ಜಿನೇವಾ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʻಕಾಂತಾರʼದ ಯಶಸ್ಸು ಸ್ವಿಡ್ಜರ್‌ಲ್ಯಾಂಡ್‌ಗೂ ತಲುಪಿದೆ. ಗುರುವಾರ ಜಿನೆವಾಲ್ಲೂ ʻಕಾಂತಾರʼ ಪ್ರದರ್ಶನ ಕಂಡಿದ್ದು, ತುಳುನಾಡಿನ ದೈವಾರಾಧನೆಯ ಗಗ್ಗರದ ಸದ್ದು ದೂರದ ಸ್ವಿಡ್ಜರ್‌ಲ್ಯಾಂಡ್‌ನಲ್ಲೂ ಪ್ರತಿಧ್ವನಿಸಿದೆ.
ಮೊನ್ನೆಯಷ್ಟೇ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾಡಿದ್ದ ಭಾಷಣ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಬಳಿಕ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ʻಕಾಂತಾರʼ ಚಿತ್ರ ವಿಶೇಷ ಪ್ರದರ್ಶನ ಕಂಡಿದೆ. ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಟು ಯುಎನ್ ಹಾಗೂ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದವರು ʻಕಾಂತಾರʼ ಸಿನೆಮಾದ ವಿಶೇಷ ಸ್ಕ್ರೀನಿಂಗ್ ಆಯೋಜಿಸಿತ್ತು.
ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಹೊಂದಿರುವ ಜಿನೇವಾ ನಗರದ ಬಲೆಕ್ಸರ್ಟ್ ಮಾಲ್‌ನಲ್ಲಿ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕನ್ನಡದಲ್ಲೇ ಈ ಚಿತ್ರ ಪ್ರದರ್ಶನ ಕಂಡಿದ್ದು ಇಂಗ್ಲೀಷ್ ಸಬ್‌ಟೈಟಲ್ ಹೊಂದಿತ್ತು. ಈ ಕಾರ್ಯಕ್ರಮಕ್ಕೆ ಸ್ವತಃ ರಿಷಬ್ ಶೆಟ್ಟಿ ಕೂಡಾ ಹಾಜರಿದ್ದರು.
ಇದೀಗ ʻಕಾಂತಾರʼ ಯಶಸ್ವಿ ಪ್ರದರ್ಶನ ಕಂಡ ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ರಿಷಬ್ ,ʻ ಜಿನೆವಾದ್ಲಿ ನಮ್ಮ ಕಾಂತಾರ ಸಿನೆಮಾದ ವಿಶೆಷ ಪ್ರದರ್ಶನ… ಪ್ರಪಂಚದಾದಿ ಇರುವ ಗಣ್ಯಾತಿ ಗಣ್ಯರು ಸಿನೆಮಾ ನೋಡಿ ಅವರ ಸಂದೇಶವನ್ನು ಗ್ರಹಿಸಿ ಪ್ರಶಂಸಿಸಿದ ಪರಿ ಶ್ಲಾಘನೀಯ. ಇದಕ್ಕೆ ಕಾರಣರಾದ ಹೆಮ್ಮೆಯ ಕನ್ನಡಿಗರಿಗೆ ಅಭಿನಂದನೆಗಳುʼ ಎಂದು ಟ್ವೀಟ್ ಮಾಡಿದ್ದಾರೆ.