Advertisement

ಜುಲೈ ಮೊದಲು ಐರೋಪ್ಯ ಗಡಿಗಳು ಮುಕ್ತ

12:03 PM Jun 07, 2020 | sudhir |

ಪ್ಯಾರಿಸ್‌: ಐರೋಪ್ಯ ಒಕ್ಕೂಟದ ದೇಶಗಳ ಗಡಿಗಳು ಜೂನ್‌ ತಿಂಗಳ ಅಂತ್ಯಕ್ಕೂ ಮುನ್ನ ಜನರಿಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ಐರೋಪ್ಯ ಒಕ್ಕೂಟದಲ್ಲಿರುವ ದೇಶಗಳಲ್ಲಿ ಜನರು ಸಂಚರಿಸಲು ಮುಕ್ತ ಅವಕಾಶವಿದ್ದು, ಗಡಿಗಳಲ್ಲಿ ಯಾವುದೇ ತಪಾಸಣೆ, ನೋಂದಣಿ ಇತ್ಯಾದಿ ಇರುವುದಿಲ್ಲ.

Advertisement

ಆದರೆ ಇಟಲಿಯಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ ಕಂಡ ಬಳಿಕ 26 ದೇಶಗಳ ಗಡಿಗಳನ್ನು ಮುಚ್ಚಲಾಗಿತ್ತು ಮತ್ತು ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಕೋವಿಡ್‌ ರೋಗವನ್ನು ನಿಯಂತ್ರಿಸಲು ಹೀಗೆ ಮಾಡಿದ್ದಾಗಿ ದೇಶಗಳು ಹೇಳಿಕೊಂಡಿದ್ದವು. ಇದರಿಂದಾಗಿ ಗಡಿಗಳಲ್ಲಿ ದೊಡ್ಡ ಪ್ರಮಾಣದ ಟ್ರಾಫಿಕ್‌ ಬ್ಲಾಕ್‌ಗಳಾಗಿದ್ದು, ವೈದ್ಯಕೀಯ ವಸ್ತುಗಳ ಸಾಗಾಟಕ್ಕೂ ತೀವ್ರವಾಗಿ ಸಮಸ್ಯೆಯಾಗಿತ್ತು.

ವ್ಯವಹಾರಕ್ಕೆ ಸುಲಭ
ಐರೋಪ್ಯ ಒಕ್ಕೂಟದ ದೇಶದಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ಇರುವುದರಿಂದ ವಿವಿಧ ದೇಶಗಳ ವ್ಯವಹಾರ ವೃದ್ಧಿಗೆ ಹಣದ ಹರಿವಿಗೆ ಸುಲಭವಾಗಿತ್ತು.

“ಜೂನ್‌ ಅಂತ್ಯದೊಳಗೆ ಐರೋಪ್ಯ ಒಕ್ಕೂಟದ ದೇಶಗಳ ಮಧ್ಯೆ ಮುಕ್ತ ಓಡಾಟ ಇರುವ ನಿರೀಕ್ಷೆ ಇರಲಿದೆ’ ಎಂದು ಭಾವಿಸುವುದಾಗಿ ಒಕ್ಕೂಟದ ಗೃಹ ವ್ಯವಹಾರಗಳ ಕಮಿಷನರ್‌ ಯಾÉವಾ ಜೊಹಾನ್ಸನ್‌ ಅಭಿಪ್ರಾಯಪಟ್ಟಿದ್ದಾರೆ. ಆದರೆ ಐರೋಪ್ಯ ಒಕ್ಕೂಟದಿಂದ ಹೊರಭಾಗಕ್ಕೆ ಸಂಚರಿಸುವುದನ್ನು ಜೂ.15ರವರೆಗೆ ನಿಯಂತ್ರಿಸುವುದಾಗಿ ಅವರು ಹೇಳಿದ್ದಾರೆ.
ಐರೋಪ್ಯ ಒಕ್ಕೂಟದಲ್ಲಿ ಕೋವಿಡ್‌ನಿಂದಾಗಿ 1.75 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಬ್ರಿಟನ್‌, ಇಟಲಿ, ಫ್ರಾನ್ಸ್‌, ಸ್ಪೇನ್‌ನ ಪ್ರಜೆಗಳು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.

ಐರೋಪ್ಯ ಒಕ್ಕೂಟದ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕುರಿತ ಕೇಂದ್ರ ಅಭಿಪ್ರಾಯಪಡುವಂತೆ ಇನ್ನಷ್ಟು ಕ್ರಮಗಳು ಅಗತ್ಯವಿದೆ. ಜನರು ಸುರಕ್ಷಿತವಾಗಿರಲು ಸಾಮಾಜಿಕ ಅಂತರದಂತಹ ಕ್ರಮಗಳು ಬೇಕಾಗಿವೆ ಎಂಬುದನ್ನೂ ಜೊಹಾನ್ಸನ್‌ ಹೇಳಿದ್ದಾರೆ.

Advertisement

ಗಡಿ ಮುಕ್ತ
ಇದೇ ವೇಳೆ ಜೂ.15ರ ಬಳಿಕ ಗಡಿಯಲ್ಲಿ ತಪಾಸಣೆ ಮಾಡುವುದನ್ನು ಕೈಬಿಡುವುದಾಗಿ ಜರ್ಮನಿ ಹೇಳಿದೆ. ಆ ದಿನದಿಂದ ಐರೋಪ್ಯ ಒಕ್ಕೂಟದ ಪ್ರಜೆಗಳಿಗೆ ಓಡಾಟಕ್ಕೆ ಸ್ವಾತಂತ್ರ್ಯ ಇರಲಿದೆ. ಇದರಿಂದಾಗಿ ಐರೋಪ್ಯ ಒಕ್ಕೂಟದ ಜನ ಬೇಸಗೆ ರಜೆ ಕಳೆಯುವ ಬಗ್ಗೆ ಆಲೋಚನೆ ಮಾಡಿಕೊಳ್ಳಬಹುದು. ತಮ್ಮ ಮುಂದಿನ ಕೆಲಸಗಳ ಬಗ್ಗೆಯೂ ಆಲೋಚಿಸಬಹುದಾಗಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಬೀಚ್‌ಗಳು ಮತ್ತು ಪರ್ವತಗಳು ಪ್ರವಾಸಿಗರಿಗೆ, ಟ್ರೆಕ್ಕಿಂಗ್‌ ಮಾಡುವವರಿಗೆ ಮುಕ್ತವಾಗಿರಲಿದೆ ಎಂದು ಜರ್ಮನಿಯ ಒಳಾಡಳಿತ ಸಚಿವ ಹೋರ್ಸ್ಡ್ ಸೀಹೋಫ‌ರ್‌ ಹೇಳಿದ್ದಾರೆ.

ಪ್ರವಾಸೋದ್ಯಮ ಪ್ರಧಾನ
ಐರೋಪ್ಯ ಒಕ್ಕೂಟದ ದೇಶಗಳಿಗೆ ಪ್ರವಾಸೋದ್ಯಮ ಅತಿ ಪ್ರಧಾನವಾಗಿದ್ದು, ದೇಶದ ಆದಾಯಕ್ಕೆ ಗಣನೀಯ ಪ್ರಮಾಣದಲ್ಲಿ ಆದಾಯ ತರುತ್ತಿವೆ. ಕೋವಿಡ್‌ನಿಂದಾಗಿ ಅಲ್ಲಿನ ಆದಾಯವೆಲ್ಲವೂ ಸಂಪೂರ್ಣವಾಗಿ ನೆಲಕ್ಕಚ್ಚಿವೆ. ಇಟಲಿ ಒಂದರಲ್ಲೇ ಆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ.13ರಷ್ಟು ಪ್ರವಾಸೋದ್ಯಮದಿಂದ ಬರುತ್ತದೆ.

ಇದೇ ವೇಳೆ ಉದ್ಯಮದಿಂದಲೇ ಆದಾಯ ಗಳಿಸುವ ಗ್ರೀಕ್‌ ಮುಂತಾದ ದೇಶಗಳು ಪ್ರವಾಸಿಗರಿಗೆ ತೆರೆದು ಕೊಂಡಿವೆ. ಸ್ಪೇನ್‌ ಕೂಡ ಪ್ರವಾಸೋ ದ್ಯಮದಿಂದ ಶೇ.12ರಷ್ಟು ಆದಾಯ ಪಡೆಯುತ್ತಿದ್ದು, ಅಂ.ರಾ. ಗಡಿಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸುವುದಾಗಿ ಹೇಳಿದೆ. ಈ ಬಗ್ಗೆ ಅದು ಈಗಾಗಲೇ ಐರೋಪ್ಯ ಒಕ್ಕೂಟಕ್ಕೆ ಪತ್ರ ಬರೆದಿದೆ. ಹಲವು ದೇಶಗಳು ಇದೇ ರೀತಿಯ ಆಲೋಚನೆಗಳನ್ನು ಹೊಂದಿದ್ದು, ಒಕ್ಕೂಟಕ್ಕೆ ಪತ್ರ ಬರೆದಿದೆ. ಐರೋಪ್ಯ ಒಕ್ಕೂಟಕ್ಕೆ ಶೇ.81ರಷ್ಟು ಹೊರ ದೇಶಗಳಿಂದಲೇ ಪ್ರತಿವರ್ಷ ಪ್ರವಾಸಿಗರು ಆಗಮಿಸುತ್ತಾರೆ. ಅಮೆರಿಕ ಒಂದರಿಂದಲೇ ಸುಮಾರು 15 ಲಕ್ಷದಷ್ಟು ಪ್ರವಾಸಿಗರು ವರ್ಷವೂ ಆಗಮಿಸುತ್ತಾರೆ. ಒಂದು ಬಾರಿ ಐರೋಪ್ಯ ಒಕ್ಕೂಟದ ವೀಸಾ ಪಡೆದು ಎಲ್ಲ ದೇಶಗಳಲ್ಲಿ ಸಂಚರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next