Advertisement

ವೈದ್ಯೆ-ಉಪನ್ಯಾಸಕಿಯಾದರೂ ಇಂಗಿಲ್ಲ ಕಲಿಕೆ ಹಂಬಲ

10:03 AM Aug 31, 2019 | Suhan S |

ಹುಬ್ಬಳ್ಳಿ: ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ, ತಜ್ಞ ವೈದ್ಯೆ ಇಷ್ಟಿದ್ದರೂ ಅವರಿಗೆ ಜ್ಞಾನಾರ್ಜನೆಯ ಹಂಬಲ ಕುಗ್ಗಿಲ್ಲ. ಹೊಸ ವಿಷಯಗಳ ಕಲಿಕೆಗಾಗಿ ತನ್ನದೇ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾಗಿ ಕಾಲೇಜಿಗೆ ಸೇರಿದ್ದಾರೆ. ಚಿತ್ರಕಲೆ, ಯೋಗದಲ್ಲಿ ಸಾಧನೆ ತೋರಿದ್ದಾರೆ.

Advertisement

ಧಾರವಾಡದ ಡಾ| ಸಾಧನಾ ಚೌಗುಲಾ ಅವರು ಬಹುಮುಖ ಪ್ರತಿಭೆಯಾಗಿದ್ದು, ಆಸಕ್ತಿ ಇರುವ ವಿಷಯಗಳ ಪರಿಣಿತಿಗೆ ವಯೋಮಾನ, ಹುದ್ದೆಗಳು ಅಡ್ಡಿಯಾಗದು ಎಂಬುದನ್ನು ತೋರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಚಿಕ್ಕಂದಿನಿಂದಲೂ ಮನದಲ್ಲಿದ್ದ ಚಿತ್ರಕಲೆ ಪೋಷಿಸುವ ಕೆಲಸ ಮಾಡಿದ್ದು, ಉತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲ ಉತ್ತಮ ಯೋಗಪಟುವಾಗಿದ್ದಾರೆ. ಹು-ಧಾ ಸೇರಿದಂತೆ ವಿವಿಧೆಡೆಯ ಹೋಮಿಯೋಪಥಿ ವೈದ್ಯರು ಇವರ ಶಿಷ್ಯರಾಗಿದ್ದಾರೆ.

ಚಿತ್ರಕಲೆಯಲ್ಲಿ ರ್‍ಯಾಂಕ್‌: ಚಿತ್ರಕಲೆ ಬಗ್ಗೆ ಡಾ| ಸಾಧನಾ ಅವರಿಗೆ ಚಿಕ್ಕಂದಿನಿಂದಲೇ ಆಸಕ್ತಿ ಇತ್ತಾದರೂ, ವ್ಯವಸ್ಥಿತ ಕಲಿಕೆಯ ಉದ್ದೇಶ ಹೊಂದಿದ್ದರು. ಇದಕ್ಕಾಗಿ ಹೋಮಿಯೋಪಥಿ ಶಿಕ್ಷಣದ ತಮ್ಮ ಶಿಷ್ಯೆಯೊಬ್ಬರ ಸಲಹೆಯೊಂದಿಗೆ ಧಾರವಾಡದ ಸರಕಾರಿ ಆರ್ಟ್‌ ಸ್ಕೂಲ್ನಲ್ಲಿ ಲಲಿತ ಕಲಾ ಶಿಕ್ಷಣಕ್ಕೆ ಸೇರಿದ್ದರು. ಮೂರು ವರ್ಷಗಳ ಪದವಿಯಲ್ಲಿ ವಿವಿಗೆ ಮೊದಲ ರ್‍ಯಾಂಕ್‌ ಪಡೆಯುವ ಮೂಲಕ ಕಲಾ ಸಾಧನೆ ಅಭಿವ್ಯಕ್ತಗೊಳಿಸಿದ್ದರು.

ಲಲಿತ ಕಲೆಯಲ್ಲಿ ವ್ಯಾಸಂಗ ವೇಳೆಯಲ್ಲಿಯೇ ವಿವಿಧ ಕಡೆ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದರು. 2019ರಲ್ಲಿ ಧಾರವಾಡದಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಡಾ| ಸಾಧನಾ ಅವರ ಚಿತ್ರಕಲೆಗಳಲ್ಲಿ ಮುಖ್ಯವಾಗಿ ಆಧ್ಯಾತ್ಮ ಅಡಕವಾಗಿದೆ. ಸ್ತ್ರೀ ಸಂವೇದಿ ಚಿತ್ರಗಳು ಹೆಚ್ಚಿನ ರೀತಿಯಲ್ಲಿ ಕಾಣಸಿಗುತ್ತವೆ. ಇದುವರೆಗೆ ಸುಮಾರು 300ಕ್ಕೂ ಅಧಿಕ ಕಲಾಕೃತಿಗಳನ್ನು ಅವರು ರಚಿಸಿದ್ದಾರೆ. ಚಿತ್ರಕಲೆ ಅಲ್ಲದೆ ಕೌದಿ ಕಲೆಯಲ್ಲೂ ನೈಪುಣ್ಯತೆ ಪಡೆದಿದ್ದು, ಕೌದಿ ಕಲೆ ಕುರಿತ ತರಬೇತಿ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗುತ್ತಿದ್ದಾರೆ.

Advertisement

ಯೋಗ ಸಾಧನೆ: ಯೋಗ ಶಿಕ್ಷಣಕ್ಕೆ ಮುಂದಾದ ಡಾ| ಸಾಧನಾ ಅವರು ಕವಿವಿಯಲ್ಲಿ ಯೋಗ ಶಿಕ್ಷಣದ ಡಿಪ್ಲೊಮಾ ಪದವಿಗೆ ಪ್ರವೇಶ ಪಡೆದಿದ್ದರು. ಯೋಗ ಗುರು ಈಶ್ವರ ಬಸವರಡ್ಡಿ ಅವರಿಂದ ತರಬೇತಿ ಪಡೆದು, ಎರಡನೇ ರ್‍ಯಾಂಕ್‌ ವಿಜೇತರಾಗಿ ಹೊರಹೊಮ್ಮಿದ್ದರು!

ಪದವಿ-ಸ್ನಾತಕೋತ್ತರ ಪದವಿ ಪಡೆದು ಉದ್ಯೋಗಕ್ಕೆ ಸೇರಿದರೆ ಸಾಕು, ಅದೆಷ್ಟೋ ಜನರು ಇಲ್ಲಿಗೆ ನಮ್ಮ ಕಲಿಕೆ ಮುಗಿಯಿತು. ಇನ್ನೇನಿದ್ದರು ಉದ್ಯೋಗ, ಕುಟುಂಬ ಎನ್ನುವ ಭಾವಕ್ಕೆ ಮುಂದಾಗುತ್ತಾರೆ. ಆದರೆ, ಡಾ| ಸಾಧನಾ ಚೌಗುಲಾ ಅವರು ವೈದ್ಯಕೀಯ ಕಾಲೇಜು ಉಪನ್ಯಾಸಕಿ, ತಜ್ಞ ವೈದ್ಯೆಯಾಗಿದ್ದರೂ ಕಲಿಕೆ ಉತ್ಸಾಹ ಕೈ ಬಿಟ್ಟಿರಲಿಲ್ಲ. ತಾವೇ ಕಲಿಸಿದ ಶಿಷ್ಯರೊಂದಿಗೆ ಇನ್ನೊಂದು ಕೋರ್ಸ್‌ ಕಲಿಯಲು ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದರು. ಹಮ್ಮು-ಬಿಮ್ಮು ಬದಿಗಿರಿಸಿ ಶಿಷ್ಯರೊಟ್ಟಿಗೆ ವಿದ್ಯಾರ್ಥಿಯಾಗಿ ಕಲಿತರು.

Advertisement

Udayavani is now on Telegram. Click here to join our channel and stay updated with the latest news.

Next