Advertisement

ಮೈತ್ರಿ ಪತನದ ಬಳಿಕವೂ ರಾಜ್ಯ ರಾಜಕೀಯದಲ್ಲಿ ನೆಮ್ಮದಿಯಿಲ್ಲ!

10:59 PM Aug 23, 2019 | Lakshmi GovindaRaj |

ಬೆಂಗಳೂರು: ಮೈತ್ರಿ ಸರ್ಕಾರ ಪತನವಾದ ಬಳಿಕ “ಶಾಸಕರ ಅನರ್ಹತೆ’ ಆಧಾರದಲ್ಲಿ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯ ಅಭಿವೃದ್ಧಿಯತ್ತ ಸಾಗಬಹುದು ಎಂಬ ನಿರೀಕ್ಷೆ ಜನರಲ್ಲಿ ಹುಟ್ಟಿತ್ತು. ಆದರೆ, ಸುಮಾರು ಇಪ್ಪತ್ತೈದು ದಿನಗಳ ಕಾಲ ಸಚಿವರ ನೇಮಕವಿಲ್ಲದೆ ಮುಖ್ಯಮಂತ್ರಿ ಒಬ್ಬಂಟಿಯಾಗಿದ್ದು, ರಾಜ್ಯಕ್ಕೆ ಅಪ್ಪಳಿಸಿದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿ ಪರಿಹಾರ ಕಾಮಗಾರಿಗಳನ್ನು ಸಿಎಂ ಒಬ್ಬಂಟಿಯಾಗಿ ನಡೆಸಲು ತ್ರಾಸಪಟ್ಟಿದ್ದು ಹಾಗೂ ಸಚಿವ ಸಂಪುಟ ವಿಸ್ತರಣೆಗೆ ದೆಹಲಿ ಅಲೆದಾಟ ನಡೆಸಿದ್ದು… ಇವೆಲ್ಲವನ್ನೂ ಗಮನಿಸಿದಾಗ ಎಲ್ಲವೂ ಸರಿಯಿಲ್ಲ ಎಂಬಂತೆ ಭಾಸವಾಗುತ್ತಿತ್ತು.

Advertisement

ಆದರೆ, ಸಚಿವ ಸಂಪುಟ ವಿಸ್ತರಣೆಯ ಬಳಿಕದ ಬೆಳವಣಿಗೆಗಳು ಮಾತ್ರ ರಾಜ್ಯ ರಾಜಕಾರಣಕ್ಕೆ ಇನ್ನೂ ನೆಮ್ಮದಿ ಸಿಕ್ಕಿಲ್ಲ ಎಂಬುದನ್ನು ದೃಢಪಡಿ ಸುತ್ತದೆ. ಯಾವುದೇ ಸರ್ಕಾರದ ಸಂಪುಟ ವಿಸ್ತರಣೆ ಯಾದಾಗ ಸಹಜವಾಗಿ ಸಚಿವ ಸ್ಥಾನ ಗಿಟ್ಟಿಸಲು ವಿಫ‌ಲರಾದವರು ನೊಂದುಕೊಂಡು ಒಂದಿಷ್ಟು ಮುಜುಗರದ ಸನ್ನಿವೇಶಗಳನ್ನು ಸೃಷ್ಟಿ ಮಾಡುವುದು ಸಹಜ. ಆದರೆ, ಯಡಿಯೂರಪ್ಪ ಸರ್ಕಾರದಲ್ಲಿ ಹಾಗಿಲ್ಲ. ಇಲ್ಲಿ ಸಮಾಧಾನ ಮಾಡಬೇಕಿ ರುವುದು ಪಕ್ಷದೊಳಗಿನ ಅತೃಪ್ತರಿಗಿಂತ ಹೆಚ್ಚಾಗಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅನರ್ಹ ಶಾಸಕರನ್ನು!

ಯಡಿಯೂರಪ್ಪ ಅವರನ್ನು ಬೆಂಗಳೂರಿ ನಲ್ಲೇ ಕೆಲವು ಬಾರಿ ಭೇಟಿಯಾಗಿದ್ದರೂ ಅನರ್ಹರು ಸಮಾಧಾನ ಗೊಂಡಿರಲಿಲ್ಲ. ಈಗ ಪೂರ್ತಿ ತಂಡ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರನ್ನೇ ಭೇಟಿಯಾಗಿ ತಮ್ಮ ನೋವುಗಳಿಗೆ ಸ್ಪಂದನೆ ಸಿಗಬೇಕು ಎಂದು ಹಠ ಹಿಡಿದಿರುವುದು ಯಡಿ ಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ತೆರೆಮರೆಯಲ್ಲಿ ಕೆಲಸ ಮಾಡಿದ್ದ ಡಾ. ಅಶ್ವತ್ಥನಾರಾಯಣ ಮತ್ತು ಬಿಎಸ್‌ವೈ ಪುತ್ರ ವಿಜಯೇಂದ್ರ ನಡೆಸಿದ ಮಾತುಕತೆಗೂ ಅನರ್ಹರು ಬಗ್ಗದೆ ಯಡಿಯೂರಪ್ಪ ಅವರನ್ನೇ ದೆಹಲಿಗೆ ಕರೆಸಿಕೊಳ್ಳುವ ಪ್ರಮೇಯವೂ ಘಟಿಸಿತು. ಕೊನೆಗೂ ಅಮಿತ್‌ ಶಾ ಜತೆಗಿನ ಭೇಟಿ ಸಾಧ್ಯವಾಗದೆ ಬಿಎಸ್‌ವೈ ಬರಿಗೈಯ್ಯಲ್ಲಿ ಬೆಂಗಳೂರಿಗೆ ವಾಪಸಾಗುವಂತಾಗಿದೆ.

ಸಚಿವ ಸಂಪುಟ ವಿಸ್ತರಣೆ ಮಾಡಿರುವ ರೀತಿ, ತಮ್ಮ ಒಪ್ಪಿಗೆಯಿಲ್ಲದೆ ಖಾತೆಗಳನ್ನು ಹಂಚಲು ಸಾಧ್ಯವಿಲ್ಲ ಎಂಬ ಅನರ್ಹರ ಹಠ ಒಂದೆಡೆ. ಮೈತ್ರಿ ಸರ್ಕಾರ ಪತನಕ್ಕಿಂತ ಮುಂಚೆ ತಮಗೆ ನೀಡಿದ ಹಲವು ಭರವಸೆಗಳ ಈಡೇರಿಕೆ ಮತ್ತಿತರ ಒತ್ತಡಗಳು ಇನ್ನೊಂದೆಡೆ. “ಅನರ್ಹರ ಹೊರೆ’ಯನ್ನು ಯಡಿಯೂರಪ್ಪ ಅನುಭವಿಸಿಕೊಂಡೇ ರಾಜ್ಯಭಾರ ನಡೆಸುವಂತಹ ಸ್ಥಿತಿಗೆ ತಂದಿದೆ. ಈ ಘಟನಾವಳಿಗಳನ್ನು ಸರ್ಕಾರದ ಆರಂಭ ದಲ್ಲೇ ನೋಡಿದರೆ ಮುಂದೆ ಏನೇನು ರಾಜಕಾರಣ ನಡೆಯಲಿದೆ ಎಂಬುದನ್ನು ಕಲ್ಪಿಸಿಕೊಳ್ಳಬಹುದು. ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ಒಂದಲ್ಲ ಒಂದು ಸಮಸ್ಯೆಗಳು ಅವರಿಗಿತ್ತು. ಈಗಲೂ ಆ ಪ್ರತಿಫ‌ಲನ ಕಾಣುತ್ತಿದ್ದು, ನಿಜ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ.

ಸಿದ್ದು-ಗೌಡರ ಮಾತಿನ ಯುದ್ಧ: ಇನ್ನೊಂದು ಕಡೆ ನೋಡಿದಾಗ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕಡಿದುಹೋಗುವುದು ಬಹುತೇಕ ಖಚಿತವಾಗಿದೆ. ಕಳೆದೆರಡು ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯರತ್ತ ಮತ್ತು ಕಾಂಗ್ರೆಸ್‌ ಪಕ್ಷದತ್ತ ನೇರವಾಗಿ “ಸರ್ಕಾರ ಪತನಕ್ಕೆ’ ಕಾರಣ ಹುಡುಕಿದ್ದಾರೆ. ಸಿದ್ದರಾಮಯ್ಯ ಮತ್ತು ತಂಡ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಕಾರಣ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಫೋನ್‌ ಕದ್ದಾಲಿಕೆ ಪ್ರಕರಣವನ್ನು ಮತ್ತು ಐಎಂಎ ಹಗರಣಗಳ ತನಿಖೆಗಳನ್ನು ಸಿಬಿಐಗೆ ಶಿಫಾರಸು ಮಾಡಿರುವ ನಿರ್ಧಾರ ಗೌಡರನ್ನು ವಿಚಲಿತರನ್ನಾಗಿಸಿರಬಹುದು.

Advertisement

ಎರಡೂ ಪ್ರಕರಣಗಳಲ್ಲಿ ತಮ್ಮ ಪಕ್ಷ ಮತ್ತು ಪುತ್ರ ಕುಮಾರಸ್ವಾಮಿಗೆ ಮುಜುಗರ ಉಂಟುಮಾಡುವ ಸನ್ನಿವೇಶಗಳು ಸೃಷ್ಟಿಯಾಗ ಬಹುದು ಮತ್ತು ಈ “ಹುನ್ನಾರದ’ ಹಿಂದೆ ಸಿದ್ದರಾಮಯ್ಯ ಇರಬಹುದು ಎಂದು ಅವರಿಗೆ ಅನಿಸಿರ ಬಹುದು.”ಸಿದ್ದರಾಮಯ್ಯ ಸಲಹೆ ಮೇರೆಗೆ ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿರಬಹುದು’ ಎಂಬರ್ಥ ಬರುವಂತೆ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದೂ ಅದರ ಹಿನ್ನೆಲೆಯೇ. ಶುಕ್ರವಾರ ನೇರವಾಗಿ ಆಖಾಡಕ್ಕಿಳಿದ ಕಾಂಗ್ರೆಸ್‌ ಶಾಸ ಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ತಮ್ಮ ಮೊನಚು ಮಾತುಗಳ ಮೂಲಕ ಪ್ರತಿಕ್ರಿಯೆ ನೀಡಿದರು.

ಆ ಮೂಲಕ ಅವರು ತಾವಂದುಕೊಂಡಂತೆ ಜೆಡಿಎಸ್‌ ಜತೆಗಿನ ಚುನಾವಣಾ ಮೈತ್ರಿಗೆ ಇತಿಶ್ರೀ ಹೇಳಿದಂತಾಯಿತು. ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದರೆ, ಅನರ್ಹ ಶಾಸಕರ ಕಾರಣಕ್ಕೆ ಉಪಚುನಾವಣೆ ಎದುರಿಸುವ ಬದಲು ಸರ್ಕಾರವೇ ಪತನವಾಗಿ ವಿಧಾನಸಭೆಯ ಮರುಚುನಾವಣೆ ಎದುರಿಸುವಂತಹ ಲಕ್ಷಣಗಳು ಕಾಣುತ್ತಿವೆ. ಯಡಿಯೂರಪ್ಪ ಅವರ ಮುಂದಿರುವ ಸವಾಲುಗಳು, ಅನರ್ಹ ಶಾಸಕರ ಬಿಗಿಪಟ್ಟು, ಬಿಜೆಪಿಯೊಳಗಿನ ಅತೃಪ್ತಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಮೈತ್ರಿ ಕಳಚಿಕೊಂಡು ತಮ್ಮ ತಮ್ಮ ಪಕ್ಷಗಳ ಬಲವರ್ಧನೆಗೆ ಯತ್ನಿಸುತ್ತಿರುವುದು ಇವೆಲ್ಲವೂ ರಾಜ್ಯದ ರಾಜಕೀಯ ದಿಕ್ಕನ್ನು ಹೊಸತರೆಡೆಗೆ ಬದಲಿಸುವಂತಿದೆ.

* ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next