Advertisement

Karnataka: ಸೌಲಭ್ಯ ಇಲ್ಲದಿದ್ದರೂ ನವಜಾತ ಶಿಶುಗಳ ಶ್ರವಣ ಪರೀಕ್ಷೆ ಕಡ್ಡಾಯ!

09:06 PM Jul 09, 2023 | Team Udayavani |

ಬೆಂಗಳೂರು: ಆರೋಗ್ಯ ಇಲಾಖೆಯ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಶ್ರವಣ ಸಾಮರ್ಥ್ಯ ಪರೀಕ್ಷೆಗೆ ಅಗತ್ಯವಿರುವ ಮೂಲ ವ್ಯವಸ್ಥೆಗಳು ಇಲ್ಲದಿದ್ದರೂ ನವಜಾತ ಶಿಶುಗಳಿಗೆ ಕಡ್ಡಾಯ ಶ್ರವಣ ತಪಾಸಣೆಗೆ ಆದೇಶ ಹೊರಡಿಸಲಾಗಿದ್ದು, ಇದು ಹಾಸ್ಯಾಸ್ಪದವಾಗಿದೆ.

Advertisement

ರಾಜ್ಯ ಆರೋಗ್ಯ ಇಲಾಖೆ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿಯಂತ್ರಣ, ನಿವಾರಣ ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸುವ ಶಿಶುಗಳಿಗೆ ಕಡ್ಡಾಯವಾಗಿ ಸರಕಾರದ ಮಾರ್ಗಸೂಚಿ ಕಾರ್ಯ ವಿಧಾನಗಳಂತೆ ಶ್ರವಣ ತಪಾಸಣೆ ನಡೆಸಿ, ಶ್ರವಣ ದೋಷವುಳ್ಳ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಸೂಕ್ತ ವೈದ್ಯಕೀಯ ನೆರವು ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲು ಸೂಚಿಸಲಾಗಿದೆ. ಸೌಲಭ್ಯಗಳೇ ಇಲ್ಲದೆ ಪರೀಕ್ಷೆ ಹೇಗೆ ಎಂಬುದು ಈಗಿನ ಜಿಜ್ಞಾಸೆ.

ವ್ಯವಸ್ಥೆಯೇ ಇಲ್ಲ!
ಪ್ರಸ್ತುತ ರಾಜ್ಯದಲ್ಲಿ 23 ಜಿಲ್ಲಾಸ್ಪತ್ರೆಗಳು, 175 ತಾಲೂಕು ಆಸ್ಪತ್ರೆ, 2,206 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಅದರಲ್ಲಿ ಪ್ರಸ್ತುತ ಜಿಲ್ಲಾಸ್ಪತ್ರೆ ಹಾಗೂ 22 ತಾಲೂಕು ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಶ್ರವಣ ಸಾಮರ್ಥ್ಯವನ್ನು ಪರಿಶೀಲಿಸುವ ಒಎಇ ಯಂತ್ರ ಲಭ್ಯವಿದೆ. ಉಳಿದಂತೆ ಸುಮಾರು (ಹೆರಿಗೆ ವ್ಯವಸ್ಥೆಗಳಿರುವ) 150 ತಾಲೂಕು, 10 ಪ್ರಾಥಮಿಕ ಕೇಂದ್ರದಲ್ಲಿ ಶ್ರವಣ ಸಾಮರ್ಥ್ಯವನ್ನು ಪರೀಕ್ಷಿಸುವ ಯಂತ್ರಗಳೇ ಇಲ್ಲ.

ಹೈರಿಸ್ಕ್ ಪ್ರಗ್ನೆನ್ಸಿಯಲ್ಲಿ ಹೆಚ್ಚು ದೋಷ
ರಾಜ್ಯದಲ್ಲಿ ಹೈರಿಸ್ಕ್ ಪ್ರಗ್ನೆನ್ಸಿ ಹಾಗೂ ತೀವ್ರ ತರಹದ ಅನಾರೋಗ್ಯ ಸಮಸ್ಯೆಯಿಂದ ಜನಿಸುತ್ತಿರುವ 1,000 ಮಕ್ಕಳಲ್ಲಿ ಸುಮಾರು 8ರಿಂದ 10 ಮಕ್ಕಳಲ್ಲಿ ಶ್ರವಣ ದೋಷ ಪತ್ತೆಯಾಗುತ್ತಿದೆ. ಸಾಮಾನ್ಯ ಹೆರಿಗೆ ಹಾಗೂ ಆರೋಗ್ಯಯುತವಾಗಿ ಜನಿಸುವ 1000 ಮಕ್ಕಳಲ್ಲಿ 3 ರಿಂದ 4ಮಕ್ಕಳಲ್ಲಿ ಶ್ರವಣ ದೋಷ ಪತ್ತೆಯಾಗುತ್ತಿದೆ.

ಪರೀಕ್ಷೆ ಹೇಗೆ?
ಯಾವುದೇ ಆರೋಗ್ಯ ಸಂಸ್ಥೆಯಲ್ಲಿ ಶಿಶು ಜನಿಸಿದ 48 ಗಂಟೆ ಅಥವಾ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಕಡ್ಡಾಯವಾಗಿ ಶ್ರವಣ ಸಾಮರ್ಥ್ಯ ಪರೀಕ್ಷೆ ಮಾಡಬೇಕಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಕೆಪಿಎಂಇ ಮೂಲಕ ಕಡ್ಡಾಯವಾಗಿಸಿದೆ.

Advertisement

ಪರೀಕ್ಷೆ ನಿರ್ಲಕ್ಷ್ಯ
ಶ್ರವಣ ಸಾಮರ್ಥ್ಯ ಪರೀಕ್ಷಾ ವ್ಯವಸ್ಥೆ ಇರದ ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಪರೀಕ್ಷೆ ಹೇಗೆ ಮಾಡಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ಇದುವರೆಗೆ ಕೆಲವು ಪ್ರಾಥಮಿಕ ಹಾಗೂ ಸಮುದಾಯ ಆಸ್ಪತ್ರೆಗಳಲ್ಲಿ ಶ್ರವಣ ಸಾಮರ್ಥ್ಯ ಪರೀಕ್ಷೆಗಾಗಿ ಸಮೀಪದ ಸರಕಾರಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದರು. ಅನುಕೂಲಸ್ಥ ಹಾಗೂ ಆರೋಗ್ಯವಾಗಿರುವ ತಾಯಂದಿರು ಮಾತ್ರ ಮಗುವನ್ನು ಕೂಡಲೇ ಪರೀಕ್ಷೆಗೆ ನಿಗದಿತ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡಿಸುತ್ತಾರೆ. ಉಳಿದಂತೆ ಹೆಚ್ಚಿನ ಪೋಷಕರು ನವಜಾತ ಶಿಶುವನ್ನು ಹಿಡಿದುಕೊಂಡು ದೂರ ಸಂಚರಿಸುವುದು ಅಪಾಯ ಎನ್ನುವ ಆತಂಕದಲ್ಲಿ ಪರೀಕ್ಷೆಯನ್ನು ನಿರ್ಲಕ್ಷಿಸುತ್ತಾರೆ.

ಎಲ್ಲೆಡೆಯೂ ವ್ಯವಸ್ಥೆ ಆಗಲಿ
ಹೆರಿಗೆ ಬಳಿಕ ದೂರದ ಪ್ರದೇಶದಲ್ಲಿ ಜಿಲ್ಲಾಸ್ಪತ್ರೆಗಳಿಗೆ ತೆರಳಿ ನವಜಾತ ಶಿಶು ಶ್ರವಣ ಸಾಮರ್ಥ್ಯ ಪರೀಕ್ಷೆ ನಡೆಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಹೆರಿಗೆ ಸೌಲಭ್ಯಗಳಿರುವ ಪ್ರತಿಯೊಂದು ಸರಕಾರಿ ಆರೋಗ್ಯ ಕೇಂದ್ರದಲ್ಲಿ ಒಎಇ ಯಂತ್ರವನ್ನು ಆಳವಡಿಸಿಕೊಳ್ಳಬೇಕು.

ನವಜಾತ ಶಿಶುಗಳಿಗೆ ಕಡ್ಡಾಯವಾಗಿ ಶ್ರವಣ ಸಾಮರ್ಥ್ಯ ಪರೀಕ್ಷೆ ಮಾಡಬೇಕಾಗಿದೆ. ಈ ಕುರಿತ ಸೌಲಭ್ಯಗಳು ಇಲ್ಲದ ತಾಲೂಕು ಹಾಗೂ ಪ್ರಾಥಮಿಕ ಕೇಂದ್ರದಲ್ಲಿ ಶೀಘ್ರ ಶ್ರವಣ ಸಾಮರ್ಥ್ಯ ಪತ್ತೆ ಯಂತ್ರ ಪೂರೈಸಲಾಗುವುದು. ಪರೀಕ್ಷೆ ಕಡ್ಡಾಯವಾದ ಹಿನ್ನೆಲೆಯಲ್ಲಿ ಪರೀಕ್ಷೆಯಿಂದ ದೂರ ಉಳಿದ ನವಜಾತ ಶಿಶುವಿನ ಲಸಿಕಾ ಪ್ರಕ್ರಿಯೆ ಸಂದರ್ಭದಲ್ಲಿ ತಪಾಸಣೆ ಮಾಡಲಾಗುತ್ತದೆ.
-ಡಾ| ರಣದೀಪ್‌, ಆಯುಕ್ತರು, ಆರೋಗ್ಯ ಇಲಾಖೆ

ತೃಪ್ತಿ ತುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next