Advertisement

BJP-JDS: ಮೈತ್ರಿಗೆ ಬಿಜೆಪಿಯಿಂದಲೂ ಪ್ರತಿರೋಧದ ದನಿ

11:17 PM Oct 06, 2023 | Team Udayavani |

ಬೆಂಗಳೂರು: ಜೆಡಿಎಸ್‌ ಜತೆಗಿನ ಮೈತ್ರಿ ಬಗ್ಗೆ ಈಗ ಬಿಜೆಪಿಯಿಂದಲೂ ಸಣ್ಣ ಪ್ರತಿರೋಧದ ಧ್ವನಿ ಪ್ರಕಟವಾಗಿದ್ದು, ನಮ್ಮನ್ನು ಹೊರಗಿಟ್ಟು ಚರ್ಚೆ ಮಾಡಿದ್ದಾರೆ ಎಂದು ಸಂಸದ ಡಿ.ವಿ.ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕೇಂದ್ರ ಯಾವುದೇ ಸಂದರ್ಭಗಳಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳುತ್ತದೆ. ಎನ್‌ಡಿಎ ಮೈತ್ರಿಕೂಟವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್‌ ಜತೆ ಚರ್ಚೆಯಾಗಿದೆ. ಬೇರೆ ಬೇರೆ ರಾಜ್ಯಗಳಲ್ಲೂ ಮತ ಕ್ರೋಢೀಕರಣ ಎಂದು ಆಲೋಚನೆ ಮಾಡಲಾಗುತ್ತಿದೆ. ಆದರೆ ಎಲ್ಲರನ್ನೂ ಹೊರಗಿಟ್ಟು ಚರ್ಚೆ ಮಾಡಿ¨ªಾರೆ. ಹಾಗಿದ್ದರೂ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ನೇಮಕ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಸಂದರ್ಭದಲ್ಲಿ ಏನು ಆಗಬೇಕಿತ್ತೋ ಆಗಿಲ್ಲ. ಇದು ಕಾರ್ಯಕರ್ತರ ಮೇಲೆ ಪ್ರಭಾವ ಬೀರಿದೆ. ಏನಪ್ಪ ನಮ್ಮ ಪಕ್ಷದಲ್ಲಿ ಹೀಗಾಯಿತು ಎಂಬ ಬೇಸರ ಇದೆ. ಆದಷ್ಟು ಬೇಗ ಈ ಪ್ರಕ್ರಿಯೆಯಾಗಬೇಕು. ನಾನು ಈಗಲೂ ಹೈಕಮಾಂಡ್‌ ಶೀಘ್ರವೇ ನೇಮಕ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.ಸೋತ ಮೇಲೆ ಬಿಜೆಪಿ ರಾಜ್ಯ ನಾಯಕರ ಜತೆ ಚರ್ಚೆಯಾಗುತ್ತಿಲ್ಲ ಎಂಬ ಸಣ್ಣ ನೋವಿದೆ. ರಾಷ್ಟ್ರೀಯ ವಿಚಾರದ ಬಗ್ಗೆ ತೀರ್ಮಾನ ಮಾಡುವಾಗ ನಮ್ಮನ್ನು ಹೊರಗಿಡುತ್ತಾರೆ ಎಂದರು.
ರಾಹುಲ್‌ ಗಾಂಧಿಯವರನ್ನು ರಾವಣನಿಗೆ ಹೋಲಿಸಿದ್ದಕ್ಕೆ, ಬಿಜೆಪಿಯಲ್ಲಿ ಕೀಚಕ ಮತ್ತಿತರರು ಇದ್ದಾರೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿ, ವ್ಯಕ್ತಿಯ ಚಾರಿತ್ರ್ಯ ಹರಣದ ಮೂಲಕವೇ ರಾಜಕಾರಣ ಬೆಳೆಸುತ್ತೇವೆ ಎಂಬ ಪ್ರವೃತ್ತಿ ಹೆಚ್ಚಾಗಿದೆ. ಆಡಳಿತ ನಡೆಸುವವರ ವಿರುದ್ಧದ ಟೀಕೆ-ಟಿಪ್ಪಣಿಗೂ ಮಿತಿ ಇದೆ. ಸಾಮಾಜಿಕ ಜೀವನದಲ್ಲಿ ವ್ಯಕ್ತಿಯ ಚಾರಿತ್ರ್ಯ ಹರಣ ಮಾಡಬಾರದು. ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದು ಕಡಿಮೆಯಾದರೆ ಒಳ್ಳೆಯದು ಎಂದರು.

ಎಸ್‌.ಟಿ.ಸೋಮಶೇಖರ್‌ ಅವರು ಬಹಿರಂಗವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ, ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸುತ್ತೇವೆ.
-ಡಿ.ವಿ.ಸದಾನಂದ ಗೌಡ, ಸಂಸದ

ಎಸ್‌.ಟಿ.ಸೋಮಶೇಖರ್‌ ಅಸಮಾಧಾನದ ಬಗ್ಗೆ ಎಲ್ಲಿ ಚರ್ಚೆಯಾಗಬೇಕೋ ಅಲ್ಲಿ ಆಗುತ್ತದೆ.
-ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next