ಹೊಸದಿಲ್ಲಿ : ‘ಮಹಿಳೆಯರನ್ನು ನಿಕೃಷ್ಟವಾಗಿ, ಅನುಚಿತವಾಗಿ ಕಾಣುವ ಪ್ರವೃತ್ತಿ ಕೇವಲ ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ, ಹಿಂದು, ಸಿಕ್ಖ್, ಕ್ರೈಸ್ತ ಮುಂತಾಗಿ ಎಲ್ಲ ಸಮುದಾಯಗಳಲ್ಲಿ ಇದೆ. ಪ್ರಾಚೀನ ಕಾಲದಲ್ಲಿ ಶ್ರೀ ರಾಮಚಂದ್ರ ಕೂಡ ತನ್ನ ಪತ್ನಿಯನ್ನು ಶಂಕಿಸಿ ಕಾಡಿಗೆ ಅಟ್ಟಿ ಆಕೆಯನ್ನು ತೊರೆದಿದ್ದ ಉದಾಹರಣೆ ಇದೆ; ಅಂತಿರುವಾಗ ಮಹಿಳೆಯರ ಸ್ಥಿತಿ-ಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸ್ವತಃ ಬದಲಾಗಬೇಕಾದ ಅಗತ್ಯವಿದೆ’ ಎಂದು ರಾಜ್ಯಸಭೆಯಲ್ಲಿನ ಹಿರಿಯ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ಹೇಳಿರುವ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿದೆ.
“ಮೋದಿ ಸರಕಾರಕ್ಕೆ ಮುಸ್ಲಿಂ ಮಹಿಳೆಯರನ್ನು ಉದ್ಧರಿಸುವ ಬಗ್ಗೆ ನಿಜವಾದ ಕಾಳಜಿ, ಆಸಕ್ತಿ ಇಲ್ಲ. ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಅಧಿಕಾರ ನೀಡುವುದು, ಅವರ ಸಶಕ್ತೀಕರಣಕ್ಕೆ ಯತ್ನಿಸುವುದು ಕೇವಲ ಕಣ್ಣೊರೆಸುವ ಭರವಸೆಗಳಾಗಿವೆ’ ಎಂದು ಹುಸೇನ್ ದಳಾವಯಿ ಹೇಳಿದ್ದರು.
ತ್ರಿವಳಿ ತಲಾಕ್ ಮಸೂದೆಯಲ್ಲಿ ಮುಸ್ಲಿಂ ಪುರುಷರಿಗೆ ಜಾಮೀನು ಪಡೆಯುವ ಅವಕಾಶ ಸಹಿತ ಮೂರು ತಿದ್ದುಪಡಿಗಳಿಗೆ ಮೋದಿ ಸಚಿವ ಸಂಪುಟ ಒಪ್ಪಿರುವುದು ಏನೇನೂ ಸಾಲದು; ಈ ಮಸೂದೆಗೆ ಇನ್ನಷ್ಟು ತಿದ್ದುಪಡಿಗಳನ್ನು ತರಬೇಕಾಗಿದೆ ಎಂದು ಹುಸೇನ್ ಹೇಳಿದರು.
ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಮಸೂದೆ ಅಥವಾ ತ್ರಿವಳಿ ತಲಾಕ್ ಮಸೂದೆಯು ತ್ರಿವಳಿ ತಲಾಕ್ ನೀಡುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುತ್ತದೆ ಮತ್ತು ತ್ರಿವಳಿ ತಲಾಕ್ ನೀಡುವ ಮುಸ್ಲಿಂ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.
ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಬಗ್ಗೆ ತಾನಾಡಿದ ಮಾತುಗಳು ವಿವಾದಕ್ಕೆ ಗುರಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಂಸದ ಹುಸೇನ್, “ನಾನು ಕೂಡ ಶ್ರೀ ರಾಮಚಂದ್ರ ದೇವರ ಭಕ್ತನೇ; ಆದರೆ ರಾಜ್ಯಸಭೆಯಲ್ಲಿ ನಾನು ಏನು ಹೇಳಲು ಹೊರಟಿದ್ದೆಂದರೆ ಪ್ರಾಚೀನ ಕಾಲದಲ್ಲೂ ಸೀತೆಯಂತಹ ಮಹಿಳೆಯರು ಪುರುಷ ಪ್ರಧಾನ ಸಮಾಜದಲ್ಲಿ ಹಿಂಸೆ, ಸಂಕಷ್ಟಗಳಿಗೆ ಗುರಿಯಾಗುತ್ತಲೇ ಬಂದಿದ್ದಾರೆ ಎನ್ನುವುದೇ ಆಗಿತ್ತು’ ಎಂದು ಹೇಳಿದರು.
ಮಹಾರಾಷ್ಟ್ರದ ಕಾಂಗ್ರೆಸ್ ಸಂಸದರಾಗಿರುವ ಹುಸೇನ್ ಅವರು “ಯಾವುದೇ ಧರ್ಮವನ್ನು ಅವಹೇಳನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ಹುಸೇನ್ ಅವರು ಕಳೆದ ವರ್ಷ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು “ತ್ರಿವಳಿ ತಲಾಕನ್ನು ಅಪರಾಧೀಕರಿಸುವುದು ಅತ್ಯಂತ ಸಮಸ್ಯಾತ್ಮಕ ಕ್ರಮ’ ಎಂದು ಎಚ್ಚರಿಸಿದ್ದರು.