Advertisement

ಶಾಲೆ-ಕಾಲೇಜು ತೆರೆದರೂ ಹಾಸ್ಟೆಲ್‌ಗ‌ಳಿಗಿಲ್ಲ ಪ್ರವೇಶ!

12:37 AM Jun 04, 2024 | Team Udayavani |

ಕೋಟ: ರಾಜ್ಯಾದ್ಯಂತ ಶಾಲೆ-ಕಾಲೇಜುಗಳು ಆರಂಭಗೊಂಡಿವೆ. ಆದರೆ ರಾಜ್ಯ ಸರಕಾರದ ವಿವಿಧ ಇಲಾಖೆಗಳಡಿ ಇರುವ ವಸತಿ ನಿಲಯಗಳಲ್ಲಿ ಪ್ರವೇಶ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಕಳೆದ ವರ್ಷ ಇದೇ ರೀತಿ ಶಾಲೆ- ಕಾಲೇಜು ಆರಂಭವಾಗಿ ಎರಡು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೀಟು ಸಿಗದೆ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಅದು ಗೊತ್ತಿದ್ದೂ ವ್ಯವಸ್ಥೆ ಸುಧಾರಣೆಯಾಗಿಲ್ಲ.

Advertisement

ಶೈಕ್ಷಣಿಕ ಋತು ಆರಂಭವಾದ ತತ್‌ಕ್ಷಣ ಬೇರೆಬೇರೆ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಜಿಲ್ಲೆಯ ಶಾಲೆ-ಕಾಲೇಜುಗಳಲ್ಲಿ ಸೀಟು ಪಡೆದು ಹತ್ತಿರದ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಕೋರುತ್ತಾರೆ. ಈ ಹಿಂದೆ ಇದಕ್ಕೆ ತಾಲೂಕು ಮಟ್ಟದಲ್ಲಿ ಅರ್ಜಿ ಸಲ್ಲಿಕೆ ಯಾಗುತ್ತಿತ್ತು. ಸ್ಥಳೀಯ ಶಾಸ ಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಅಧಿ ಕಾರಿಗಳ ಮುಖಾಂ ತರ ಮೆರಿಟ್‌ ಮತ್ತು ಕೆಟಗರಿ ಆಧಾರದಲ್ಲಿ ಶಿಕ್ಷಣ ಸಂಸ್ಥೆ ಆರಂಭ ವಾಗಿ ಒಂದೆರಡು ವಾರ ದಲ್ಲಿ ಸೀಟು ಹಂಚಿಕೆ ನಡೆಯುತ್ತಿತ್ತು. ಬಹು ತೇಕ ವಿದ್ಯಾರ್ಥಿಗಳಿಗೆ ತಾವು ಕೋರಿದ ವಿದ್ಯಾರ್ಥಿ ನಿಲಯದಲ್ಲೇ ಸೀಟು ಸಿಗುತ್ತಿತ್ತು.

ಆದರೆ 2022ರಿಂದ ವಸತಿ ನಿಲಯದ ಸೀಟಿಗಾಗಿ ಎಸ್‌.ಎಚ್‌.ಪಿ. ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ರಾಜ್ಯ ಮಟ್ಟದ ಆಯ್ಕೆ ಸಮಿತಿಯಿಂದ ಸೀಟು ಹಂಚಿಕೆ ನಡೆಸಲಾಗುತ್ತದೆ. ಈ ನಿಯಮ ಜಾರಿಗೆ ಬಂದ ಮೇಲೆ ಸೀಟುಗಳಿಗಾಗಿ ಅರ್ಜಿ ಆಹ್ವಾನ, ಸೀಟು ಹಂಚಿಕೆ ಎಲ್ಲವೂ ವಿಳಂಬವಾಗುತ್ತಿದ್ದು, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ವಿದ್ಯಾರ್ಥಿಗಳ ಪರದಾಟ
ಶಾಲೆ ಕಾಲೇಜು ಆರಂಭವಾದ ತತ್‌ಕ್ಷಣ ವಸತಿ ನಿಲಯದ ಸೀಟು ಸಿಗದೇ ಇರುವುದರಿಂದ ಖಾಸಗಿಯಾಗಿ ಬಾಡಿಗೆ ಕೊಠಡಿ ಅಥವಾ ಪಿಜಿಗಳಲ್ಲಿ ದುಬಾರಿ ಹಣ ಪಾವತಿಸಿ ನೆಲೆ ಕಂಡುಕೊಳ್ಳಬೇಕಾಗಿದೆ. ಪರ್ಯಾಯ ವ್ಯವಸ್ಥೆ ಸಾಧ್ಯವಾಗದ ಅದೆಷ್ಟೋ ವಿದ್ಯಾರ್ಥಿಗಳು ಹಾಸ್ಟೆಲ್‌ ವ್ಯವಸ್ಥೆಯಾಗುವವರೆಗೆ ಪಾಠದಿಂದ ವಂಚಿತರಾಗುವ ಪರಿಸ್ಥಿತಿ ಇದೆ.

ಬಯಸಿದಲ್ಲಿ ಸೀಟು ಸಿಗದೆ ಸಮಸ್ಯೆ
ರಾಜ್ಯ ಮಟ್ಟದಲ್ಲಿ ಆಯ್ಕೆ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಶಾಲೆ ಕಾಲೇಜಿನಿಂದ 20 30 ಕಿ.ಮೀ. ದೂರದ ಹಾಸ್ಟೆಲ್‌ಗ‌ಳು ಸಿಕ್ಕಿರುವ ಉದಾಹರಣೆ ಕೂಡ ಇದೆ. ಪ್ರತೀ ದಿನ ಅಷ್ಟು ದೂರ ಪ್ರಯಾಣಿಸಲು ಅಸಾಧ್ಯವೆಂಬ ಕಾರಣಕ್ಕೆ ಮನನೊಂದ ವಿದ್ಯಾರ್ಥಿಗಳು ಶಿಕ್ಷಣವನ್ನೇ ಮೊಟಕುಗೊಳಿಸಿ ಹುಟ್ಟೂರಿಗೆ ಮರಳಿದ ಉದಾಹರಣೆಗಳು ಕಳೆದ ವರ್ಷದಲ್ಲಿವೆ.

Advertisement

ಎಸ್‌.ಎಚ್‌.ಪಿ. ವೆಬ್‌ಸೈಟ್‌ ಮೂಲಕ ಕಳೆದ ಬಾರಿ ಸೀಟು ಹಂಚಿಕೆ ನಡೆಸಿದ್ದರಿಂದ ಆಗಿರುವ ಸಮಸ್ಯೆಯನ್ನು ಇಲಾಖೆಯ ಮುಖ್ಯಸ್ಥರಿಗೆ ತಿಳಿಸಿ ಈ ಬಾರಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ಮುಂದಿನ ವಾರದಿಂದಲೇ ಎಸ್‌.ಎಚ್‌.ಪಿ. ಅಥವಾ ಪರ್ಯಾಯ ವಿಧಾನದ ಮೂಲಕ ಅರ್ಜಿ ಆಹ್ವಾನ ಆರಂಭಗೊಳ್ಳಲಿದೆ. ಶೀಘ್ರವಾಗಿ ಸೀಟು ಹಂಚಿಕೆ ಕೂಡ ನಡೆಯಲಿದೆ. ನವೀಕರಣ ಪ್ರಕ್ರಿಯೆಗೆ ಯಾವುದೇ ಸಮಸ್ಯೆ ಇಲ್ಲ.
-ರಾಕೇಶ್‌, ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಬೆಂಗಳೂರು
-ದಯಾನಂದ, ಹಿಂ. ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು, ಬೆಂಗಳೂರು

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next