ಬನಹಟ್ಟಿ; ಮಳೆ ನಿಂತರೂ ಹನಿ ನಿಂತಿಲ್ಲ…ಕೃಷ್ಣೆಯ ಒಡಲು ಖಾಲಿಯಾದ ಬಳಿಕ ರಬಕವಿ ನೀರು ಸರಬರಾಜು ಮಾಡುವ ನೀರು ಶುದ್ಧಿಕರಣ ಘಟಕ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಶುದ್ಧೀಕರಣ ಟ್ಯಾಂಕ್‌ಗಳಲ್ಲಿ ಸಂಗ್ರಹವಾದ ನೀರನ್ನು ನಗರಸಭೆ ಸಿಬ್ಬಂದಿ ಸಣ್ಣ ಗಾತ್ರದ ಪೈಪ್ ಅಳವಡಿಸಿ ಸಾರ್ವ ಜನಿಕರ ನಿತ್ಯ ಬಳಕೆಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ.
ಹೌದು, ರಬಕವಿಯ ಗುಡ್ಡದ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆ ಇದೆ. ಆದರೆ ಆಶ್ರಯ ಕಾಲೋನಿಯಲ್ಲಿ ಚಿಕ್ಕ ಚಿಕ್ಕ ಸಿಂಟೆಕ್ಸ ಟ್ಯಾಂಕ್‌ಗಳನ್ನು ನಿರ್ಮಿಸಿ ಬೋರವೆಲ್ ಪೈಪ್ ಸಂಪರ್ಕ ಕಲ್ಪಿಸಿ ನೀರು ಕೊಡುವ ಕೆಲಸವನ್ನು ನಗರಸಭೆ ಮಾಡುತ್ತಿದೆಯಾದರೂ ಅಕ್ಕಪಕ್ಕ ಪ್ರದೇಶದ ಹಾಗೂ ನೀರಿನ ಟಾಕಿ ಬಲಭಾಗದಲ್ಲಿ ವಾಸವಿರುವ ಜನರು ನೀರಿಗಾಗಿ ನಿತ್ಯ ಹೋರಾಟ ಮಾಡುವಂತಾಗಿದೆ. ಸುಡುಬಿಸಿಲಿನಲ್ಲಿಯೂ ಸರದಿಯಲ್ಲಿ ನಿಂತು ನೀರು ಪಡೆಯುವಂತಾಗಿದೆ.
ಕೆಲವು ಕಡೆಗಳಲ್ಲಿ ಬೋರವೆಲ್ ಇಲ್ಲದ ವಿಷಯ ಕಂಡುಬಂದರೆ ಅಲ್ಲಿ ಟ್ಯಾಂಕ್‌ರಗಳ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಿದ್ದಾರೆಂದು ಇಲ್ಲಿನ ಕೆಲವು ಸಾರ್ವಜನಿಕರು ಹೇಳುತ್ತಿದ್ದಾರೆ. ಆದರೆ ಯಾವಾಗ ನೀರು ಬರುತ್ತೆ ಎಂಬುವುದು ನಮಗೆ ತಿಳಿಯುವುದಿಲ್ಲ. ನದಿಗೆ ನೀರು ಬರುತ್ತದೆ ಎಂದು ಬರೀ ಬೊಗಳೆ ಬಿಡುತ್ತಿದ್ದಾರೆ. ಇನ್ನೂ ನೀರು ನದಿಗೆ ಬಂದಿಲ್ಲ ಬೇಗ ಜನಪ್ರತಿನಿಧಿಗಳು ನೀರು ಬಿಡಿಸುವ ವ್ಯವಸ್ಥೆ ಮಾಡಬೇಕು.
-ಚನ್ನಪ್ಪ ಹೌದನವರ, ಗುಡ್ಡದ ನಿವಾಸಿ. ರಬಕವಿ
ರಬಕವಿ ನೀರು ಶುದ್ಧಿಕರಣ ಘಟಕದ ಟ್ಯಾಂಕ್‌ನಲ್ಲಿ ಉಳಿದಿರುವ ನೀರು ಅಷ್ಟು ಶುದ್ಧವಾಗಿಲ್ಲ. ಈ ನೀರನ್ನು ಯಾರು ಕುಡಿಯಲು ಬಳಸಬಾರದು. ನೀರು ಅಮೂಲ್ಯವಾಗಿದ್ದರಿಂದ ನಿತ್ಯ ಮನೆಬಳಕೆಗೆ ಮಾತ್ರ ಬಳಸಲು ನಾವು ವಿತರಿಸುತ್ತಿದ್ದೇವೆ. ಕುಡಿಯಲು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೇವಲ ರೂ. 2ಕ್ಕೆ 10 ಲೀಟರ್ ನೀರು ಕೊಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ನೀರು ತಂದು ಕುಡಿಯಬೇಕು. ನಗರದಲ್ಲಿ ನೀರಿನ ತೊಂದರೆಯಾಗದಂತೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಸಿಬ್ಬಂದಿ 24 ಗಂಟೆಯೂ ನೀರಿನ ವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ. ಅಂತಹ ಯವುದೇ ತೊಂದರೆ ಇಲ್ಲ. ತೊಂದರೆಯಾದರೆ ಕೂಡಲೇ ನಗರಸಭೆಗೆ ಕಚೇರಿಗೆ ಬಂದು ಮಾಹಿತಿ ನೀಡಬೇಕು, ವ್ಯವಸ್ಥೆ ಮಾಡಲಾಗುವುದು
-ಆರ್.ಎಂ. ಕೊಡಗೆ ಪೌರಾಯುಕ್ತರು. ನಗರಸಭೆ ರಬಕವಿ ಬನಹಟ್ಟಿ.