ಶಿವರಾಜಕುಮಾರ್ ತಮ್ಮ ಚಿತ್ರಗಳ ಬಗ್ಗೆ, ನಡೆದು ಬಂದ ಹಾದಿಯ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಆದರೆ, ಬಾಲ್ಯದ ಬಗ್ಗೆ ಮತ್ತು ಶಾಲೆಯ ರಜಾ ದಿನಗಳ ಬಗ್ಗೆ ಅವರು ಮಾತನಾಡಿದ್ದು ಕಡಿಮೆಯೇ. ಈಗ ಮೊದಲ ಬಾರಿಗೆ ಅವರು ಮನಬಿಚ್ಚಿ, ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಅದಕ್ಕೆ ವೇದಿಕೆ ಮಾಡಿಕೊಟ್ಟಿದ್ದು ವಿನಯ್ ರಾಜಕುಮಾರ್ ಅವರ ಹೊಸ ಚಿತ್ರ “ಗ್ರಾಮಾಯಣ’. ದೇವನೂರು ಚಂದ್ರು ನಿರ್ದೇಶನದ “ಗ್ರಾಮಾಯಣ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಗುರುವಾರ ಸಂಜೆ ನಡೆಯಿತು.
ಟೀಸರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸುವುದಕ್ಕೆ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಬಂದಿದ್ದರು. “ಗ್ರಾಮಾಯಣ’ ಚಿತ್ರದ ಪೋಸ್ಟರ್ ನೋಡಿದರೆ, ನಿರ್ದೇಶಕ ಸೂರಿ ಅವರ ಪೇಂಟಿಂಗ್ ನೆನಪಾಗುತ್ತದೆ ಎಂದು ಹೇಳಿದ ಶಿವರಾಜಕುಮಾರ್, ತಮ್ಮ ಗ್ರಾಮದಲ್ಲಿ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. “ಬಾಲ್ಯದ ಸಾಕಷ್ಟು ದಿನಗಳನ್ನು ಹಳ್ಳಿಯಲ್ಲಿ ಕಳೆದಿದ್ದೇನೆ. ಪರೀಕ್ಷೆ ಮುಗಿಯಿತು ಎಂದರೆ, ಅಂಬಾಸಿಡರ್ ಕಾರಿನಲ್ಲಿ 25 ಮಕ್ಕಳು ಒಟ್ಟಿಗೆ ಗಾಜನೂರಿಗೆ ಹೋಗುತ್ತಿದ್ದೆವು.
ಯಲ್ಲಪ್ಪ ಅಂತ ಡ್ರೈವರ್‌ವೊಬ್ಬರಿದ್ದರು. ಮೈಸೂರಿನಲ್ಲಿ ಬಿರಿಯಾನಿ ಕಟ್ಟಿಸಿಕೊಂಡು, ನಂಜನಗೂಡಿಯ ಹೊಳೆಯ ದಡದಲ್ಲಿ ಊಟ ಮಾಡಿ, ಊರಿಗೆ ಹೋದವೆಂದರೆ, ಅಲ್ಲಿಂದ ಆಟ ಶುರು. ಎಲ್ಲೇ ಹೋದರೂ ಜನ ನನಗೆ ಬಹಳ ಎನರ್ಜಿ ಇದೆ ಎನ್ನುತ್ತಾರೆ. ಆ ಎನರ್ಜಿಗೆ ಕಾರಣ ನಮ್ಮ ಹಳ್ಳಿಯ ವಾತಾವರಣ. ನಾನು ಈಜ ಕಲಿತಿದ್ದೇ ಅಲ್ಲಿ. ಒಂದು ದಿನ ಯಾರೋ ಒಬ್ಬರು ನನ್ನನ್ನು ನೀರಿಗೆ ತಳ್ಳಿಬಿಟ್ಟಿದ್ದರು. ನನಗೆ ಗಾಬರಿಯಾಗಿಬಿಟ್ಟಿತು. “ಕಾಲು ಬಡಿ, ಈಜು ಬರತ್ತೆ …’ ಅಂದ. ಕಾಲು ಆಡಿಸ್ತಾ ಆಡಿಸ್ತಾ ಈಜು ಕಲಿತಿದ್ದೆ.
ಮೀನು ಹಿಡೀತಿದ್ದಿದ್ದು, ಮರಕೋತಿ ಆಟ ಆಡಿದ್ದು, ಮಾವಿನಕಾಯಿ ಕದ್ದಿದ್ದು, ಅಪ್ಪಾಜಿ ಹೊಡೆದಿದ್ದು … ಇವೆಲ್ಲಾ ಮರೆಯೋಕೆ ಸಾಧ್ಯವಿಲ್ಲ. ಎಲ್ಲೋ ಊಟ ಮಾಡ್ತಿದ್ವಿ, ಎಲ್ಲೋ ಮಲಗುತ್ತಿದ್ವಿ, ಯಾರೂ ನಮ್ಮನ್ನ ತಡೀರಿತಲಿಲ್ಲ. ಈಗಲೂ ನನಗೆ ಸಾವಿರ ಪ್ರಾಬ್ಲಿಮ್‌ಗಳಿದ್ದರೂ, ಎಲ್ಲಿ ಮಲಗಿದರೂ ನಿದ್ದೆ ಬರುತ್ತೆ. ಇದೆಲ್ಲಾ ಕಲಿಸಿದ್ದು ನನ್ನೂರು. ಈಗಲೂ ನನಗೆ ಗಾಜನೂರು ಅಂದ್ರೆ ಇಷ್ಟ’ ಎಂದು ನೆನಪಿಸಿಕೊಂಡರು ಶಿವರಾಜಕುಮಾರ್. ತಮ್ಮ ಮಾತನ್ನು ಮುಂದುವರೆಸಿದ ಶಿವರಾಜಕುಮಾರ್, “ನನಗೂ ಅಪ್ಪುಗೂ 13 ವರ್ಷ ವ್ಯತ್ಯಾಸ.
ಅವನ ಯಶಸ್ಸಿಗೆ ಯಾವತ್ತೂ ಹೊಟ್ಟೆಕಿಚ್ಚು ಪಟ್ಟಿಲ್ಲ. ಚಿಕ್ಕ ವಯಸ್ಸಿನಿಂದಲೂ ಅವನ ಟ್ಯಾಲೆಂಟ್ ನೋಡಿಕೊಂಡು ಬಂದ್ವಿ. ನಾವೆಲ್ಲಾ ಬೇರೆಬೇರೆ ಮನೆಯಲ್ಲಿದ್ದರೂ ನಮ್ಮ ಮನಸ್ಸೆಲ್ಲಾ ಒಂದೇ. ಭಿನ್ನಾಭಿಪ್ರಾಯಗಳು ಸಹಜ. ಅದು ಸಹಜವಾಗಿಯೇ ಇರುತ್ತದೆ ಮತ್ತು ಇರಲೇಬೇಕು. ಹಾಗಂತ ನಾವು ಮೂರು ಜನ ಯಾವತ್ತೂ ಕಿತ್ತಾಡಿಲ್ಲ. ನಾವ್ಯಾವತ್ತೂ ಒಂದೇ. ಅದಢ ಜೀವನ. ಪೋಸ್ಟರ್‌ನಲ್ಲಿದ್ದ ಫೋಟೋ ನೋಡಿ, ಅವೆಲ್ಲಾ ನೆನಪಾಯಿತು. ಇವತ್ತಿಗೂ ನನ್ನ ಬಾಲ್ಯದ ಫೋಟೋ ನೋಡಿದ್ರೆ, ನನಗೆ ಅಳು ಬರತ್ತೆ. ಆ ಫೋಟೋ ನೋಡಿದರೆ ಎಷ್ಟು ಬೇಗ ವಯಸ್ಸಾಯ್ತಲ್ಲ ಅನಿಸುತ್ತೆ’ ಎಂದರು ಶಿವರಾಜಕುಮಾರ್.
ಇನ್ನು ವಿನಯ್ ರಾಜಕುಮಾರ್ ಕುರಿತು ಮಾತನಾಡಿದ ಅವರು, “ವಿನು ಬೇರೆಬೇರೆ ತರಹದ ಸಿನಿಮಾಗಳನ್ನ ಮಾಡ್ತಾ ಇದ್ದಾನೆ. ಕೆಲವು ಚಿತ್ರಗಳು ಕಡಿಮೆ ತಲುಪಬಹುದು, ಅದನ್ನ ಸೋಲು ಅಂತಂದುಕೊಳ್ಳಬಾರದು. ಅದು ಸೋಲಲ್ಲ. ಸೋಲಲ್ಲೂ ಗೆಲವನ್ನು ಕಾಣಬೇಕು. ಡಿಪ್ರಸ್ ಆಗಬೇಡ ಅಂತ ಹೇಳುತ್ತಿರುತ್ತೀನಿ. ಅವನಪ್ಪ ನಟ. ತಾತ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಕಲಾವಿದರೇ. ನನಗೆ 100 ಪರ್ಸೆಂಟ್ ನಂಬಿಕೆ ಇದೆ, ಅವನು ತುಂಬಾ ಹೆಸರು ಮಾಡುತ್ತಾನೆ ಅಂತ. ಈ ಚಿತ್ರದ ಹೆಸರು ಬಹಳ ಚೆನ್ನಾಗಿದೆ’ ಎಂದು ಶಿವರಾಜಕುಮಾರ್ ಹೇಳಿದರು.
* ನಾವು ಬೇರೆ ಮನೆಯಲ್ಲಿದ್ದರೂ ಮನಸ್ಸು ಒಂದೇ
* ಭಿನ್ನಾಭಿಪ್ರಾಯ ಸಹಜ; ಹಾಗಂತ ಯಾವತ್ತೂ ಕಾಡಿಲ್ಲ
* ನಾವು ಸೋಲಲ್ಲೂ ಗೆಲುವನ್ನ ಕಾಣಬೇಕು
* ಅವನಪ್ಪ, ತಾತ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಕಲಾವಿದರೇ