Advertisement

ಪ್ರತಿದಿನ 3,300 ಕೋವಿಡ್ ಪರೀಕ್ಷೆ ಗುರಿ

03:34 PM Oct 07, 2020 | Suhan S |

ಹಾಸನ: ಜಿಲ್ಲೆಯಲ್ಲಿ ಪ್ರತಿದಿನ 3,300 ಕೋವಿಡ್ ಪರೀಕ್ಷೆ ನಡೆಸಲು ಗುರಿ ನಿಗದಿಪಡಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಕೋವಿಡ್ ನಿಯಂತ್ರಣ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿಯರ ಕಚೇರಿ ಸಭಾಂಗದಲ್ಲಿ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಕಾರಣ, ಜಿಲ್ಲಾಡಳಿತ ನೀಡಿರುವ ಗುರಿ ಸಾಧಿಸಲು ಆರ್‌ಟಿ-ಪಿಸಿಆರ್‌ ಮತ್ತು ರ್ಯಾಟ್‌ ಪರೀಕ್ಷೆ ಯನ್ನುಕೈಗೊಳ್ಳಬೇಕು ಎಂದು ಸೂಚಿಸಿದರು.

ಕೋವಿಡ್ ಪರೀಕ್ಷೆ ಮಾಡಲು ಹೋದಾಗ ಸಾರ್ವಜನಿಕರು ಪೂರ್ಣ ರೀತಿಯಲ್ಲಿ ಸಹಕರಿಸುತ್ತಿಲ್ಲ, ವೈದ್ಯಾಧಿಕಾರಿಗಳೊಂದಿಗೆ ಜನರು ಗಲಾಟೆ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಅರಿವು ಮೂಡಿಸಿ ನಂತರ ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಿರ್ದಿಷ್ಟ ಗುರಿ ನಿಗದಿಪಡಿಸಿ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಸಂಪರ್ಕಿತರು, ರೋಗ ಲಕ್ಷಣಗಳಿರುವವರು ಹಾಗೂ ದುರ್ಬಲ ಪ್ರದೇಶಗಳಲ್ಲಿ ಇರುವವರನ್ನು ಪತ್ತೆಮಾಡಿ ಪರೀಕ್ಷೆಗೆ ಒಳಪಡಿಸಲು ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರಿಗೆ ನಿರ್ದಿಷ್ಟ ಗುರಿ ನಿಗದಿಪಡಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರೊಂದಿಗೆ ಸಭೆ ನಡೆಸಿ, ಪರೀಕ್ಷೆಯಲ್ಲಿ ನಿರ್ದಿಷ್ಟ ಗುರಿ ತಲುಪಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ ಯಲ್ಲಿರುವ ಲ್ಯಾಬ್‌ಗಳ ಮೂಲಕ ಪರೀಕ್ಷೆ ನಡೆಸಬೇಕು ಎಂದು ಹೇಳಿದರು.

Advertisement

ಸ್ಥಳೀಯವಾಗಿ ಪ್ರಚಾರ ಕೈಗೊಳ್ಳಿ: ಹಾಸನ ನಗರದ ನಂತರ ಅರಸೀಕೆರೆ ತಾಲೂಕಿನಲ್ಲಿ ಹೆಚ್ಚು ಸೋಂಕಿತರಿದ್ದಾರೆ. ಹಾಗಾಗಿ ಸಮು ದಾಯ ಆರೋಗ್ಯ ಕೇಂದ್ರಗಳ ಸುತ್ತಮುತ್ತಲ ಪ್ರದೇಶಗಳಿಗೆ ಆಶಾ ಕಾರ್ಯಕರ್ತೆಯರು ಅಥವಾ ಗ್ರಾಪಂ ಮೂಲಕ ಸ್ಥಳೀಯವಾಗಿ, ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಕೋವಿಡ್ ಲಕ್ಷಣಗಳು ಹಾಗೂ ಪರೀಕ್ಷೆ ಕುರಿತಂತೆ ಪ್ರಚಾರ ಮಾಡಿಸಿ, ನಿಗದಿತ ಗುರಿ ಸಾಧಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿ ಗಳಿಗೆ ಸೂಚಿಸಿದರು.

ಕ್ವಾರಂಟೈನ್‌ನಲ್ಲಿರುವವರ ಬಗ್ಗೆ ನಿಗಾವಹಿಸಿ: ನರೇಗಾ ಯೋಜನೆಗಳ ಜೊತೆಗೆ ಕೋವಿಡ್ ಸೋಂಕು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವ್ಯಾಪಕ ವಾಗಿ ಪ್ರಚಾರ ಮಾಡಿ, ಅರಿವು ಮೂಡಿಸ ಬೇಕು. ಹೋಂ ಐಸೋಲೇಷನ್‌ ಹಾಗೂ ಕ್ವಾರಂಟೈನ್‌ನಲ್ಲಿರುವವರು ಅನವಶ್ಯಕವಾಗಿ ಓಡಾಡದಂತೆ ಪ್ರತಿ ದಿನ ಮನೆಗೆ ಭೇಟಿ ನೀಡಿ ಫೋಟೋ ತೆಗೆದು ಅಪ್ಲೋಡ್‌ ಮಾಡುವಂತೆ ಹಾಗೂ ಶೇ.100 ಹೋಂ ಐಸೋಲೇಷನ್‌ ನಲ್ಲಿರುವವರ ಕುರಿತು ನಿಗಾಹಿವಹಿಸುವಂತೆ ತಹಶೀಲ್ದಾರ್‌ ಮತ್ತು ಇಒಗೆ ಸೂಚಿಸಿದರು. ನಗರ ಪ್ರದೇಶ, ಪಪಂ, ಹೋಬಳಿ ಮಟ್ಟ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಸ್ಕ್ ಧರಿಸದ, ಗುಂಪು ಸೇರುವವರಿಗೆ ಹೆಚ್ಚಿನ ದಂಡ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಪಂ ಇಒಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ರ್ಯಾಟ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದ ವ್ಯಕ್ತಿಗಳಿಗೆ ರೋಗಲಕ್ಷಣ ಇರುವುದು ಕಂಡು ಬಂದಲ್ಲಿ ಅಂತಹವರನ್ನು ಆರ್‌ಟಿ – ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು, ಪ್ರತಿ ದಿನ ಅಂಕಿ ಅಂಶಗಳ ವರದಿ ನೀಡುವಂತೆ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್‌, ತಹಶೀಲ್ದಾರ್‌ ಶಿವಶಂಕರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ .ಹಿರಣ್ಣಯ್ಯ, ತಾಪಂ ಸಹಾಯಕ ನಿರ್ದೇಶಕ ದಿನೇಶ್‌, ತಹಶೀಲ್ದಾರರು, ಇಒ ಮತ್ತು ವೈದ್ಯಾಧಿಕಾರಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next