Advertisement
ಪ್ರಸ್ತುತ 119 ಶಾಸಕರನ್ನು ಹೊಂದಿರುವ ಬಿಜೆಪಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಬೇಕಾದ ಸ್ಥಾನಗಳನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಟಾರ್ಗೆಟ್ 150 ಮಂತ್ರವನ್ನು ಜಪಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಂದರ್ಭದಲ್ಲಿ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳುವುದು ಹಾಗೂ ಕಾರ್ಯತಂತ್ರದ ಬ್ಲೂé ಪ್ರಿಂಟ್ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಶಾಸಕರ ಸಾರ್ವಜನಿಕ ನಡವಳಿಕೆ ಹಾಗೂ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರ ಜೊತೆ ಬೆರೆಯುವ ಕುರಿತು ಪಕ್ಷದ ಕೆಳ ಹಂತದ ಬೂತ್ ಮಟ್ಟದ ಕಾರ್ಯಕರ್ತ ಹಾಗೂ ವಿಸ್ತಾರಕರ ಮೂಲಕ ಸಂಪೂರ್ಣ ವಿವರ ಪಡೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಸಕರಿಂದಲೂ ಮಾಹಿತಿ:
ಪಕ್ಷದ ಮುಖಂಡರು ಶಾಸಕರ ಕಾರ್ಯ ವೈಖರಿ ಕುರಿತು ವಿವಿಧ ಪಕ್ಷದ ಕಾರ್ಯಕರ್ತರು, ಜಿಲ್ಲಾ ಮುಖಂಡರು ಹಾಗೂ ಪದಾಧಿಕಾರಿಗಳ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತಿದ್ದು, ಅದರ ಜೊತೆಗೆ ಸ್ವತಃ ಶಾಸಕರಿಂದಲೂ ಅವರ ಕಾರ್ಯ ವೈಖರಿ ಮತ್ತು ಸಾಧನೆ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕ್ಷೇತ್ರದ ವಸ್ತಸ್ಥಿತಿ ವರದಿ:
ಈಗಾಗಲೇ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಮೂರು ತಂಡಗಳಾಗಿ ರಾಜ್ಯ ಪ್ರವಾಸ ಆರಂಭಿಸಿರುವ ರಾಜ್ಯ ನಾಯಕರು ಪ್ರತಿ ಕ್ಷೇತ್ರದ ವಾಸ್ತವ ಚಿತ್ರಣವನ್ನು ಪಡೆದುಕೊಳ್ಳುತ್ತಿದ್ದು, ಕ್ಷೇತ್ರದಲ್ಲಿರುವ ಜಾತಿವಾರು ಜನಸಂಖ್ಯೆ, ನಿರ್ಣಾಯಕ ಪಾತ್ರವಹಿಸುವ ಸಮುದಾಯ, ಪ್ರತಿ ಕ್ಷೇತ್ರಕ್ಕೂ ಸರ್ಕಾರದಿಂದ ಜಾರಿಯಾಗಿರುವ ಯೋಜನೆಗಳು, ಕ್ಷೇತ್ರದ ಪ್ರಮುಖ ಸಮಸ್ಯೆ, ಯೋಜನೆಗಳ ಅನುಷ್ಠಾನದಲ್ಲಿ ಹಾಲಿ ಶಾಸಕರ ಪಾಲ್ಗೊಳ್ಳುವಿಕೆ ಒಂದು ವೇಳೆ ಬಿಜೆಪಿ ಶಾಸಕರಿಲ್ಲದ ಕ್ಷೇತ್ರದಲ್ಲಿ ಸಕ್ರೀಯರಾಗಿ ಕಾರ್ಯ ನಿರ್ವಹಿಸುತ್ತಿರುವ ನಾಯಕರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಎಲ್ಲರಿಗೂ ಟಿಕೆಟ್ ಖಾತ್ರಿಯಿಲ್ಲ:
ಪ್ರಸ್ತುತ ಬಿಜೆಪಿ ಶಾಸಕರಾಗಿದ್ದರೂ, ಈಗ ನಡೆಸುತ್ತಿರುವ ಪರೋಕ್ಷ ಮೌಲ್ಯಮಾಪನದ ವೇಳೆ ಅವರ ಕಾರ್ಯ ವೈಖರಿಯ ಬಗ್ಗೆ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರಿಂದ ಅಪಸ್ವರಗಳು ಕೇಳಿ ಬಂದಿದ್ದರೆ, ಅಂತಹ ಶಾಸಕರಿಗೆ ಮುಂದಿನ ಚುನಾವಣೆಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆ ಹಾಗೂ ಕ್ಷೇತ್ರದಲ್ಲಿ ಸರಿಯಾಗಿ ಜನರ ಜೊತೆ ಬೆರೆಯದ 80 ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ಬಿಜೆಪಿ ಹೊಸಬರಿಗೆ ಅವಕಾಶ ಕಲ್ಪಿಸಿತ್ತು. ಅದೇ ಮಾದರಿಯನ್ನು ಬಿಜೆಪಿ ರಾಜ್ಯದಲ್ಲಿಯೂ ಪ್ರಯೋಗ ಮಾಡಲು ಮುಂದಾಗಿದ್ದು, ಸಕ್ರೀಯರಾಗಿಲ್ಲದ ಪಕ್ಷದ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ಸಕ್ರೀಯ ಅಭ್ಯರ್ಥಿಯನ್ನೂ ಹುಡುಕುವ ಕೆಲಸವೂ ಈಗಿನಿಂದಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ.