Advertisement

Indo-Canada: ಗಡುವಿಗೆ ಮೊದಲೇ ಅಧಿಕಾರಿಗಳ ತೆರವು- ಕೆನಡಾ ಸರ್ಕಾರದ ತುರ್ತು ನಿರ್ಧಾರ

09:56 PM Oct 06, 2023 | Team Udayavani |

ಟೊರೊಂಟೋ/ನವದೆಹಲಿ: ಕೇಂದ್ರ ಸರ್ಕಾರದ ಪಟ್ಟಿಗೆ ಕೆನಡಾ ಬಾಗಿದೆ. ನವದೆಹಲಿಯಲ್ಲಿ ಇರುವ ಹೈಕಮಿಷನ್‌ನಿಂದ ಹೆಚ್ಚುವರಿಯಾಗಿ ಇರುವ ರಾಜತಾಂತ್ರಿಕ ಅಧಿಕಾರಿಗಳನ್ನು ತಗ್ಗಿಸಲು ಕೆನಡಾ ಮುಂದಾಗಿದೆ. ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಸಾವಿನ ವಿವಾದದ ಬೆನ್ನಲ್ಲಿಯೇ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಜಸ್ಟಿನ್‌ ಟ್ರೂಡ್ನೂ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಹೆಚ್ಚುವರಿಯಾಗಿ ಇರುವ ಅಧಿಕಾರಿಗಳನ್ನು ಕೌಲಾಂಪುರ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಗೊಳಿಸಲು ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ವಿಧಿಸಿರುವ ಅ.10ರ ಗಡುವಿನ ಒಳಗಾಗಿ ಈ ಕ್ರಮ ಕೈಗೊಂಡಿರುವುದು ಮಹತ್ವದ ಬೆಳವಣಿಗೆಯೇ ಆಗಿದೆ.

Advertisement

ಹೀಗಾಗಿ, ನವದೆಹಲಿಯಲ್ಲಿರುವ ಕೆನಡಾ ಹೈಕಮಿಷನ್‌ನಲ್ಲಿ 41 ರಾಜತಾಂತ್ರಿಕ ಅಧಿಕಾರಿ, ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದವರನ್ನು ವಾಪಸ್‌ ಕರೆಯಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಗಡುವು ನೀಡಿತ್ತು.

ಉಗ್ರನ ಸಾವಿಗೆ ಭಾರತ ಸರ್ಕಾರವೇ ಕಾರಣವೆಂದು ಕೆನಡಾ ಪ್ರಧಾನಿ ಆರೋಪಿಸಿದ ಬಳಿಕ 2 ದೇಶಗಳ ನಡುವೆ ರಾಜತಾಂತ್ರಿಕ ಸಮರ ಶುರುವಾಗಿತ್ತು. ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಭಾರತ ಹಸ್ತಕ್ಷೇಪ ನಡೆಸುತ್ತಿದೆ ಎಂದು ಟ್ರೂಡ್ನೂ ಹಲವು ಸಂದರ್ಭಗಳಲ್ಲಿ ಆರೋಪಿಸಿದ್ದರು. ಅವೆಲ್ಲವನ್ನೂ ಕೇಂದ್ರ ಸರ್ಕಾರ ಸಗಟಾಗಿ ತಿರಸ್ಕರಿಸಿದೆ.

ಮತ್ತೆ ಕೊಲೆ ಬೆದರಿಕೆ ಪೋಸ್ಟರ್‌
ಈ ಎಲ್ಲಾ ರಾದ್ಧಾಂತಗಳ ನಡುವೆ “ಕೆನಡಾದಲ್ಲಿರುವ ರಾಜತಾಂತ್ರಿಕರನ್ನು ಹತ್ಯೆ ಮಾಡಿ’ ಎಂಬ ಪೋಸ್ಟರ್‌ಗಳು ಆ ದೇಶದ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದ ಸರ್ರೆ ನಗರದಲ್ಲಿ ಕಂಡುಬಂದಿದೆ. ಖಲಿಸ್ತಾನಿ ಉಗ್ರರು ಅದಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ರೆಯ ಗುರುದ್ವಾರದಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಈ ಪ್ರಾರ್ಥನಾ ಕೇಂದ್ರ ಖಲಿಸ್ತಾನ ಟೈಗರ್‌ ಫೋರ್ಸ್‌ ಸಂಘಟನೆಯ ವಶದಲ್ಲಿ ಇತ್ತು. ಆದರೆ, ಅದರ ವಿರುದ್ಧ ಜಸ್ಟಿನ್‌ ಟ್ರೂಡ್ನೂ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಮೌನವಾಗಿಯೇ ಉಳಿದಿದೆ.

ಗ್ಯಾಂಗ್‌ಸ್ಟರ್‌ ಬಿಡುಗಡೆಯಾಗದಿದ್ದರೆ ಪ್ರಧಾನಿ ಮೋದಿ ಹತ್ಯೆ
ಸದ್ಯ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಸ್ಫೋಟಗೊಳಿಸುತ್ತೇವೆ ಎಂಬ ಬೆದರಿಕೆ ಹಾಕಲಾಗಿದೆ. ಜತೆಗೆ ಪ್ರಧಾನಿಯವರನ್ನು ಬಾಂಬ್‌ ದಾಳಿಯಲ್ಲಿ ಕೊಲ್ಲಲಾಗುತ್ತದೆ. 500 ಕೋಟಿ ರೂ. ಮೊತ್ತ ಪಾವತಿ ಮಾಡಬೇಕು ಎಂದು ಮುಂಬೈ ಪೊಲೀಸರಿಗೆ ಇ-ಮೈಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಎನ್‌ಐಎ ಮುಂಬೈ ಪೊಲೀಸರಿಗೆ ಸುಳಿವು ನೀಡಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್‌ ಪೊಲೀಸರಿಗೆ ಕೂಡ ಮುಂಬೈ ಪೊಲೀಸರು ಮಾಹಿತಿ ರವಾನಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next