತಾಗಿದೆ.
ಪ್ರತಿಭಟನೆಗಳಿಗೆ ದೊರಕದ ಸ್ಪಂದನೆ: ಇನ್ನೂ ಬಸ್ ವ್ಯವಸ್ಥೆ ಕಲ್ಪಿಸುವಂತೆ ಅನೇಕ ಬಾರಿ ಶಾಲಾ-ಕಾಲೇಜಿನ ಪಟ್ಟಣ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೂ ಇಂದಿನವರೆಗೂ ಅದೇ ಪರಿಸ್ಥಿತಿ ಮುಂದುವರೆದಿದೆ.
ಹಳ್ಳಿ ಮತ್ತು ಗ್ರಾಮಗಳಿಂದ ಪಟ್ಟಣಕ್ಕೆ ನಿತ್ಯ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದೇವೆ. ಸರಿಯಾದ ಸಮಯಕ್ಕೆ ಬಸ್ ಇಲ್ಲದಾಗಿದೆ. ಇದರಿಂದ ತರಗತಿಗಳು ಮಿಸ್ ಆಗುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆ ಅಗುತ್ತಿದೆ. ಸಂಜೆ ಕೂಡ ಶಾಲೆ ಮುಗಿಸಿಕೊಂಡು ಮನೆಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ. ಇದರಿಂದ ಮಹಿಳೆಯರಿಗೆ ತುಂಬ ತೊಂದರೆ. ಇದರ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ.
•ವಿದ್ಯಾರ್ಥಿ
•ಸುಧಾಕರ್ ಮಣ್ಣೂರು