ವಾಷಿಂಗ್ಟನ್: ಮನೆಯಲ್ಲಿ ಡಬ್ಬದಲ್ಲಿ ಯಾವತ್ತೂ ಸಿಹಿ ಇರುತ್ತೆ.. ಒಂದ್ಸಲ ತಿನ್ನೋಣ ತುಂಬ ರುಚಿಯಾಗಿದೆ ಅಂತ ನಿತ್ಯವೂ ತಿನ್ನುವ ಅಭ್ಯಾಸ ಬೆಳೆಸುತ್ತೀರೋ..? ಹುಷಾರು..!
ನಿತ್ಯವೂ ಸಿಹಿ ತಿನ್ನುವುದರಿಂದ ಮೊಡವೆ, ಚರ್ಮದ ಸಮಸ್ಯೆಗಳು ಕಾಡಬಹುದು ಎಂದು ಸಮೀಕ್ಷೆಯೊಂದು ಹೇಳಿದೆ.
ಮ್ಯಾಡ್ರಿಡ್‌ನಲ್ಲಿ ನಡೆದ ಚರ್ಮ ಕುರಿತ ಸಮ್ಮೇಳದಲ್ಲಿ ಈ ಕುರಿತ ಸಂಶೋಧನೆ ವರದಿಯೊಂದನ್ನು ಮಂಡಿಸಲಾಗಿದೆ. ಆ ಪ್ರಕಾರ, ಸಂಶೋಧನೆಯಲ್ಲಿ ಪಾಲ್ಗೊಂಡ 6700 ಜನರಲ್ಲಿ ಶೇ.48.2ರಷ್ಟು ಮಂದಿ ನಿತ್ಯವೂ ಹಾಲಿನ ಉತ್ಪನ್ನಗಳನ್ನು ತಿನ್ನುತ್ತಿದ್ದರು. ಇವರಲ್ಲಿ ಹೆಚ್ಚು ಮೊಡವೆ, ಚರ್ಮದ ಸಮಸ್ಯೆ ಕಂಡು ಬಂದಿದೆ. ಶೇ.38.8ರಷ್ಟು ಮಂದಿ ಇಂಥದ್ದು ತಿಂದಿಲ್ಲ. ಅವರಲ್ಲಿ ಕಡಿಮೆ ಕಂಡುಬಂದಿದೆ. ಇನ್ನು ನಿತ್ಯ ಸೋಡಾ, ಜ್ಯೂಸ್, ಸಿರಪ್‌ಗ್ಳನ್ನು ಕುಡಿಯುವವರಲ್ಲಿ ಶೇ.35.6ರಷ್ಟು ಮಂದಿಯಲ್ಲಿ ಈ ಸಮಸ್ಯೆ ಕಂಡುಬಂದಿದೆ. ಚಾಕಲೆಟ್‌ಗಳನ್ನು ತಿನ್ನುವ ಶೇ.37ರಷ್ಟು ಮಂದಿ ಮತ್ತು ಸಿಹಿಯನ್ನು ತಿನ್ನುವ ಶೇ.29.7ರಷ್ಟು ಮಂದಿಯಲ್ಲಿ ಸಮಸ್ಯೆಗಳು ಕಂಡುಬಂದಿವೆ ಎಂದು ಸಂಶೋಧನೆ ಹೇಳಿದೆ.
ಮೊಡವೆಗಳು ಬರಲು ಆಂತರಿಕ ಬಾಹ್ಯ ಕಾರಣಗಳೂ ಇವೆ. ಆದರೆ ಹೆಚ್ಚಾಗಿ ನಾವು ತಿನ್ನುವ ಆಹಾರದಿಂದಲೂ ಸಮಸ್ಯೆ ಉದ್ಭವಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆಹಾರ ಅಲ್ಲದೆ ಕಲುಷಿತ ವಾತಾವರಣ, ಮಾನಸಿಕ ಒತ್ತಡವೂ ಸಮಸ್ಯೆಗೆ ಕಾರಣ ಎಂದು ಅಭಿಪ್ರಾಯಪಡಲಾಗಿದೆ.