Advertisement

ಅಧಿಕಾರ ಪಡೆದವರು, ಸಿಗದವರು ಯಾರು ಕೂಡ ಸಂತೋಷದಿಂದಿಲ್ಲ : ಎಸ್.ಆರ್ ಪಾಟೀಲ

12:05 PM Aug 12, 2021 | Team Udayavani |

ಹುಮನಾಬಾದ : ರಾಜಕಾರಣಿಗಳು ಎಂದರೆ ಮಾತೃಹೃದಯ ಗಳಾಗಿರಬೇಕು. ಜನರ ಸಂಕಷ್ಟಕ್ಕೆ ನಾವುಗಳು ಸ್ಪಂದಿಸಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಆದರೆ, ಸದ್ಯ ಸರ್ಕಾರ ನಡೆಸುವರಲ್ಲಿ ಒಡಕು ಮೂಡಿದ್ದು, ಅಧಿಕಾರ ಪಡೆದವರು ಹಾಗೂ ಅಧಿಕಾರ ಸಿಗದವರು ಯಾರು ಕೂಡ ಸಂತೋಷದಿಂದ ಇಲ್ಲ ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇಂದು(ಗುರುವಾರ, ಆಗಸ್ಟ್ 12) ಬೀದರ್ ಜಿಲ್ಲಾ ಪ್ರವಾಸದ ಮಧ್ಯೆ ಹುಮನಾಬಾದ ಪಟ್ಟಣದ ಹಿರೇಮಠ ಸಂಸ್ಥಾನ ರೇಣುಕ ಗಂಗಾಧರ ಶಿವಚಾರ್ಯರ ದರ್ಶನ ಪಡೆದು ನಂತರ ಕುಲದೇವ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಉದಯವಾಣಿ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ಣ ಅವಧಿ ಮುಗಿಸಲಿ ಎಂದು ಹಾರೈಸುತ್ತೇನೆ. ಆದರೆ, ಇವತ್ತಿನ ಸ್ಥಿತಿಗತಿ ನೋಡಿದರೆ ಸರ್ಕಾರ ಪೂರ್ಣಾವಧಿ ಅನುಮಾನ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದ್ದ ಕಮಾಂಡಿಂಗ್ ಇಗೀನ ಮುಖ್ಯಮಂತ್ರಿಗಳಲ್ಲಿ ಕಾಣುತ್ತಿಲ್ಲ. ಬೊಮ್ಮಾಯಿ ಅವರು ನಮ್ಮ ಉತ್ತರ ಕರ್ನಾಟಕ ಭಾಗದವರೇ ಅವರು ಉತ್ತಮ ಆಡಳಿತ ನೀಡಲೆಂದು ಆಶಿಸುತ್ತೇನೆ. ಸದ್ಯ ಭಾರತೀಯ ಜನತಾ ಪಕ್ಷ ಒಡೆದ ಮನೆಯಾಗಿದೆ. ಅವರವರ ಮಧ್ಯದಲ್ಲಿ ಜಗಳ ನಡೆಯುತ್ತಿದೆ. ಕುರ್ಚಿ ಪಡೆದವರು ಹಾಗೂ ಕುರ್ಚಿ ಸಿಗದವರು ಸಂತೋಷದಲ್ಲಿ ಇಲ್ಲ ಒಟ್ಟಾರೆ ಸಧ್ಯ ಸರ್ಕಾರದಲ್ಲಿನ ಪ್ರತಿನಿಧಿಗಳು ಯಾರು ಕೂಡ ತೃಪ್ತಿಯಿಂದಿಲ್ಲ ಎಂದರು.

ಇದನ್ನೂ ಓದಿ : ಮೋದಿ ವಿರುದ್ಧ ಪಡೆ ಕಟ್ಟಲು ಪ್ರತಿಪಕ್ಷಗಳ ಪ್ರಮುಖ ನಾಯಕರಿಗೆ ಸೋನಿಯಾ ಕರೆ..!?

ರಾಜ್ಯ ಸರ್ಕಾರ ಈವರೆಗೂ ಪಿಕಪ್ ಆಗಿಲ್ಲ ಬದಲಿಗೆ ಇನ್ನೂ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ಇದ್ದಾರೆ. ಸಚಿವರಾದವರು ಒಳ್ಳೆಯ ಖಾತೆ ಸಿಕ್ಕಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಕೋವಿಡ್ ಸಂಕಷ್ಟದಲ್ಲಿ ಜನರು ಇದ್ದಾರೆ. ಇಂತಹದರ ಮಧ್ಯೆ ಸರ್ಕಾರ ಜನರ ಕಡೆ ಗಮನ ಹರಿಸದೆ ಕೇವಲ ಕುರ್ಚಿ ಕಡೆಗೆ ಗಮನ ಹರಿಸುತ್ತಿರುವುದು ರಾಜ್ಯದ ದುರಂತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೋವಿಡ್ ಸಾವಿಗೆ ಸರ್ಕಾರ ಹೊಣೆ : ರಾಜ್ಯದಲ್ಲಿ ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಅಪ್ಪಳಿಸಲಿದೆ ಎಂದು ತಜ್ಞರು ಮೊದಲೆ ಸೂಚನೆ ನೀಡಿದರು. ಆದರೂ ಕೂಡ ಸರ್ಕಾರ ಎಚ್ಚೆತ್ತುಕೊಳ್ಳುವ ಕಾರ್ಯ ಮಾಡಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. 2ನೇ ಅಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಿದ್ದು, ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೆ ಹೊಣೆಯಾಗಿದೆ ಎಂದು ಆರೋಪಿಸಿದ್ದಾರೆ.

Advertisement

ಮೇ ತಿಂಗಳಲ್ಲಿ ಬೆಡ್ ಸಮಸ್ಯೆ ಆಕ್ಸಿಜನ್ ಕೊರತೆ, ರೆಮಿಡೀಸಿವರ್ ಕಳ್ಳ ಸಂತೆಯಲ್ಲಿ ಮಾರಾಟ, ಐಸಿಯು ಬೆಡ್ ಕೊರತೆ, ವೆಂಟಿಲೇಟರ್‌ಗಳ ಕೊರತೆ ಕಾಡಿತ್ತು. ರಾಜ್ಯಕ್ಕೆ ಬೇಕಾದ ಆಕ್ಸಿಜನ್ ಪೂರೈಕೆಯಲ್ಲಿ ಕೂಡ ಸರ್ಕಾರ ವಿಫಲಗೊಂಡಿತ್ತು. ಒಂದನೇ ಅಲೆಯ ಅನುಭವ ಇರುವ ಸರ್ಕಾರ ಯಾವ ಕಾರಣಕ್ಕೆ ಎರಡನೇ ಅಲೆಯಲ್ಲಿ ನಿರ್ಲಕ್ಷತನ ವಹಿಸಿದರು ಎಂದು ಪ್ರಶ್ನಿಸಿದ್ದಾರೆ.

ಎರಡನೇ ಅಲೆಯಲ್ಲಿ ಮೃತಪಟ್ಟವರ ಅಂಕಿಸಂಖ್ಯೆಗಳು ಕೂಡ ಸರ್ಕಾರ ಕಡಿಮೆ ತೊರಿಸಿದ್ದು, ಗ್ರಾಮೀಣ ಭಾಗದಲ್ಲಿ ಕೊರೊನಾದಿಂದ ಮೃತಪಟ್ಟಿರುವ ಜನರ ಕುರಿತು ಕಾಂಗ್ರೆಸ್ ಪಕ್ಷ ಮಾಹಿತಿ ಪಡೆಯಲ್ಲಿದೆ. ಪ್ರತಿಯೊಂದು ಕುಟುಂಬಗಳಿಗೆ ಭೇಟಿನೀಡಿ ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ಸೂಕ್ತ ದಾಖಲೆಗಳೊಂದಿಗೆ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಮಾಡುತ್ತೇವೆ. ಸರಕಾರ ಮಾಡಲಾಗದ ಕೆಲಸ ನಮ್ಮ ಪಕ್ಷದಿಂದ ಮಾಡುತ್ತೇವೆ ಎಂದರು.

ಮೂರನೇ ಅಲೆಗೆ ಸಿದ್ದತೆ ಮಾಡಿಕೊಳ್ಳಿ: ರಾಜ್ಯದ ಎಲ್ಲಾಕಡೆಗಳಲ್ಲಿ ಪ್ರವಾಸ ಮಾಡುತ್ತಿರುವ ಸಂದರ್ಭದಲ್ಲಿ ಮೂರನೇ ಅಲೆ ಕುರಿತು ಸರ್ಕಾರ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿಲ್ಲ. ಮಕ್ಕಳಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ಸಾಧಯತೆ ಇದೆ ಎಂದು ತಜ್ಞನರು ಹೇಳುತ್ತಿರುವ ಸಂದರ್ಭದಲ್ಲಿ ಸರ್ಕಾರ ಸೋಂಕು ತಡೆಗಟ್ಟುವ ಕಡೆಗೆ ಗಮನ ಹರಿಸಬೇಕು. ಅಮೆರಿಕಾ ಅಧ್ಯಕ್ಷರು ಮೊದಲು ತಮ್ಮ ಪ್ರಜೆಗಳಿಗೆ ಲಸಿಕೆ ನೀಡಿದ ನಂತರ ಬೇರೆ ದೇಶಗಳಿಗೆ ನೀಡುವುದಾಗಿ ಘೋಷಣೆ ಮಾಡಿದರೆ. ಆದರೆ, ನಮ್ಮ ಪ್ರಧಾನಿಗಳು ಈ ವರೆಗೆ 195 ದೇಶಗಳಿಗೆ ಕೋವಿಡ್ ಲಸಿಕೆ ಹಂಚಿಕೆ ಪೂರೈಕೆ ಮಾಡಿದ್ದಾರೆ.

ಆದರೆ, ದೇಶದಲ್ಲಿನ ಜನರಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮೂರನೇ ಅಲೆಯ ಪ್ರಭಾವ ಜನರಮೇಲೆ ಬುಳುತ್ತದೆ. ಕೂಡಲೇ ಸರ್ಕಾರ ತೀವ್ರಗತಿಯಲ್ಲಿ ಲಸಿಕೆ ಹಾಕಿಸುವ ಕಾರ್ಯಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು, ಪಟ್ಟಣದ ಕುಲದೇವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ವಿಧಾನ್ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ ಭೇಟಿನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಅಭಿಷೇಕ್ ಪಾಟೀಲ, ರೇವಣಸಿದ್ದಪ್ಪಾ ಪಾಟೀಲ ಸನ್ಮಾನಿಸಿದರು.

ಇದನ್ನೂ ಓದಿ :  ಸೋನಿ YAY! ನಿಂದ ಕನ್ನಡದಲ್ಲಿ ಮಕ್ಕಳಿಗೆ ಮನರಂಜನಾ ಕಾರ್ಯಕ್ರಮ

Advertisement

Udayavani is now on Telegram. Click here to join our channel and stay updated with the latest news.

Next