Advertisement
ತಾಲೂಕಿನ 7500 ಎಕರೆ ಪ್ರದೇಶದಲ್ಲಿ 2.5 ಲಕ್ಷ ಟನ್ ಕಬ್ಬು ಬೆಳೆದಿದ್ದು, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಈ ವರ್ಷ ಕಾರ್ಖಾನೆ ಪ್ರಾರಂಭಿಸದ ಕಾರಣ ಕಬ್ಬು ಬೆಳೆದ ರೈತರು ಆತಂಕಕ್ಕೀಡಾಗಿದ್ದರು.
ತಾಲೂಕಿನ ದೇಶನೂರು ಗ್ರಾಮದ ರೈತ ದಾಮೋದರ ಜಮೀನಿನಲ್ಲಿ ಬೆಳೆದಿರುವ ಕಬ್ಬು ಕಟಾವು ವೀಕ್ಷಿಸಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 7500ಎಕರೆ ಪ್ರದೇಶದಲ್ಲಿ 2.5ಲಕ್ಷ ಟನ್ ಕಬ್ಬು ಬೆಳೆಯಲಾಗಿದೆ. ಮಂಗಳವಾರ ಕೋರ್‌ಗ್ರೀನ್ ಸಕ್ಕರೆ ಕಾರ್ಖಾನೆ ವತಿಯಿಂದ ಕಬ್ಬು ಕಟಾವು ಮಾಡುವ ಕಾರ್ಮಿಕರ ತಂಡಗಳು ಕಬ್ಬು
ಕಟಾವು ಮಾಡುತ್ತಿದ್ದು, ರೈತರು ಬೆಳೆದ ಕಬ್ಬು ಜೇಷ್ಠತಾ ಆಧಾರದಲ್ಲಿ ಕಟಾವು ಮಾಡಲಾಗುತ್ತದೆ ಎಂದು ತಿಳಿಸಿದರು.
ಡಿಸೆಂಬರ್ ತಿಂಗಳಲ್ಲಿ 450 ರೈತರ ಹೊಲದಲ್ಲಿ ಬೆಳೆದ 11 ಸಾವಿರ ಟನ್ ಕಬ್ಬು ಕಟಾವು ಮಾಡುವ ಗುರಿ ಹೊಂದಲಾಗಿದೆ. ದೇಶನೂರು ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯವರು ಹೆಚ್ಚಿನ ಸಾಗಾಣಿಕೆ ವೆಚ್ಚ ನೀಡುವುದಾಗಿ
ಒಪ್ಪಿಕೊಂಡಿದ್ದು, ಬಾಕಿ ಹಣವನ್ನು ನೀಡದಿದ್ದರೆ ಕಾರ್ಖಾನೆಗೆ ಸಂಬಂಧಿಸಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಬಾಕಿ ಹಣವನ್ನು ರೈತರಿಗೆ ಕೊಡಿಸುವುದಾಗಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ರೈತರಿಗೆ ಭರವಸೆ ನೀಡಿದ್ದಾರೆ. ಆದ್ದರಿಂದ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
Related Articles
Advertisement
ರೈತ ಮುಖಂಡ ಮೋಹನ್‌ಕುಮಾರ್ ಮಾತನಾಡಿ, ರೈತರ ಜಮೀನಿನಲ್ಲಿ ಕಟಾವು ಮಾಡಿದ ಕಬ್ಬನ್ನು ಲಾರಿಗಳಲ್ಲಿ ಸಾಗಿಸಲು ರೈತರು ಜಮೀನಿನಿಂದ ಟ್ರ್ಯಾಕ್ಟರ್‌ಗಳಲ್ಲಿ ಕಬ್ಬನ್ನು ತಂದು ಮುಖ್ಯ ರಸ್ತೆಯಲ್ಲಿ ನಿಂತಿರುವ ಲಾರಿಗಳಿಗೆ ನೀಡಬೇಕಾಗಿರುವುದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಕಾರ್ಖಾನೆಯವರೇ ರೈತರ ಜಮೀನುಗಳಿಂದ ಕಬ್ಬನ್ನು ಸಾಗಾಣಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ದಯಾನಂದ್‌ಪಾಟೀಲ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ಆರ್.ಪಾಲಾಕ್ಷಿಗೌಡ, ಕೃಷಿ ಅಧಿಕಾರಿಗಳಾದ ಗರ್ಜೆಪ್ಪ, ಸುಬಾನ್, ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ರೂಪೇಶ್ ಕುಮಾರ್, ಯಾದಗಿರಿ ಕೋರ್‌ಗ್ರೀನ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಹಿರೇಮಠ…, ಕಬ್ಬು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಗೌಸ್‌ಸಾಬ್, ರೈತ ಮುಖಂಡ ರೋಫ್‌ಸಾಬ್ ಇದ್ದರು.