ಚಿಕ್ಕೋಡಿ: ಕೃಷ್ಣಾ ನದಿ ಭೀಕರ ಪ್ರವಾಹದಲ್ಲಿ ಆಸ್ತಿಪಾಸ್ತಿ, ಮನೆ ಮುಳುಗಿದರೂ ಧೃತಿಗೆಡದ ವೈದ್ಯರೊಬ್ಬರು ಮಾನವೀಯತೆ ಆಧಾರದ ಮೇಲೆ ಬಾಣಂತಿಯರು, ವೃದ್ಧರು ಸೇರಿ ನೂರಾರು ಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷಧೋಪಚಾರ ನೀಡಿ ಗಡಿ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕೃಷ್ಣಾ ನದಿ ತೀರದಲ್ಲಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ವೈದ್ಯ ಡಾ| ಶಿವಾನಂದ ಪಾಟೀಲ ಕಳೆದ 15 ದಿನಗಳಿಂದ ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷಧೋಪಚಾರ ನೀಡುತ್ತ ಮಾನವೀಯತೆಯ ಪ್ರತೀಕ ಎನಿಸಿದ್ದಾರೆ.
ಕೃಷ್ಣಾ ನದಿ ತೀರದ ಚಿಕ್ಕೋಡಿ ತಾಲೂಕಿನ ಅಂಕಲಿ, ಮಾಂಜರಿ, ಚೆಂದೂರ, ಇಂಗಳಿ, ಯಡೂರ, ಯಡೂರವಾಡಿ ಮತ್ತು ಕಲ್ಲೋಳ ಗ್ರಾಮದ ಸಂತ್ರಸ್ತರು ಆರೋಗ್ಯ ಸರಿಯಿಲ್ಲ ಎಂದು ಆಸ್ಪತ್ರೆಗೆ ಹೋದರೆ ಅಂತವರನ್ನು ದಾಖಲು ಮಾಡಿಕೊಂಡು ಅವರಿಂದ ಒಂದು ಪೈಸೆ ಹಣ ಪಡೆಯದೇ ವೈದ್ಯಕೀಯ ನೆರವು ನೀಡುತ್ತಿದ್ದಾರೆ.
ಗಡಿ ಭಾಗದ ಜನರು ಚಿಕಿತ್ಸೆಗಾಗಿ ನೆರೆಯ ಮಹಾರಾಷ್ಟ್ರದ ಮಿರಜ, ಸಾಂಗ್ಲಿ, ಚಿಕ್ಕೋಡಿಗೆ ಹೋಗುತ್ತಾರೆ. ಆದರೆ ಕೃಷ್ಣಾ ನದಿ ಪ್ರವಾಹ ಹಿನ್ನೆಲ್ಲೆಯಲ್ಲಿ ಪ್ರಮುಖ ರಸ್ತೆ ಮಾರ್ಗ ಬಂದ್ ಇರುವುದರಿಂದ ಅನೇಕ ರೋಗಿಗಳು ಪರದಾಡುತ್ತಿರುವುದನ್ನು ಕಂಡ ಡಾ. ಪಾಟೀಲ ತಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.
ಸ್ವತಃ ತಮ್ಮ ಮನೆಯೇ ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಡೆಯಾದರೂ ಕುಟುಂಬದ ಸಮಸ್ಯೆಯನ್ನು ಲೆಕ್ಕಿಸದೇ ರಾಜ್ಯಸಭೆ ಸದಸ್ಯ ಡಾ| ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ವೈದ್ಯಕೀಯ ನೆರವು ನೀಡುತ್ತಿದ್ದಾರೆ.
ನನ್ನ ಮನೆ ಕೂಡಾ ನೀರಿನಲ್ಲಿ ಮುಳುಗಿದೆ. ಆದರೂ ನನ್ನ ಗ್ರಾಮದ ಸುತ್ತಮುತ್ತ ಜನರು ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ವೃದ್ಧರು, ಬಾಣಂತಿಯರು ಸೇರಿ ನೂರಾರು ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ನನಗೆ ಸಂತಸ ತಂದಿದೆ ಎನ್ನುತ್ತಾರೆ ವೈದ್ಯ ಡಾ| ಶಿವಾನಂದ ಪಾಟೀಲ.