Advertisement

Pollution: ದೆಹಲಿಯಲ್ಲಿ ಪುನಃ ಸಮ-ಬೆಸ ಯೋಜನೆ ಜಾರಿ

09:49 PM Nov 06, 2023 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಪರಿಸ್ಥಿತಿ ಗಂಭೀರವಾಗಿದೆ. ದೀಪಾವಳಿಯ ನಂತರ ನ.13ರಿಂದ 20ರವರೆಗೆ ಸಮ-ಬೆಸ ಯೋಜನೆ ಜಾರಿ ಮಾಡಿ ದೆಹಲಿ ಸರ್ಕಾರ ಆದೇಶಿಸಿದೆ.

Advertisement

ನ.20ರ ನಂತರವೂ ಇದು ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಸಮ ಸಂಖ್ಯೆಯ ದಿನದಂದು ಸಮ ಸಂಖ್ಯೆಯ ನಂಬರ್‌ಪ್ಲೇಟ್‌ ಹೊಂದಿರುವ ವಾಹನಗಳು ಮಾತ್ರ ರಸ್ತೆಗೆ ಇಳಿಯಬೇಕು. ಮತ್ತೂಂದು ದಿನ ಬೆಸ ಸಂಖ್ಯೆಯ ವಾಹನಗಳು ಮಾತ್ರ ರಸ್ತೆಗಿಳಿಯಬೇಕು’ ಎಂದು ದೆಹಲಿ ಪರಿಸರ ಸಚಿವ ಗೋಪಾಲ್‌ ರೈ ತಿಳಿಸಿದ್ದಾರೆ.

“ಇದೇ ವೇಳೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಶೇ.50ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವ ಕುರಿತು ನಿರ್ಧಾರವನ್ನು ದೀಪಾವಳಿ ನಂತರ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ. “ಬೋರ್ಡ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ 10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಇರುವುದಿಲ್ಲ’ ಎಂದೂ ತಿಳಿಸಿದ್ದಾರೆ. “ದೆಹಲಿಯ ಬೀದಿ ಬದಿಗಳಲ್ಲಿ ಧೂಳಿನ ದಪ್ಪ ಪದರ ಸೃಷ್ಟಿಯಾಗಿದ್ದು, ಕೂಡಲೇ ಎಲ್ಲೆಡೆ ನೀರು ಹಾಕಿ ಸ್ವತ್ಛಗೊಳಿಸಿ. ಧೂಳು ಹಬ್ಬದಂತೆ ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೆನಾ ಸೂಚಿಸಿದ್ದಾರೆ.

ವಾಯು ಗುಣಮಟ್ಟ ಸುಧಾರಣೆ:
ಸೋಮವಾರ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ಸರಾಸರಿ 421 ದಾಖಲಾಗಿದೆ. ಭಾನುವಾರ ಎಕ್ಯೂಐ 454 ಇತ್ತು. ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ಗುಣಮಟ್ಟ ಸುಧಾರಣೆ ಕಂಡಿದೆ.

ಮುಂಬೈಗೆ ಕೇಂದ್ರ ತಂಡ:
ಇನ್ನೊಂದೆಡೆ, ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ವಾಯು ಮಾಲಿನ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮಾಲಿನ್ಯ ತಗ್ಗಿಸಲು ಸ್ಥಳೀಯ ಆಡಳಿತ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಶೀಘ್ರವೇ ಮುಂಬೈಗೆ ಭೇಟಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next