ಹೈದರಾಬಾದ್: ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ 15 ಸಾವಿರ ಭಾರತೀಯರಿಗೆ ಬರೋಬ್ಬರಿ 700 ಕೋಟಿ ರೂ. ವಂಚನೆ!
ಚೀನೀ ಹ್ಯಾಂಡ್ಲರ್‌ಗಳನ್ನು ಒಳಗೊಂಡಿರುವ ಮೆಗಾ ವಂಚನೆಯ ಜಾಲವನ್ನು ಹೈದರಾಬಾದ್ ಪೊಲೀಸರು ಭೇದಿಸಿದ್ದಾರೆ. 700 ಕೋಟಿ ರೂ. ಮೌಲ್ಯದ ಸೈಬರ್ ವಂಚನೆಯ ಪ್ರಕರಣ ಇದಾಗಿದ್ದು, ಈ ಹಣವನ್ನು ದುಬಾೖ ಮೂಲಕ ಚೀನಕ್ಕೆ ರವಾನಿಸಲಾಗಿದೆ. ಅಚ್ಚರಿಯ ವಿಚಾರವೆಂದರೆ ಈ ಪೈಕಿ ಸ್ವಲ್ಪ ಮೊತ್ತವನ್ನು ಲೆಬನಾನ್ ಮೂಲದ ಉಗ್ರ ಸಂಘಟನೆ ಹೆಜ್ಬುಲ್ಲಾ ನಿಯಂತ್ರಣದಲ್ಲಿರುವ ಖಾತೆಗೆ ಕಳುಹಿಸಲಾಗಿದೆ.
“ಈ ಕುರಿತು ನಾವು ಕೇಂದ್ರ ತನಿಖಾ ಸಂಸ್ಥೆಗಳಿಗೆ ಅಲರ್ಟ್ ಮಾಡಿದ್ದೇವೆ. ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧ ಘಟಕಕ್ಕೂ ನಾವು ವಿವರ ನೀಡಿದ್ದೇವೆ’ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಹೇಳಿದ್ದಾರೆ. ಅಲ್ಲದೇ, ಅತ್ಯಧಿಕ ವೇತನ ಪಡೆಯುತ್ತಿರುವಂಥ ಸಾಫ್ಟ್ವೇರ್ ವೃತ್ತಿಪರರೊಬ್ಬರು ಈ ವಂಚನೆಯ ಸುಳಿಗೆ ಸಿಲುಕಿ 82 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ವಂಚನೆ ನಡೆದಿದ್ದು ಹೇಗೆ?: ಎಪ್ರಿಲ್ ತಿಂಗಳಲ್ಲಿ ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಿದ್ದ ವ್ಯಕ್ತಿಯೊಬ್ಬ ತನಗೆ 28 ಲಕ್ಷ ರೂ. ವಂಚನೆ ನಡೆದಿದೆ ಎಂದು ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂಬ್ರಾಂಚ್‌ನ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಮೊದಲಿಗೆ ವಂಚಕರು ಹೂಡಿಕೆ ಮತ್ತು ಪಾರ್ಟ್ ಟೈಂ ಉದ್ಯೋಗದ ಹೆಸರಲ್ಲಿ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಮೂಲಕ ಜನರನ್ನು ಸಂಪರ್ಕಿಸುತ್ತಿದ್ದರು. ಯೂಟ್ಯೂಬ್ ವೀಡಿಯೋಗಳನ್ನು ಲೈಕ್ ಮಾಡುವುದು, ಗೂಗಲ್‌ನಲ್ಲಿ ರಿವ್ಯೂ ಬರೆಯುವುದು ಸಹಿತ ಅತ್ಯಂತ ಸುಲಭವಾದ ಕೆಲಸಗಳನ್ನು ನೀಡಿ ಉತ್ತಮ ವೇತನ ನೀಡುವ ಭರವಸೆ ನೀಡುತ್ತಿದ್ದರು. ಜತೆಗೆ 5 ಸಾವಿರ ರೂ.ಗಳ ಹೂಡಿಕೆ ಮಾಡಿದರೆ ಮೊದಲ ಕೆಲಸ ಪೂರ್ಣಗೊಳಿಸಿದ ಕೂಡಲೇ ನಿಮ್ಮ ಮೊತ್ತ ದುಪ್ಪಟ್ಟಾಗುತ್ತದೆ ಎಂದು ನಂಬಿಸಿ, ಹಣ ಪಡೆಯುತ್ತಿದ್ದರು. ಅನಂತರ ತಾವು ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ರಿಟರ್ನ್Õ ಬಂದಂತೆ ನಕಲಿ ವಿಂಡೋ ಮೂಲಕ ತೋರಿಸಲಾಗುತ್ತಿತ್ತು. ಇಷ್ಟು ಲಾಭ ಬಂದಿರುವುದನ್ನು ನೋಡಿ ಹೂಡಿಕೆದಾರರು ಖುಷಿಯಾಗುತ್ತಿದ್ದರು. ಆದರೆ ಆ ಮೊತ್ತವನ್ನು ಅವರಿಗೆ ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಕೊಟ್ಟ ಎಲ್ಲ ಕೆಲಸವನ್ನು ಮುಗಿಸಿದ ಕೂಡಲೇ ಈ ಮೊತ್ತ ವಿತ್‌ಡ್ರಾ ಮಾಡಬಹುದು ಎಂದು ಹೇಳುತ್ತಿದ್ದರು. ಅದನ್ನು ನಂಬಿದ ಅನೇಕರು ಹಣವನ್ನು ಡಬಲ್ ಮಾಡುವ ಆಸೆಗೆ ಬಿದ್ದು, ಮತ್ತೆ ಮತ್ತೆ ಲಕ್ಷಾಂತರ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.
ತನಿಖೆ ಮುಂದುವರಿಸಿದಾಗ ನಕಲಿ ಕಂಪೆನಿಗಳ ಹೆಸರಲ್ಲಿ ಒಟ್ಟು 48 ಬ್ಯಾಂಕ್ ಖಾತೆಗಳು ಪತ್ತೆಯಾದವು. ಆರಂಭದಲ್ಲಿ 584 ಕೋಟಿ ರೂ.ಗಳ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿತ್ತು. ಅನಂತರದಲ್ಲಿ 113 ಬ್ಯಾಂಕ್ ಖಾತೆಗಳನ್ನು ಬಳಸಿ ಈ ವಂಚನೆ ನಡೆದಿದ್ದು, ಹೆಚ್ಚುವರಿ 128 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂತು. ಪ್ರಕರಣ ಸಂಬಂಧ ಮುನವ್ವರ್, ಅರುಳ್ ದಾಸ್, ಶಾ ಸುಮೈರ್, ಸಮೀರ್ ಖಾನ್‌ರನ್ನು ಬಂಧಿಸಲಾಗಿದೆ. ಆರೋಪಿಗಳಾದ ಮನೀಶ್, ವಿಕಾಸ್ ಮತ್ತು ರಾಜೇಶ್ ಎಂಬವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಚೀನದ ಮಾಸ್ಟರ್‌ಮೈಂಡ್‌ಗಳಾದ ಕೆವಿನ್ ಜನ್, ಲೀ ಲೌ ಲ್ಯಾಂಗ್‌ಝೌ ಮತ್ತು ಶಾಷಾ ಎಂಬವರೂ ಈ ಜಾಲದಲ್ಲಿರುವುದು ತಿಳಿದುಬಂದಿದೆ.
9 ಮಂದಿ ಬಂಧನ
ವಂಚನೆಯ ಮೊತ್ತದಲ್ಲಿ ಒಂದು ಭಾಗವನ್ನು ಕ್ರಿಪ್ಟೋಕರೆನ್ಸಿಯಾಗಿ ಬದಲಿಸಿ, ಹೆಜ್ಬುಲ್ಲಾ ಉಗ್ರ ಸಂಘಟನೆಯ ವ್ಯಾಲೆಟ್‌ಗೆ ಹಾಕಿರುವ ಅನುಮಾನ ವ್ಯಕ್ತವಾಗಿದೆ. ಈಗಾಗಲೇ 9 ಮಂದಿಯನ್ನು ನಾವು ಬಂಧಿಸಿದ್ದೇವೆ. ಈ ಪೈಕಿ ನಾಲ್ವರು ಹೈದರಾಬಾದ್‌ನವರಾದರೆ, ಮುಂಬ ಯಿಯಲ್ಲಿ ಮೂವರು, ಅಹ್ಮದಾಬಾದ್‌ನಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ 6 ಮಂದಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದೂ ಆನಂದ್ ತಿಳಿಸಿದ್ದಾರೆ.