Advertisement
ಉಳಿದಂತೆ ನಗರಸಭೆ ಕಚೇರಿ ಕಟ್ಟಡ ಪಕ್ಕ ಈ ಹಿಂದೆ ಇದ್ದ ನಗರ ಆರೋಗ್ಯ ಕೇಂದ್ರವನ್ನು ಎರಡು ವರ್ಷಗಳ ಹಿಂದೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ (NRUM) ಕಾರ್ಯ ನಿರ್ವಹಿಸುತ್ತಿದೆ.
ಈ ಕೇಂದ್ರದಲ್ಲಿ ಹೆಚ್ಚು ಜನರು ಬರುವುದು ಜ್ವರದ ಕಾರಣದಿಂದ. ದಿನಕ್ಕೆ ಸರಾಸರಿ 40ಕ್ಕೂ ಅಧಿಕ ಮಂದಿ ತಪಾಸಣೆ, ಚಿಕಿತ್ಸೆಗೆ ಬರುತ್ತಾರೆ. ಇದರಲ್ಲಿ ಮಲೇರಿಯಾ ಪ್ರಕರಣದವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ಅವರಿಗೆ ಜಾಗೃತಿ ಮೂಡಿಸುವುದು ಇಲ್ಲಿಯ ಸಿಬಂದಿಯ ಪ್ರಮುಖ ಕೆಲಸವಾಗಿದೆ. ಅವರಿಗೆ ಹಂತ ಹಂತವಾಗಿ ಪೂರ್ಣಾ ವಧಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ. ರಕ್ತಪರೀಕ್ಷೆ ಸೇರಿದಂತೆ ಸಾಮಾನ್ಯ ರೀತಿಯ ಪರೀಕ್ಷೆ ಇಲ್ಲಿನ ಪ್ರಯೋಗಾಲಯದಲ್ಲಿಯೇ ನಡೆಯುತ್ತಿದೆ. ಆದರೂ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಹೆಚ್ಚು ಕಂಡು ಬರುತ್ತಿದೆ. ನಗರಸಭೆಯ 35 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳ ವ್ಯಾಪ್ತಿ ಈ ಕೇಂದ್ರಕ್ಕಿದೆ. ವೈದ್ಯರಿಂದ ತಪಾಸಣೆ, ಪ್ರಾಥಮಿಕ ಹಂತದ ಚಿಕಿತ್ಸೆ, ಔಷಧಿಗಳು ಇಲ್ಲಿ ಉಚಿತ. ಓರ್ವರು ವೈದ್ಯಾಧಿಕಾರಿ, ಇಬ್ಬರು ಸ್ಟಾಫ್ ನರ್ಸ್‌ಗಳು, 6 ಮಂದಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಓರ್ವ ಲ್ಯಾಬ್ ಟೆಕ್ನೀಷಿಯನ್ ಹಾಗೂ 16 ಮಂದಿ ಆಶಾ ಕಾರ್ಯಕರ್ತೆಯರು ಈ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಮೂರು ಹಾಸಿಗೆ ಸಾಮರ್ಥಯವನ್ನು ಹೊಂದಿದೆ. ರೋಗಿಗಳನ್ನು ದಾಖಲು ಮಾಡಿಕೊಳ್ಳುವ ಕ್ರಮ ಇಲ್ಲಿಲ್ಲ. ತಪಾಸಣೆ, ಅಬ್ಸರ್ವೇಷನ್, ಡ್ರಿಪ್ಸ್ ನೀಡಲು ಈ ಬೆಡ್‌ಗಳನ್ನು ಬಳಸಲಾಗುತ್ತದೆ.
Related Articles
ಇಬ್ಬರು ದಾದಿಯರು ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ತಮ್ಮ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ‘ಹೈ ರಿಸ್ಕ್ ಏರಿಯಾ’ (ಕಾರ್ಮಿಕರು ವಾಸವಾಗಿರುವ ಕಾಲನಿಗಳು)ಗಳಲ್ಲಿ ಇಮ್ಯುನೈಜೇಷನ್, ಜಾಗೃತಿ ಕಾರ್ಯಕ್ರಮಗಳನ್ನು ಕೇಂದ್ರದ ವತಿಯಿಂದ ನಡೆಸಲಾಗುತ್ತದೆ.
Advertisement
ಪ್ರತಿ ತಿಂಗಳು ವಿಶೇಷ ತಜ್ಞ ವೈದ್ಯರಿಂದ ಶಿಬಿರಗಳನ್ನು ನಡೆಸಲಾಗುತ್ತದೆ. ಪ್ರತಿ ತಿಂಗಳ 9 ರಂದು ಪ್ರಧಾನಮಂತ್ರಿ ಮಾತೃತ್ವ ಸುರಕ್ಷಾ ಯೋಜನೆಯಡಿ ಗರ್ಭಿಣಿಯ ತಪಾಸಣೆ ನಡೆಯುತ್ತದೆ. ಔಷಧ ಕೊರತೆ ಸದ್ಯಕ್ಕಿಲ್ಲ. ಆದರೆ ಆದಷ್ಟು ಬೇಗ ಖಾಯಂ ಸಿಬಂದಿ ನೇಮಕವಾಗದಿರುವುದರಿಂದ ಸಿಗಬೇಕಾದಷ್ಟು ಸೌಲಭ್ಯ ಸಿಗುತ್ತಿಲ್ಲ. ಜನಪ್ರತಿನಿಧಿಗಳು ಇದನ್ನು ಈಡೇರಿಸಬೇಕೆಂಬುದು ಜನರ ಆಗ್ರಹ.
ಆರೋಗ್ಯ ಕೇಂದ್ರದೊಳಗೆ ಕಸ ಎಸೀತಾರೆ!ಇದು ನಗರದ ಅತ್ಯಂತ ನಡುಭಾಗದಲ್ಲಿರುವ ಸ್ಥಳ. ಕಟ್ಟಡವೂ ಸುಸಜ್ಜಿತವಾಗಿಯೇ ಇದೆ. ಆದರೆ ಕಟ್ಟಡದ ಎದುರಿನ ಭಾಗದಿಂದ (ಮುಖ್ಯ ರಸ್ತೆ) ಹಾಗೂ ಎಡಭಾಗದಿಂದ (ಅಲಂಕಾರ್ ಥಿಯೇಟರ್ ರಸ್ತೆ) ಕಸಗಳನ್ನು ಆರೋಗ್ಯ ಕೇಂದ್ರದ ಕಾಂಪೌಂಡ್ ಒಳಗೆ ಎಸೆಯಲಾಗುತ್ತದೆ. ಇದನ್ನು ಪದೇ ಪದೇ ತೆಗೆದು ಸ್ವಚ್ಛಗೊಳಿಸುವುದೇ ಸಮಸ್ಯೆಯಾಗುತ್ತಿದೆ. ಮಲೇರಿಯಾ ಕುರಿತು ಜಾಗೃತಿ ಅಗತ್ಯ ಸೌಲಭ್ಯಗಳೆಲ್ಲವೂ ಇದೆ. ಸಂಜೆ (ಈವ್ನಿಂಗ್ ಕ್ಲಿನಿಕ್) ಚಿಕಿತ್ಸಾ ಸೌಲಭ್ಯ ಮತ್ತೆ ಆರಂಭವಾಗುವ ನಿರೀಕ್ಷೆ ಇದೆ. ಈ ಪರಿಸರದಲ್ಲಿ ಮಲೇರಿಯಾ ಬಗ್ಗೆ ಜಾಗೃತಿ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲೇ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಜನರ ಪಾತ್ರವೂ ಅಗತ್ಯವಿದೆ.
– ಡಾ| ದೀಕ್ಷಿತ್, ವೈದ್ಯಾಧಿಕಾರಿ, ನಗರ ಪ್ರಾ.ಆ.ಕೇಂದ್ರ ಉಡುಪಿ — ಸಂತೋಷ್ ಬೊಳ್ಳೆಟ್ಟು