Advertisement

Pandeshwar: ರೈಲು ಹೋದರೂ ಗೇಟು ತೆರೆಯುವುದಿಲ್ಲ!

02:42 PM Aug 23, 2024 | Team Udayavani |

ಪಾಂಡೇಶ್ವರ: ಮಂಗಳೂರು ಸೆಂಟ್ರಲ್‌ನಿಂದ ಗೂಡ್ಸ್‌ಶೆಡ್‌ಗೆ ಖಾಲಿ ಪ್ಯಾಸೆಂಜರ್‌ ರೈಲುಗಳ ಎಡೆಬಿಡದ ಓಡಾಟದ ಕಾರಣದಿಂದ ಪಾಂಡೇಶ್ವರ, ಹೊಗೆಬಜಾರ್‌ನಲ್ಲಿ ಪ್ರಯಾಣಿಕ ವಾಹನಗಳಿಗೆ ಎದುರಾಗಿರುವ ಸಂಕಷ್ಟ ಒಂದೆರಡಲ್ಲ! ಅವರ ಓಡಾಟಕ್ಕೆ ಇಲ್ಲಿ ಸಾಕಷ್ಟು ತೊಂದರೆ ಇದೆ. ಅದರ ಜತೆಗೆ ರೈಲು ದಾಟಿ ಹೋದ ಬಳಿಕವೂ ತುಂಬ ಹೊತ್ತು ಇಲ್ಲಿ ಗೇಟನ್ನು ತೆಗೆಯುವುದಿಲ್ಲ!

Advertisement

ಪಾಂಡೇಶ್ವರದಲ್ಲಿ ಗೂಡ್ಸ್‌, ಪ್ಯಾಸೆಂಜರ್‌ ರೈಲುಗಳು/ಎಂಜಿನ್‌ಗಳು ದಿನಕ್ಕೆ ಕನಿಷ್ಠ 16 ಸಲವಾದರೂ ಈ ಹಳಿಯಲ್ಲಿ ಬಂದರ್‌ನ ಗೂಡ್ಸ್‌ಶೆಡ್‌ಗೆ ಓಡಾಡುತ್ತಿದೆ. ರೈಲು ಸಂಚರಿಸುವ ವೇಳೆ ರಸ್ತೆ ಸಂಚಾರ ನಿಲ್ಲಿಸಲು ಕಬ್ಬಿಣದ ಗೇಟ್‌ ಇಲ್ಲಿ ಮುಚ್ಚಲಾಗುತ್ತದೆ.

ರೈಲು ಹೋದರೂ ಗೇಟ್‌ ತೆಗೆಯುವುದಿಲ್ಲ!
ಪಾಂಡೇಶ್ವರದಲ್ಲಿ ರೈಲು ಬರುವ ಹಲವಾರು ನಿಮಿಷಗಳ ಮುನ್ನವೇ ಗೇಟ್‌ ಹಾಕುತ್ತಾರೆ. ಅಂದರೆ, ರೈಲು ಮಂಗಳೂರು ನಿಲ್ದಾಣದಿಂದ ಹೊರಡಲು ಸಿದ್ದವಾಗುವ ಹೊತ್ತಿಗೇ ಇಲ್ಲಿ ಗೇಟ್‌ ಹಾಕಲಾಗುತ್ತದೆ. ರೈಲು ಗೇಟು ದಾಟಿ ಹೋದ ಬಳಿಕ ಕೆಲವು ನಿಮಿಷದವರೆಗೂ ಗೇಟ್‌ ತೆಗೆಯುವುದಿಲ್ಲ ಎಂಬುದು ವಾಹನ ಸವಾರರ ದೂರು. ರೈಲು ಬರುವ ಮೊದಲು ಕಾಯಬೇಕು, ನಂತರವೂ ಯಾಕೆ ಇಷ್ಟು ವಿಳಂಬ ಎನ್ನುವುದು ಜನರ ಆಕ್ರೋಶ.

ಆದರೆ ಪಾಂಡೇಶ್ವರದಲ್ಲಿ ಅಟೊಮ್ಯಾಟಿಕ್‌ ಆಗಿ ಕಾರ್ಯನಿರ್ವಹಣೆ ಆಗುವುದರಿಂದ ರೈಲು ಆಗಮನ-ನಿರ್ಗಮನದ ಸಂದರ್ಭ ಹೆಚ್ಚುವರಿ ಸಮಯವನ್ನು ಮೀಸಲಿಟ್ಟ ಬಳಿಕವಷ್ಟೇ ಗೇಟ್‌ ತೆರೆಯಲು ಸಾಧ್ಯವಾಗುತ್ತದೆ ಎಂಬುದು ರೈಲ್ವೇ ಇಲಾಖೆಯ ಅಭಿಪ್ರಾಯ. ಅಂತೂ, ತಾಸುಗಟ್ಟಲೆ ರಸ್ತೆಯಲ್ಲಿ ಕಾಯುವ ಪ್ರಯಾಣಿಕರಿಗೆ ಇದರಲ್ಲಾದರೂ ಅನುಕೂಲ ಆಗಲಿ ಎಂಬುದು ಅಪೇಕ್ಷೆ.

ಓಬೀರಾಯನ ಕಾಲದ ಗೇಟು!
ಒಂದು ರೈಲು ಬಂದರೆ ಕನಿಷ್ಠ 15ರಿಂದ 20 ನಿಮಿಷ ರಸ್ತೆ ಸಂಚಾರ ಸ್ಥಗಿತವಾಗುತ್ತದೆ. ಇಷ್ಟು ಸುದೀರ್ಘ‌ ಸಮಯ ರಸ್ತೆಯಲ್ಲಿ ನಿಲ್ಲಲು ತಾಳ್ಮೆ ಕಳೆದುಕೊಳ್ಳುವ ಕೆಲವು ದ್ವಿಚಕ್ರ ಸವಾರರು ರೈಲ್ವೇ ಗೇಟ್‌ನ ಕೆಳಗಡೆಯಿಂದ ತೂರಿ ಕ್ರಾಸಿಂಗ್‌ ಮಾಡುವ ಅಪಾಯಕಾರಿ ಸನ್ನಿವೇಶವೂ ಇದೆ. ಕಬ್ಬಿಣದ ತಡೆಬೇಲಿ ಈಗಾಗಲೇ ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಅದರಿಂದ ಏನಾದರು ತೊಂದರೆ ಆಗುವ ಸಾಧ್ಯತೆ ಇದೆ. ರೈಲುಗಳು ಎಡೆಬಿಡದೆ ಗೂಡ್ಸ್‌ಶೆಡ್‌ಗೆ ಕಳುಹಿಸುವ ರೈಲ್ವೇ ಇಲಾಖೆಗೆ ಓಬಿರಾಯನ ಕಾಲದ ಗೇಟ್‌ ಸರಿಪಡಿಸಲು ಇನ್ನೂ ಸಮಯ ಬಂದಿಲ್ಲ!

Advertisement

ಎರಡೂ ಕಡೆ ಕಾಂಕ್ರೀಟು; ಹಳಿ ಭಾಗ ಇಕ್ಕಟ್ಟು !
ಶ್ರೀ ಮಂಗಳಾದೇವಿ ಕ್ಷೇತ್ರದಿಂದ ನೆಕ್ಸಸ್‌ ಮಾಲ್‌ ಸಮೀಪದ ಎ.ಬಿ.ಶೆಟ್ಟಿ ವೃತ್ತದವರೆಗೆ ಚತುಷ್ಪಥ ರಸ್ತೆ ಆಗಿದ್ದರೂ ಪಾಂಡೇಶ್ವರ ರೈಲ್ವೇ ಕ್ರಾಸಿಂಗ್‌ನ ಎರಡೂ ಬದಿಯಲ್ಲಿ ಅಗಲೀಕರಣ ಆಗಿಲ್ಲ. ರೈಲ್ವೇ ಹಳಿ ಇರುವ ವ್ಯಾಪ್ತಿಯ ಜಾಗವು ರೈಲ್ವೇ ಇಲಾಖೆಗೆ ಸೇರಿದ್ದಾಗಿರುವುದರಿಂದ ಇಲ್ಲಿ ರಸ್ತೆ ಅಗಲ ಮಾಡಲು ಸಾಧ್ಯವಾಗಿಲ್ಲ. ರಸ್ತೆ ಅಗಲ ಮಾಡುವುದು ಬಿಡಿ, ಗೇಟಿನ ಎರಡೂ ಬದಿಗಳಲ್ಲಿ ರಸ್ತೆಯಲ್ಲಿ ಬಿದ್ದಿರುವ ಹೊಂಡಗುಂಡಿಗಳನ್ನು ಮುಚ್ಚಲು ಕೂಡ ಬಿಡುತ್ತಿಲ್ಲ ಎಂಬ ಆಪಾದನೆ ಇದೆ.

ನಿಟ್ಟುಸಿರು ಬಿಟ್ಟವರಿಗೆ ಉಸಿರುಗಟ್ಟುತ್ತಿದೆ!
ಅನೇಕ ವರ್ಷಗಳಿಂದ ಗೂಡ್ಸ್‌ ರೈಲುಗಳ ಹಾವಳಿಯಿಂದ ಬಸವಳಿದಿದ್ದ ಪಾಂಡೇಶ್ವರ- ಹೊಗೆಬಜಾರ್‌ ರಸ್ತೆಯ ಸಂಚಾರಿಗಳು ಗೂಡ್ಸ್‌ಶೆಡ್‌ ಸೋಮೇಶ್ವರಕ್ಕೆ ಸ್ಥಳಾಂತರವಾಗುವ ವಿಚಾರ ತಿಳಿದು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಪ್ಯಾಸೆಂಜರ್‌ ರೈಲುಗಳ ಹಾವಳಿಯಿಂದಾಗಿ ಮತ್ತೆ ಉಸಿರುಗಟ್ಟುತ್ತಿದೆ. ಶಾಲಾ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಉದ್ಯೋಗಿಗಳು ಸೇರಿದಂತೆ ಹಲವರಿಗೆ ಸಮಯಕ್ಕೆ ಸರಿಯಾಗಿ ತಮ್ಮ ಕಾರ್ಯಕ್ಷೇತ್ರ ತಲುಪಲು ಸಾಧ್ಯವಾಗುತ್ತಿಲ್ಲ. ರೈಲು ತೆರಳಿದ ಅನಂತರವೂ ಸುಮಾರು ಹೊತ್ತು ಗೇಟು ತೆರೆಯುವುದೇ ಇಲ್ಲ. ಸರಿಯಾದ ನಿರ್ವಹಣೆ ಇಲ್ಲದ ಈ ಗೇಟುಗಳು ಕೆಲವು ಬಾರಿ ಮುರಿದು ಬಿದ್ದದ್ದು, ಮೇಲೆತ್ತುವ ಸಂದರ್ಭ ಕೆಟ್ಟುಹೋದ ಅನೇಕ ನಿದರ್ಶನಗಳೂ ಇವೆ.
-ದಿಲ್‌ರಾಜ್‌ ಆಳ್ವ, ಸಾಮಾಜಿಕ ಹೋರಾಟಗಾರರು

ವರದಿ: ದಿನೇಶ್‌ ಇರಾ
ಚಿತ್ರ: ಸತೀಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next