ಉಪ್ಪಿನಂಗಡಿ: ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಊರಾದ ಹಿರೇ ಬಂಡಾಡಿಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಂತೆ ಈ ಬಾರಿಯ ಲೋಕಸಭಾ ಚುನಾವಣೆಯು ಆಮೆಗತಿಯಲ್ಲಿ ನಡೆದಿದ್ದು, ರಾತ್ರಿ ಏಳೂವರೆಯ ತನಕ ಮತದಾನ ನಡೆಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರದ ಹಿರೇ ಬಂಡಾಡಿ ಮತಗಟ್ಟೆ ಸಂಖ್ಯೆ 49ರಲ್ಲಿ ಒಟ್ಟು 1,250 ಮತದಾರರಿದ್ದು, ಇಲ್ಲಿ ಬೆಳಗ್ಗಿನಿಂದಲೇ ಆಮೆಗತಿಯಲ್ಲಿ ಮತದಾನ ನಡೆಯಿತು. ಮತದಾನ ಅಂತ್ಯಗೊಳ್ಳುವ ಸಮಯ 6 ಗಂಟೆ ಸಮೀಪಿಸಿದರೂ, ಮತದಾನಕ್ಕಾಗಿ ಜನರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಬಳಿಕವೂ ಮತದಾನ ಮುಂದುವರಿದು ರಾತ್ರಿ ಏಳೂವರೆಯವರೆಗೆ ಮತದಾನ ನಡೆಯಿತು. ಆದರೆ ರಾತ್ರಿ ಎಂಟೂವರೆಯಾದರೂ ಮತ ಯಂತ್ರಗಳು ಮತಗಟ್ಟೆಯಲ್ಲೇ ಉಳಿದಿದ್ದವು.
ಶಾಸಕ ಭೇಟಿ: ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾದರೂ ತಮ್ಮ ಸರದಿ ಬಾರದಿದ್ದಾಗ ಕೆಲವು ಮತದಾರರು ಮತದಾನ ಮಾಡದೇ ವಾಪಸ್ ತೆರಳಿದರೆ, ಸರತಿ ಸಾಲಿನಲ್ಲಿ ನಿಂತಿದ್ದವರು ಮತಗಟ್ಟೆ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು. ಮತದಾನ ವಿಳಂಬವಾಗುತ್ತಿರುವ ಸುದ್ದಿ ತಿಳಿದು ಶಾಸಕ ಸಂಜೀವ ಮಠಂದೂರು ಅವರೂ ಸ್ಥಳಕ್ಕಾಗಮಿಸಿದರು.
ಈ ಬಾರಿ ಹಿರೇಬಂಡಾಡಿ ಮತಗಟ್ಟೆ ಸಂಖ್ಯೆ 49ರಲ್ಲಿ ಈ ಸಮಸ್ಯೆಯಾದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಮತಗಟ್ಟೆ ಸಂಖ್ಯೆ 48ರಲ್ಲಿ ಇದೇ ರೀತಿ ವಿಳಂಬವಾಗಿತ್ತು. ಇದನ್ನು ಖಂಡಿಸಿ, ಮತಗಟ್ಟೆಯ ಹೊರಗೆ ಜನರು ಪ್ರತಿಭಟನೆಗೂ ಮುಂದಾಗಿದ್ದರು. ಆದರೆ ಈ ಬಾರಿ ಮತಗಟ್ಟೆ ಸಂಖ್ಯೆ 48ರಲ್ಲಿ ನಿಗದಿತ ಸಮಯಕ್ಕೆ ಮತದಾನ ಮುಗಿದಿತ್ತು.
ಕೈಕೊಟ್ಟ ಮತಯಂತ್ರ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಂಡೆತ್ತಡ್ಕದ ಮತಗಟ್ಟೆ ಸಂಖ್ಯೆ 230ರಲ್ಲಿ ಬೆಳಗ್ಗೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದು ಸುಮಾರು ಒಂದು ಗಂಟೆ ಮತದಾನ ಸ್ಥಗಿತಗೊಂಡಿತ್ತು.