Advertisement

Karkala: ನಮಗೆ ಕಾಲು ಸಂಕ ಬೇಕು: ನಕ್ಸಲರು ಬಂದರೂ ಸಂಕ ಬರಲಿಲ್ಲ!

05:07 PM Aug 05, 2024 | Team Udayavani |

ಕಾರ್ಕಳ: ಮೂಲ ಸೌಕರ್ಯದ ಬೇಡಿಕೆ ಇಟ್ಟು ಹೋರಾಡುತ್ತಿದ್ದ ನಕ್ಸಲರನ್ನು ಗುಂಡಿಟ್ಟು ಕೊಂದ ಗ್ರಾಮ ಇದು. ರಾಜ್ಯದ ಮೊದಲ ನಕ್ಸಲ್‌ ಎನ್‌ಕೌಂಟರ್‌ ನಡೆದಿದ್ದು ಇಲ್ಲೇ. ಆದರೆ, ಆ ಘಟನೆ ನಡೆದು 21 ವರ್ಷಗಳೇ ಕಳೆ ದರೂ ಇಲ್ಲಿನ ಜನರ ಅತೀ ಅಗ ತ್ಯದ ಮೂಲ ಸೌಕರ್ಯ ಬೇಡಿಕೆ ಇನ್ನೂ ಈಡೇರಿಲ್ಲ. ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಯೊಟ್ಟು ಎಂಬ ಪ್ರದೇಶದ ಕಥೆ ಇದು.

Advertisement

ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಈದು ಗ್ರಾಮದಲ್ಲಿ ಸುವರ್ಣ ಮತ್ತು ಫ‌ಲ್ಗುಣಿ ಹೊಳೆ ಸೇರಿ ಹರಿಯುತ್ತಿದೆ. ಸುಮಾರು 50ಕ್ಕೂ ಅಧಿಕ ಕುಟುಂಬಗಳಿಗೆ ಹೊರ ಪ್ರಪಂಚಕ್ಕೆ ಹೋಗಲು ಈ ಹೊಳೆಯನ್ನು ದಾಟಲೇಬೇಕು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಊರು ಸಂಪರ್ಕವನ್ನೇ ಕಳೆದಕೊಳ್ಳುತ್ತದೆ. ಇನ್ನೊಂದು ಸಂಪರ್ಕ ಮಾರ್ಗದಲ್ಲಿ ಸಾಗಿದರೆ ಏಳು ಕಿಲೋ ಮೀಟರ್‌ ಹೆಚ್ಚುವರಿ ಸುತ್ತಾಟ. ಇದೆಲ್ಲ ನಿತ್ಯ ಕಾಯಕಕ್ಕೆ ಹೇಳಿಸಿದ್ದಲ್ಲ.

ಕಾರ್ಕಳ ಮತ್ತು ಬೆಳ್ತಂಗಡಿ ಭಾಗದ ಗಡಿಯಂಚಿನಲ್ಲಿ ಈ ಪ್ರದೇಶವಿದೆ. ಬೊಲ್ಯೊಟ್ಟು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ 2003ರಲ್ಲಿ ನಕ್ಸಲ್‌ ಎನ್‌ ಕೌಂಟರ್‌ ನಡೆದು ಇಬ್ಬರು ಯುವತಿಯರು ಮೃತಪಟ್ಟಾಗ ಈ ಭಾಗದ ಮೂಲ ಸೌಕರ್ಯ ಬೇಡಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇಲ್ಲಿನ ಅಭಿವೃದ್ಧಿಗಾಗಿ ನಕ್ಸಲ್‌ ಪ್ಯಾಕೇಜ್‌ ಘೋಷಣೆಯೂ ಆಗಿತ್ತು. ಆದರೆ, ಜನರ ಅತ್ಯಂತ ಮೂಲ ಭೂತ ಆವಶ್ಯಕತೆಯಾದ ಸೇತುವೆ ಮಾತ್ರ ನಿರ್ಮಾಣವಾಗಲೇ ಇಲ್ಲ.

ರಾಜ್ಯದ ಮೊದಲ ನಕ್ಸಲ್‌ ಎನ್‌ಕೌಂಟರ್‌

2003ರ ನವೆಂಬರ್‌ 17ರಂದು ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಯೊಟ್ಟುವಿನಲ್ಲಿ ರಾಜ್ಯದ ಮೊದಲ ನಕ್ಸಲ್‌ ಎನ್‌ಕೌಂಟರ್‌ ನಡೆದಿತ್ತು.ಬೊಲ್ಯೊಟ್ಟುವಿನ ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬ ನಕ್ಸಲ್‌ ಯುವತಿಯರು ಬಲಿಯಾಗಿದ್ದರು. ನಕ್ಸಲ್‌ ಹೋರಾ ಟದ ಆರಂಭಿಕ ದಿನಗಳಲ್ಲಿ ನಕ್ಸಲರು ರಾಮಪ್ಪ ಪೂಜಾರಿ ಅವರನ್ನು ಬೆದರಿಸಿ ಆಶ್ರಯ ಪಡೆದಿದ್ದರು. ಅಲ್ಲಿನ ಮೂಲಭೂತ ಸೌಕರ್ಯಗಳ ಬೇಡಿಕೆಯನ್ನು ಮುಂದಿಟ್ಟುಕೊಂಡ ನಕ್ಸಲ್‌ ತಂಡ ಹೋರಾಟ ಶುರು ಮಾಡಿತ್ತು. ಇದನ್ನು ಅರಿತ ಪೊಲೀಸರು ಅಂದು ಎಸ್‌ಪಿಯಾಗಿದ್ದ ಮುರುಗನ್‌ ನೇತೃತ್ವದಲ್ಲಿ ದಾಳಿ ಮಾಡಿತ್ತು. ಅಂದು ಆ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಯಾವ ಭರವಸೆಗಳೂ, ಕನಿಷ್ಠ ಬೇಡಿಕೆಗಳೂ ಈಡೇರಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

Advertisement

ಹತ್ತಾರು ಸಮಸ್ಯೆಗಳು

ಮಳೆಗಾಲದಲ್ಲಿ ಇಲ್ಲಿ ನದಿ ಉಕ್ಕಿ ಹರಿಯುತ್ತದೆ. ಹೀಗಾಗಿ ಜನರು ದಾಟುವುದು ಭಾರೀ ಕಷ್ಟ.

ಕೆಲವರು ನೀರು ಇಳಿದ ಮೇಲೆ ಹೊಳೆ ದಾಟುವ ಸಾಹಸ ಮಾಡುತ್ತಾರೆ. ಆದರೆ, ಯಾವಾಗ ನದಿ ಒಮ್ಮಿಂದೊಮ್ಮೆಗೆ ಅಬ್ಬರಿಸಲು ಶುರುಮಾಡುತ್ತದೆ ಎಂದು ಹೇಳುವುದೇ ಕಷ್ಟ.

ಇಲ್ಲಿ ಹೊಳೆಯ ಆಚೆ ಬದಿಯಲ್ಲಿ ಅಂಗನವಾಡಿ ಇದೆ. ಆದರೆ, ಹೋಗಬೇಕು ಎಂದರೆ ಹೊಳೆ ದಾಟಿಕೊಂಡೇ ಹೋಗಬೇಕು !

ಬಾಣಂತಿಯರಿಗೂ ಅಂಗನವಾಡಿಯಿಂದ ಪೌಷ್ಟಿಕ ಆಹಾರ ತರಲು ಸಾಧ್ಯವಾಗುತ್ತಿಲ್ಲ.

ಮಳೆಗಾಲದಲ್ಲಿ ಅನಾರೋಗ್ಯ ಪೀಡಿತರಾದರೆ, ಸುತ್ತುವರೆದು ಸಾಗುವ ದುಃಸ್ಥಿತಿ.

ಸೇತುವೆಯಾದರೆ ಅನುಕೂಲ

ಸೇತುವೆಯೊಂದರ ಆವಶ್ಯಕತೆ ನಮಗಿದೆ. ಮಳೆ ಬಂದಾಗ ಸುತ್ತಿ ಬಳಸಿ ಸಾಗುವುದು ತ್ರಾಸದಾಯಕ. ಸೇತುವೆಯಾದರೆ ಮಕ್ಕಳಿಗೂ ನಮಗೂ ಎಲ್ಲರಿಗೂ ಹಿತವಾಗಲಿದೆ.

– ಅಶ್ವಿ‌ನಿ, ಸ್ಥಳೀಯ ನಿವಾಸಿ

ಸುತ್ತುವ ಕೆಲಸ ನಿಲ್ಲುತ್ತದೆ

ಹೊಳೆ ದಾಟಲು ಸೇತುವೆ ಬೇಡಿಕೆ ನಮ್ಮ ತೀರಾ ಅಗತ್ಯಗಳಲ್ಲಿ ಒಂದು. ಇವತ್ತಿನವರೆಗೂ ಯಾವುದೇ ಪರಿಹಾರವಾಗಿಲ್ಲ ಎನ್ನುವುದು ನಮ್ಮೆಲ್ಲರ ಚಿಂತೆಗೆ ದೂಡಿದೆ. ಸೇತುವೆ ನಿರ್ಮಾಣವಾಗಿ ಹೊಳೆದಾಟುವಂತಾದರೆ ಸುತ್ತುವ ಕೆಲಸ ನಿಲ್ಲುತ್ತದೆ.

-ಪ್ರಶಾಂತ್‌ ಪೂಜಾರಿ, ಸ್ಥಳೀಯರು

– ಬಾಲ ಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next