ಶ್ರೀರಂಗಪಟ್ಟಣ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆ ಮುಗಿದು ಇನ್ನು ಫಲಿತಾಂಶಕ್ಕೆ ತಿಂಗಳು ಬಾಕಿ ಇದ್ದರೂ ಚುನಾವಣೆ ಚರ್ಚೆಗಳ ಕಾವು ಮಾತ್ರ ನಿಂತಿಲ್ಲ. ಮಳೆ ಬಂದು ನಿಂತರೂ ಮರದ ಹನಿ ನಿಂತಿಲ್ಲ ಎಂಬ ಗಾದೆಯಂತೆ ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆ ಸಾಕ್ಷಿಯಾಗಿದೆ.
ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆ ಮತಪೆಟ್ಟಿಗೆಗಳು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿ ಅಡಗಿ ಕುಳಿತಿವೆ. ಮಂಡ್ಯ ಕ್ಷೇತ್ರ ದೇಶದ ಗಮನ ಸೆಳೆದ ಕ್ಷೇತ್ರವಾಗಿದೆ. ಸಿನಿ ಸ್ಟಾರ್ ಹಾಗೂ ಮುಖ್ಯಮಂತ್ರಿಗಳ ಪುತ್ರರ ಸ್ಪರ್ಧೆಯಿಂದ ಜಿದ್ದಾಜಿದ್ದಿನ ಚುನಾವಣಾ ಕಣವಾಗಿ ಮಾರ್ಪಟ್ಟಿತ್ತು. ಜೊತೆಗೆ ಗ್ರಾಮಗಳಲ್ಲಿ ಇದುವರೆಗೂ ಯಾವ ಚುನಾವಣೆಯಲ್ಲೂ ನಡೆಯದಷ್ಟು ಅಬ್ಬರದ ಪ್ರಚಾರ, ರೋಡ್ ಶೋಗಳು ಈ ಚುನಾವಣೆಯಲ್ಲಿ ನಡೆಯಿತೆಂದೇ ಹೇಳಬಹುದು.
ಬೆಂಗಲಿಗರ ಲೆಕ್ಕಾಚಾರ: ಇದೀಗ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ತಮ್ಮ ಗ್ರಾಮಗಳಲ್ಲಿ ನಡೆದ ಮತಗಳ ಕುರಿತು ಲೆಕ್ಕಾಚಾರ, ಅಭ್ಯರ್ಥಿಗಳು ಸೋಲು-ಗೆಲುವಿನ ಬಿಸಿ ಬಿಸಿ ಚರ್ಚೆಗಳು ಸಾರ್ವಜನಿಕ ವಲಯಗಳಾದ ಹೋಟೆಲ್, ಟೀ ಅಂಗಡಿಗಳ ಮುಂದೆ ನಡೆಯುತ್ತಿವೆ. ಮೈತ್ರಿಕೂಟ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಬೆಂಬಲಿಗರು ಒಂದು ಕಡೆ ಕುಳಿತು ಚರ್ಚೆ ಮಾಡಿ ನಿಖೀಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದು ಸಂಸದರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿಕೊಳ್ಳುವುದು ಒಂದು ಕಡೆಯಾದರೆ, ಮತ್ತೂಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಗರು ಕುಳಿತು ಸುಮಲತಾ ಅವರೇ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆಂದು ಹೇಳಿಕೊಳ್ಳುವುದು ಸಾಮಾನ್ಯವಾಗಿದೆ.
ಸ್ವಾಭಿಮಾನಿಗಳ ಮತ: ಹಣಬಲ, ಜನಬಲ, ಅನುಕಂಪ, ಜಿಲ್ಲೆಯ ಅಭಿವೃದ್ಧಿ ಕುರಿತಾಗಿ ಈಗೆ ಚರ್ಚೆಗಳು ನಡೆದು ಮೈತ್ರಿಕೂಟದ ಅಭ್ಯರ್ಥಿ ಪರ ಮುಖ್ಯಮಂತ್ರಿಗಳು, ಜೆಡಿಎಸ್ ಶಾಸಕರು, ಕಾರ್ಯಕರ್ತರ ಒಲವು ಹಾಗೂ ಪಕ್ಷೇತರ ಅಭ್ಯರ್ಥಿ ಪರ ರೆಬಲ್ಸ್ಟಾರ್ ಅಂಬರೀಶ್ ಅಭಿಮಾನಿಗಳು, ನಟರಾದ ದರ್ಶನ್ ಹಾಗೂ ಯಶ್ ಹಾಗೂ ಅಂಬರೀಶ್ ಅಭಿಮಾನಿಗಳು ಒಂದೆಡೆ ಸೇರಿ ಸ್ವಾಭಿಮಾನಿಗಳ ಮತಗಳ ಲೆಕ್ಕಾಚಾರದಲ್ಲಿ ಸೋಲು ಗೆಲವುಗಳ ಲೆಕ್ಕಾಚಾದಲ್ಲಿ ತೊಡಗಿದ್ದಾರೆ.
ಬೆಟ್ಟಿಂಗ್ ಭರಾಟೆ: ಕೆಲ ಭಾಗಗಳಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ನಿಖೀಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರು ಬೆಟ್ಟಿಂಗ್ ಕಟ್ಟುತ್ತಿರುವ ಪ್ರಕರಣಗಳು ಗುಟ್ಟಾಗಿ ನಡೆಯುತ್ತಿವೆ. ಚುನಾವಣಾ ನೀತಿ ಸಂಹಿತೆ ಅಡಿ ಬೆಟ್ಟಿಂಗ್‌ಗೆ ಅಧಿಕಾರಿಗಳು ಕಡಿವಾಣ ಹಾಕಿದ್ದು, ಬೆಟ್ಟಿಂಗ್ ಚರ್ಚೆಗಳು ಅಷ್ಟಾಗಿ ಹೊರ ಬರುತ್ತಿಲ್ಲ. ಚುನಾವಣಾಧಿಕಾರಿಗಳು ಈಗಾಗಲೇ ಬೆಟ್ಟಿಂಗ್ ಬಗ್ಗೆ ಶಿಸ್ತು ಕ್ರಮಕ್ಕೆ ಮುಂದಾಗಿರು ವುದರಿಂದ ನಿಗೂಢವಾಗಿವೆ. ಒಟ್ಟಾರೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 2,11,641ಮತದಾರರಲ್ಲಿ, ಪುರುಷರು 1,04,723, ಮಳೆಯರು 1,06,882 ಇತರೆ 36 ಮತದಾರ ರಿದ್ದು, ಅದರಲ್ಲಿ 1,73,346 ಮತಗಳು ಚಲಾವಣೆಯಾಗಿವೆ. 86,857 ಪುರುಷರು, 86474 ಮಹಿಳೆಯರು ಸೇರಿ ಇತರ 15 ಮಂದಿ ಮತ ಚಲಾಯಿಸಿದ್ದಾರೆ. ಮತದಾರರ ಒಲವು ಯಾರಕಡೆ ಇದೆಯೋ ಮೇ 23ರ ಫಲಿತಾಂಶದವರೆಗೂ ಕಾದು ನೋಡಬೇಕಿದೆ.