ಗುರುಮಠಕಲ್: ಭೀಕರ ಬರದಿಂದ ಜಲಮೂಲಗಳು ಬತ್ತಿದ್ದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ ಪಟ್ಟಣದ ಹೊರವಲಯದಲ್ಲಿರುವ ರಾಮತೀರ್ಥ ಬಾವಿಯಲ್ಲಿ ಮಾತ್ರ ನೀರು ಬತ್ತಿಲ್ಲ. ಸ್ವಚ್ಛತೆ ಕೊರತೆಯಿಂದ ಪುರಾತನ ಬಾವಿ ನೀರು ಬಳಸಲು ಯೋಗ್ಯವಾಗಿಲ್ಲ.
ಯಲ್ಲಪ್ಪ ನಾಯಕ ಎಂಬ ಪಾಳೆಗಾರನ ಸಹೋದರ ರಾಮಪ್ಪ ನಾಯಕ ಸುಮಾರು 350 ವರ್ಷಗಳ ಹಿಂದೆ ಈ ಬಾವಿ ನಿರ್ಮಿಸಿದ್ದರು. ಬಾವಿ ನೀರು ಸ್ವಚ್ಛ ಹಾಗೂ ರುಚಿಯಾಗಿದ್ದರಿಂದ ಈ ಬಾವಿಗೆ ರಾಮಪ್ಪನ ತೀರ್ಥ, ರಾಮತೀರ್ಥ ಬಾವಿ ಎಂಬ ಹೆಸರು ಬಂದಿತು.
ಪಟ್ಟಣದ ನೀರಿನ ಸಮಸ್ಯೆ ನೀಗಿಸಲು ಸುಮರು 45 ಕಿ.ಮೀ.ಗಳಿಂದ ಭೀಮಾ ನದಿಯಿಂದ ನೀರು ಪೂರೈಸಲಾಗುತ್ತದೆ. ಆದರೆ ಪಟ್ಟಣದಲ್ಲೇ ಇರುವ ಜಲಸಂಪನ್ಮೂಲ ಸೂಕ್ತವಾಗಿ ರಕ್ಷಿಸಿಕೊಳ್ಳುವಲ್ಲಿ ಏಕೆ ಈ ನಿರ್ಲಕ್ಷ್ಯ? ಎನ್ನುವುದು ಜನರ ಪ್ರಶ್ನೆ.
ಚಿಕ್ಕ ಪ್ರವೇಶ ದ್ವಾರ: ಬಾವಿ ಮೂರು ಕಡೆಗಳಲ್ಲಿ ಮೆಟ್ಟಿಲುಗಳಿವೆ. ಸುತ್ತಲೂ ಕಮಾನಿನ ಆಕಾರದ ವಿನ್ಯಾಸವಿದೆ. ನೀರು ಪಡೆಯಲು ನೀರು ಸೇದುವ ಕಟ್ಟೆಯಿದೆ. ಬಾವಿಯನ್ನು ಹೊರಗಿನಿಂದ ನೋಡಿದರೆ ಕೋಟೆಯಂತೆ ಕಾಣುತ್ತದೆ. ಬಾವಿ ಸುತ್ತ ಗೋಡೆಯಿದ್ದು ಚಿಕ್ಕ ದ್ವಾರದ ಮೂಲಕ ಬಾವಿ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ.
ಬರವಿದ್ದಾಗಲೂ ಬತ್ತದ ಬಾವಿ: ಒಳಗೆ ಪ್ರವೇಶಿಸಿದ ಕೂಡಲೇ ಇಂಡೋ-ಪರ್ಷಿಯನ್ ಮಾದರಿ ಸುಮಾರು 111 ಕಮಾನುಗಳಿವೆ. 52 ಕೋಣೆಗಳಿದ್ದು, ಕೋಣೆ ಛಾವಣೆಯಲ್ಲಿ ಸುಂದರ ಕತ್ತನೆಗಳಿವೆ. ಶತಮಾನಗಳ ಹಿಂದೆ ಭೀಕರ ಬರವಿದ್ದರೂ ಈ ಬಾವಿ ಬತ್ತುತ್ತಿರಲಿಲ್ಲ. ಆದರೆ ಇದೀಗ ಇದು ಅಸ್ವಚ್ಛತೆ ಆಗರವಾಗಿದ್ದರಿಂದ ಅನೈತಿಕ ಚುಟುವಟಿಕೆಗಳ ತಾಣವಾಗಿದೆ. ಕಿಡಿಗೇಡಿಗಳು ಕೆಲವು ಕೆತ್ತನೆ ವಿರೂಪಗೊಳಿಸಿದ್ದಾರೆ. ಆದ್ದರಿಂದ ಪುರಾತನ ಬಾವಿಯ ಪುನರ್ ನವೀಕರಣ ಸೇರಿದಂತೆ ಸಾರ್ವಜನಿಕರಿಗೆ ನೀರಿನ ಅನುಕೂಲ ಕಲ್ಪಿಸಲು ಈ ಬಾವಿಯ ಪುನರುಜ್ಜೀವನ ಮಾಡುವುದು ಅವಶ್ಯ.
10 ವರ್ಷದ ಹಿಂದೆ ಬಾವಿ ತೆಗೆದು ಸ್ವಚ್ಛ ಮಾಡಿದರು. ಈಗ ನೀರು ಹಸಿರಾಗಿದೆ. ಬಾವಿ ಸ್ವಚ್ಛತೆಗೆ ಆದ್ಯತೆ ನೀಡು ಮೂಲಕ ಅಲ್ಲಿರುವ ನೀರನ್ನು ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕು.
•ವಿಶ್ವನಾಥ ಗೊಲ್ಲ, ಸ್ಥಳೀಯ
ಬಾವಿಯ ಸುತ್ತ ಗೋಡೆಯಿದ್ದು, ಚಿಕ್ಕ ದ್ವಾರದ ಮೂಲಕ ಬಾವಿ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ. ಪುರಾತನ ಬಾವಿಯ ಪುನರುಜ್ಜೀವನಗೊಳಿಸಿ ಅಲ್ಲಿರುವ ನೀರನ್ನು ಬಳಸುವಂತೆ ಕ್ರಮ ಕೈಗೊಳ್ಳಬೇಕು.
•ಮಲ್ಲೇಶಪ್ಪ ಬೇಲಿ, ಹಿರಿಯರು