Advertisement

ಆಟಗಾರ ಆಯ್ತು, ಆಕೆ ಶುರುವಾಯ್ತು

11:16 AM Jan 10, 2017 | |

ನಿರ್ದೇಶಕ ಕೆ.ಎಂ. ಚೈತನ್ಯ ಮತ್ತು ನಟ ಚಿರಂಜೀವಿ ಸರ್ಜಾ ಸದ್ದಿಲ್ಲದೆ ಒಂದು ಚಿತ್ರ ಮಾಡುತ್ತಿದ್ದಾರೆ ಮತ್ತು ಲಂಡನ್‌ನಲ್ಲಿ ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಎಂದು ಹಲವು ದಿನಗಳ ಹಿಂದೆಯೇ ಸುದ್ದಿಯಾಗಿತ್ತು. ಆದರೆ, ಚೈತನ್ಯ ಆಗಲೀ, ಚಿರಂಜೀವಿ ಸರ್ಜಾ ಆಗಲೀ ಈ ಬಗ್ಗೆ ಎಲ್ಲೂ ಮಾತಾಡಿರಲಿಲ್ಲ. ಅದಕ್ಕೆ ಕಾರಣವೂ ಇದೆಯಂತೆ. ಮೊದಲು ಶೂಟಿಂಗ್‌ ಬಗ್ಗೆ ಗಮನಹರಿಸೋಣ, ಆಮೇಲೆ ಮಾತು ಎಂದು ಮೊದಲೇ ತೀರ್ಮಾನವಾಗಿತ್ತಂತೆ.

Advertisement

ಅದಕ್ಕೆ ಸರಿಯಾಗಿ, ಈಗ ಚಿತ್ರದ ಕೆಲಸಗಳು ಮುಗಿಯುವ ಹಂತಕ್ಕೆ ಬಂದಿದ್ದು, ತಿಂಗಳ ಕೊನೆಯ ಹೊತ್ತಿಗೆ ಚಿತ್ರ ಸೆನ್ಸಾರ್‌ ಆಗಲಿದೆ. ಈಗ ಮಾತಾಡೋಕೆ ಸಮಯ ಲಾಯಕ್ಕಿದೆ ಎಂದು ಚೈತನ್ಯ ಮಾತಾಡಿದ್ದಾರೆ.ಅಂದಹಾಗೆ, ಚಿತ್ರದ ಹೆಸರು “ಆಕೆ’. ಇಲ್ಲಿ ಬರೀ ಚೈತನ್ಯ ಮತ್ತು ಚಿರು ಮಾತ್ರ ಒಟ್ಟಾಗುತ್ತಿಲ್ಲ. ಯೋಗಿ ದ್ವಾರಕೀಶ್‌ ಸಹ ಸೇರಿಕೊಂಡಿದ್ದಾರೆ. “ಆಟಗಾರ’ ಚಿತ್ರವನ್ನು ಯೋಗಿ ನಿರ್ಮಿಸಿದರೆ, ಚೈತನ್ಯ ಮತ್ತು ಚಿರು ಆ ಚಿತ್ರಕ್ಕೆ ಕೆಲಸ ಮಾಡಿದ್ದರು.

ಈ ಬಾರಿ ಸಹ ಮೂವರೂ, “ಆಕೆ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದ ಬಹುತೇಕ ಭಾಗ ಲಂಡನ್‌ನಲ್ಲಿ ಚಿತ್ರೀಕರಣಗೊಂಡಿದೆ. ಹಾಗಾಗಿ ಅಲ್ಲಿಯ ತಂತ್ರಜ್ಞರನ್ನೇ ದೊಡ್ಡ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗಿದೆ. “ಹ್ಯಾರಿ ಪಾಟರ್‌’ ಚಿತ್ರಕ್ಕೆ ಆಪರೇಟಿವ್‌ ಕ್ಯಾಮೆರಾಮ್ಯಾನ್‌ ಆಗಿದ್ದ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದರೆ, ಕಾರ್ಲ್ ಆಸ್ಟಿನ್‌ ಎನ್ನುವವರು ಚೈತನ್ಯ ಜೊತೆಗೆ ಸೇರಿಕೊಂಡು ಈ ಕಥೆಯ ರೂಪಾಂತರ ಮಾಡಿದ್ದಾರೆ.

ರೂಪಾಂತರ ಎಂದರೆ, ಮೂಲಕ ಕಥೆಯಲ್ಲಿಯದು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರಿಸುವುದಾಗಿ ಹೇಳುತ್ತಾರೆ ಚೈತನ್ಯ. ಪೋಸ್ಟರ್‌ ನೋಡಿದರೆ ಹಾರರ್‌ ಚಿತ್ರ ಎಂಬ ವಿಷಯ ಮನಸ್ಸಿಗೆ ಬರುವುದು ಹೌದು. ಇದು ಹಾರರ್‌ ಚಿತ್ರ ಎನ್ನುವುದಕ್ಕಿಂತ ಸೂಪರ್‌ ನ್ಯಾಚುರಲ್‌ ಚಿತ್ರ ಎನ್ನುವುದು ಹೆಚ್ಚು ಸರಿಯಾಗುತ್ತದೆ ಎನ್ನುತ್ತಾರೆ ಚಿತ್ರ. “ಹೆಸರು ಕೇಳಿದರೆ, ಇದೊಂದು ಮಹಿಳಾ ಪ್ರಧಾನ ಚಿತ್ರ ಎನಿಸಬಹುದು.

ಮಹಿಳಾ ಪ್ರಧಾನ ಚಿತ್ರ ಎನ್ನುವುದಕ್ಕಿಂತ ಮಹಿಳಗೆ ಪ್ರಮುಖವಾದ ಪ್ರಾಶಸ್ತ್ಯ ಇದೆ. ಈ ಚಿತ್ರದಲ್ಲಿ ಮೂರು ತಲೆಮಾರಿನ ಆಕೆಗಳು ಬಂದು ಹೋಗುತ್ತಾರೆ. ಇಂಡಿಯಾ ಆಗಲೀ, ಇಂಗ್ಲೆಂಡ್‌ ಆಗಲೀ ಮಮತೆ ಎಲ್ಲಾ ಕಡೆ ಒಂದೇ ಎಂದು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ ಚೈತನ್ಯ. ಈ ಚಿತ್ರದಲ್ಲಿ ಚಿರುಗೆ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ನಟಿಸುತ್ತಿದ್ದಾರೆ. ಜೊತೆಗೆ ಪ್ರಕಾಶ್‌ ಬೆಳವಾಡಿ, ಬಾಲಾಜಿ ಮನೋಹರ್‌, ಅಚ್ಯುತ್‌ ಕುಮಾರ್‌, ಸ್ನೇಹಾ ಆಚಾರ್ಯ, ಅಮನ್‌ ಮುಂತಾದವರು ಇದ್ದಾರೆ.  

Advertisement

ಗುರುಕಿರಣ್‌ ಅವರ ಸಂಗೀತವಿದೆ. ಮಲ್ಹರ್‌ ಭಟ್‌ ಅವರು ಭಾರತದಲ್ಲಿ ಚಿತ್ರೀಕರಣವಾದ ಭಾಗದ ಛಾಯಾಗ್ರಹಣ ಮಾಡಿದ್ದಾರೆ. ಕಲೈ ಮತ್ತು ಸೂರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದು ವಿಶೇಷವೆಂದರೆ, ಈ ಚಿತ್ರವನ್ನು ಇರೋಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯು ವಿತರಣೆ ಮಾಡುತ್ತಿರುವುದು. ಈ ಚಿತ್ರದ ಮೂಲಕ ಇರೋಸ್‌ ಕನ್ನಡಕ್ಕೆ ಬರುತ್ತಿದೆ. ಇರೋಸ್‌ ಜೊತೆಗೆ ಮೈಸೂರು ಟಾಕೀಸ್‌ ಸಹ ಈ ಚಿತ್ರವನ್ನು ವಿತರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next