Advertisement
ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಒತ್ತಡ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರಿಗೆ ಈ ಸಂದೇಶ ರವಾನಿಸಲು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಗೋವಾ ಸಿಎಂ ಪ್ರಮೋದ್ ಸಾವಂತ್ ಜತೆಗೆ ಸದ್ಯದಲ್ಲೇ ಈ ವಿಷಯವನ್ನು ಪ್ರಸ್ತಾವಿಸಲಿದ್ದಾರೆ. ಆದರೆ ಬಿಜೆಪಿ ಮೂಲಗಳ ಪ್ರಕಾರ, ಜೆಡಿಎಸ್‌ನ ಕೆಲವು ಪ್ರಭಾವಿಗಳ ಹಿತಾಸಕ್ತಿ ಕಾಪಾಡುವುದಕ್ಕಾಗಿ ಕುಮಾರ ಸ್ವಾಮಿ ಈ ದಾಳ ಉರುಳಿಸಿದ್ದಾರೆ. ವಿಧಾನ ಪರಿಷತ್ತಿನ ಮೂರು ಸ್ಥಾನಗಳ ಮೇಲೆ ಕಣ್ಣಿಟ್ಟು ಲೋಕಸಭಾ ಚುನಾವಣೆ ಬಳಿಕವೂ ಮೈತ್ರಿ ವಿಸ್ತರಣೆಗೆ ಅವರುಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.
ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕ, ನೈಋತ್ಯ ಶಿಕ್ಷಕ, ಬೆಂಗಳೂರು ಶಿಕ್ಷಕ ಹಾಗೂ ದಕ್ಷಿಣ ಶಿಕ್ಷಕ ಕ್ಷೇತ್ರಕ್ಕೆ ಮುಂದಿನ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಪೈಕಿ ಬೆಂಗಳೂರು ಶಿಕ್ಷಕ, ನೈಋತ್ಯ ಶಿಕ್ಷಕ ಹಾಗೂ ದಕ್ಷಿಣ ಶಿಕ್ಷಕ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ಬಿಜೆಪಿ ವರಿಷ್ಠರಿಗೆ ಮನವಿ ಮಾಡಲು ನಿರ್ಧರಿಸಿದೆ. ಆದರೆ ನೈಋತ್ಯ ಶಿಕ್ಷಕ ಕ್ಷೇತ್ರ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ಭಿನ್ನಮತ ತಲೆದೋರುವ ಲಕ್ಷಣಗಳು ಸೃಷ್ಟಿಯಾಗಿದ್ದು, ಉಳಿದೆರಡು ಕ್ಷೇತ್ರ ತ್ಯಾಗದಲ್ಲಿ ಅಂಥ ಭಿನ್ನಧ್ವನಿ ಇಲ್ಲ ಎಂಬ ಮಾತು ಬಿಜೆಪಿಯಿಂದ ಕೇಳಿ ಬಂದಿದೆ. ನೈಋತ್ಯ ಶಿಕ್ಷಕ ಕ್ಷೇತ್ರವನ್ನು ಜೆಡಿಎಸ್‌ನ ಭೋಜೇಗೌಡ ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯ ಗಣೇಶ್ ಕಾರ್ಣಿಕ್ ಇಲ್ಲಿ ಸೋತಿದ್ದರು. ಈ ಬಾರಿಯೂ ಅವರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಭೋಜೇ ಗೌಡರ ನಡುವಿನ ಭಿನ್ನಾಭಿಪ್ರಾಯ ಈ ಮೈತ್ರಿಗೆ ಧಕ್ಕೆ ತರಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ.ರವಿಯನ್ನು ಸೋಲಿಸುವಂತೆ ಭೋಜೇಗೌಡ ಬಹಿರಂಗ ಪ್ರಚಾರ ನಡೆಸಿದ್ದರು. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ಒಕ್ಕಲಿಗ ಸಮೀಕರಣ ಇದಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಭೋಜೇಗೌಡ ಕುಮಾರಸ್ವಾಮಿಗೆ ಅತ್ಯಾಪ್ತರಾದರೆ, ಗಣೇಶ್ ಕಾರ್ಣಿಕ್ ಯಡಿಯೂರಪ್ಪ ಸಹಿತ ಬಿಜೆಪಿಯ ಹಿರಿಯರಿಗೆ ಆತ್ಮೀಯರು. ಹೀಗಾಗಿ ನೈಋತ್ಯ ಶಿಕ್ಷಕ ಕ್ಷೇತ್ರ ಬಿಜೆಪಿ-ಜೆಡಿಎಸ್ ಮಧ್ಯೆ ಉತ್ತರ-ದಕ್ಷಿಣ ವಾತಾವರಣ ಸೃಷ್ಟಿಸಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
Related Articles
Advertisement
ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಆಗ್ನೇಯ ಪದವೀಧರ ಕ್ಷೇತ್ರದಿಂದ ಸ್ಪರ್ಧೆಗೆ ಉತ್ಸುಕರಾಗಿದ್ದಾರೆ. ನೋಂದಣಿ ಕಾರ್ಯವನ್ನೂ ಆರಂಭಿಸಿದ್ದಾರೆ. ವಿನಾಕಾರಣ ರಘುಪತಿ ಭಟ್ಟರಿಗೆ ಟಿಕೆಟ್ ತಪ್ಪಿಸಲಾಯಿತೆಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಾಯಕರೂ ಹೇಳುತ್ತಿದ್ದಾರೆ. ಹೀಗಾಗಿ ತಕ್ಕಡಿ ಅತ್ತ ವಾಲಿದರೆ ಗಣೇಶ್ ಕಾರ್ಣಿಕ್ ಕಣದಿಂದ ಹೊರಬೀಳುವ ಸಾಧ್ಯತೆ ಇದೆ. ಈ ಸಮೀಕರಣವನ್ನು ಮನಗಂಡಿರುವ ಸಿ.ಟಿ.ರವಿ ಶಿವಮೊಗ್ಗ ಮೂಲದ ಲಿಂಗಾಯತರೊಬ್ಬರನ್ನು ಅಖಾಡಕ್ಕೆ ಇಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕುತೂಹಲ ಸೃಷ್ಟಿಸಿದ ಬೆಂಗಳೂರು
ಇದೆಲ್ಲದರ ಮಧ್ಯೆ ಬೆಂಗಳೂರು ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರ ತೀವ್ರ ಕುತೂಹಲ ಸೃಷ್ಟಿಸಿದೆ. ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿಯಲಿರುವ ಪುಟ್ಟಣ್ಣ ಅವರನ್ನು ಸೋಲಿಸಲು ಬೆಂಗಳೂರು ಶಿಕ್ಷಕ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಾಗಿದೆ. ಕಳೆದ ಬಾರಿ ಕೇವಲ 900 ಮತಗಳಿಂದ ಸೋತಿದ್ದ ನ್ಯಾಯವಾದಿ ಎ.ಪಿ.ರಂಗನಾಥ್ ಮತ್ತೆ ಕಣಕ್ಕೆ ಇಳಿಯುವುದು ಬಹುತೇಕ ಖಾತ್ರಿಯಾಗಿದೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯನ್ನು ಜೆಡಿಎಸ್ ಬೆಂಬಲಿಸಲಿದೆ. ಹಾಲಿ ಸದಸ್ಯ ಅ.ದೇವೇಗೌಡ ಬದಲು ಯುವ ಮುಖಕ್ಕೆ ಈ ಬಾರಿ ಅವಕಾಶ ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಬಿಜೆಪಿ ಸಾಮಾಜಿಕ ಜಾಲ ಪ್ರಕೋಷ್ಠದ ಮಾಜಿ ಸಂಚಾಲಕ, ಯುವ ಮೋರ್ಚಾ ಮಾಜಿ ಕಾರ್ಯದರ್ಶಿ ವಿನೋದ್ ಕೆ.ಗೌಡ ನೋಂದಣಿ ಕಾರ್ಯ ನಡೆಸುತ್ತಿದ್ದಾರೆ. ಎ.ಎಚ್. ಆನಂದ ಕೂಡ ಆಕಾಂಕ್ಷಿಯಾಗಿದ್ದಾರೆ.
*ರಾಘವೇಂದ್ರ ಭಟ್