ಮುಂಬೈ: ‘ನಾನು ಕೂಡ ಪರಿಷ್ಕೃತ ನಿಯಮದ ಅನ್ವಯ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಭಾರಿ ಮೊತ್ತದ ದಂಡ ಪಾವತಿ ಮಾಡಿದ್ದೇನೆ.’ ಹೀಗೆಂದು ಹೇಳಿದ್ದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ.
ದೇಶಾದ್ಯಂತ ಸಾರಿಗೆ ನಿಯಮ ಉಲ್ಲಂಘಿಸಿದವರಿಗೆ ವಿಧಿಸಲಾಗುತ್ತಿರುವ ಪರಿಷ್ಕೃತ ನಿಯಮದಂತೆ ವಿಧಿಸಲಾಗುತ್ತಿರುವ ದಂಡದ ಮೊತ್ತದ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವಂತೆಯೇ ಮುಂಬೈನಲ್ಲಿ ಕೇಂದ್ರ ಸಚಿವರು ಈ ಮಾತುಗಳನ್ನಾಡಿದ್ದಾರೆ.
ಪರಿಷ್ಕೃತ ಸಂಚಾರ ನಿಯಮದಂತೆ ಭಾರಿ ಮೊತ್ತದ ದಂಡ ವಿಧಿಸುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ಮುಂಬೈನ ಸಿ ಲಿಂಕ್‌ನಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ಭಾರಿ ಮೊತ್ತದ ದಂಡ ಪಾವತಿ ಮಾಡಿದ್ದೇನೆ. ರಸ್ತೆಯಲ್ಲಿ ಸಂಚರಿಸುವ ವೇಳೆ ಶಿಸ್ತು ತರುವ ನಿಟ್ಟಿನಲ್ಲಿ ಇಂಥ ಕ್ರಮ ಅನಿವಾರ್ಯ. ಇದರಿಂದ ಪಾರದರ್ಶಕತೆ ಮೂಡುತ್ತದೆಯೇ ಹೊರತು ಭ್ರಷ್ಟಾಚಾರ ಹೆಚ್ಚಾಗುವುದಿಲ್ಲ ಎಂದರು. ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಅಂಗೀಕಾರ ಮಾಡಿ ಜಾರಿಗೊಳಿಸಿದ್ದು ನಮ್ಮ ಸರ್ಕಾರದ ಸಾಧನೆ ಎಂದೂ ಹೇಳಿದ್ದಾರೆ ಸಚಿವರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 2ನೇ ಅವಧಿಯ 100 ದಿನ ಪೂರೈಸಿದ ಬಗ್ಗೆ ಮಾತನಾಡಿದ ಅವರು ‘ಇದು ಟ್ರೈಲರ್ ಮಾತ್ರ. ಐದು ವರ್ಷದ ಅವಧಿಯಲ್ಲಿ ಸಂಪೂರ್ಣ ಸಿನಿಮಾ ಪ್ರದರ್ಶನವಾಗಲಿದೆ’ ಎಂದರು. ಭಾರತವನ್ನು ಬೃಹತ್ ಆರ್ಥಿಕ ಶಕ್ತಿಯನ್ನಾಗಿ ಬದಲಾಯಿಸಲು ಪ್ರಧಾನಿ ಗುರಿ ಹಾಕಿಕೊಂಡಿದ್ದಾರೆ ಎಂದರು ಗಡ್ಕರಿ. ಜಮ್ಮು ಮತ್ತು ಕಾಶ್ಮೀರಕ್ಕೆ ನಿಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಖ್ ನಿಷೇಧ ಕೂಡ ಸರ್ಕಾರದ ಸಾಧನೆಗಳಾಗಿವೆ ಎಂದರು ಗಡ್ಕರಿ.