ಚಳಿಗಾಲದ ಸಂದರ್ಭದಲ್ಲಿ ಭಾರತಕ್ಕೆ ಬರುವ ಬಾತುಕೋಳಿಗಳಲ್ಲಿ ಕಾಡು ಬಾತು ಒಂದು. ಇವು ಸಮುದ್ರ ತೀರ, ಸಮುದ್ರಕ್ಕೆ ಸೇರುವ ಮುಖಜ ಭೂಮಿಯ ಪ್ರದೇಶದಲ್ಲಿ ಗೂಡುಕಟ್ಟುತ್ತವೆ. ಗಂಟೆಗೆ 200 ಕಿ.ಮೀ ವೇಗದಲ್ಲಿ ಹಾರುವ ಶಕ್ತಿ ಈ ಬಾತುಕೊಳಿಗೆ ಇದೆ ಎನ್ನಲಾಗಿದೆ.
ಚಳಿಗಾಲ ಕಳೆಯಲು ನಮ್ಮ ದೇಶಕ್ಕೆ ಬರುವ ಮುದ್ದಾದ ಬಾತುಕೋಳಿಗಳಲ್ಲಿ ಇದೂ ಒಂದು. ಸಪೂರವಾಗಿ ಉದ್ದವಾಗಿರುವ ನೀಲಿ ಚುಂಚು ಈ ಬಾತು ಕೋಳಿಯ ಆಕರ್ಷಣೆ. ಇದರ ನೆತ್ತಿ, ಮುಂದಲೆಯಲ್ಲಿ ದಟ್ಟ ಮತ್ತು ತಿಳಿ ಕಂದು ಮಚ್ಚೆಯ ರೀತಿ ಇರುತ್ತದೆ. ಬಾತು ಕೋಳಿಗಳನ್ನು ಸುಲಭವಾಗಿ ಗುರುತಿಸಲು ಇರುವ ಕುರುಹು ಇದೊಂದೇ. ನಮ್ಮ ದೇಶಕ್ಕೆ ವಲಸೆ ಬರುವ ಎಲ್ಲ ಜಾತಿಯ ಬಾತುಗಳಿಗಿಂತಲೂ ಇದು ಚಿಕ್ಕದು. ತಲೆ ಸ್ವಲ್ಪ ಚಪ್ಪಟೆಯಾಗಿದ್ದು, ಮುಂಭಾಗದಲ್ಲಿ ಇಳಿಜಾರಿನಂತಿರುತ್ತದೆ. ಮರಿಮಾಡುವ ಸಂದರ್ಭದಲ್ಲಿ ಗಂಡು ಬಾತಿನ ಬಣ್ಣ ಬದಲಾಗುತ್ತದೆ.
ಈ ಹಕ್ಕಿ ನಮ್ಮ ದೇಶದ ನೀರುಹಕ್ಕಿಗಳಾದ ಕೂಟ್, ಗ್ರಾಬೆ, ಹೆಜ್ಜಾರ್ಲೆ, ಕೊಕ್ಕರೆ, ಬಕ ಇವುಗಳ ಜೊತೆ ಇರುತ್ತವೆ. ಸಮುದ್ರ ತೀರ, ಸಮುದ್ರಕ್ಕೆ ಸೇರುವ ಮುಖಜ ಭೂಮಿ, ಜೌಗು ಪ್ರದೇಶದಲ್ಲಿ ಇವು ಗೂಡು ಕಟ್ಟುತ್ತದೆ. ಸರೋವರ, ನೀರಿನ ಹೊಂಡ ಸ್ವಲ್ಪ ಕಡಿಮೆ ನೀರಿರುವ ಸ್ಥಳದಲ್ಲಿ ಅಂದರೆ ಭೂಮಿಯಮೇಲೇ ಗೂಡುಮಾಡಿ ಮರಿಮಾಡುತ್ತವೆ. ಇದಕ್ಕಾಗಿ ಜೊಂಡು ಹುಲ್ಲು, ಭತ್ತದ ಹೊಟ್ಟನ್ನು ಬಳಸುತ್ತದೆ. ಹೀಗಾಗಿ, ಕರ್ನಾಟಕಕ್ಕೂ ಈ ಹಕ್ಕಿ ಆಗಾಗ ಬಂದು ಹೋಗುತ್ತದೆಯಂತೆ. ಇದರ ರೆಕ್ಕೆ ಮತ್ತು ಬಾಲದ ಪುಕ್ಕ ಚೂಪಾಗಿದೆ. ಹಾಗಾಗಿ ವೇಗವಾಗಿ ಹಾರಲು ಸಹಾಯಕವಾಗಿದೆ. ಇದು ಹಾರುವಾಗ ಸೂಕ್ಷ್ಮವಾಗಿ ಲಕ್ಷ್ಯವಿಟ್ಟು ಕೇಳಿದರೆ, “ಸೂಂಯ್’ ಅನ್ನೋ ಸಪ್ಪಳ ಕೇಳುತ್ತದೆ. ಗಂಟೆಗೆ ಸುಮಾರು 200 ಕಿ.ಮೀ ವೇಗವಾಗಿ ಹಾರುವ ಶಕ್ತಿ ಈ ಬಾತುಕೋಳಿಗಳಿಗೆ ಇದೆ ಎನ್ನಲಾಗಿದೆ.
ಈ ಬಾತು ಕೋಳಿ ಒಂದು ಸಲಕ್ಕೆ 5-6 ಮೊಟ್ಟೆ ಇಡುತ್ತದೆ. ಸುಮಾರು 28 ರಿಂದ 32 ದಿನದ ಅವಧಿಯಲ್ಲಿ ಮರಿಮಾಡುತ್ತದೆ. ಪುಟ್ಟ ಕೋಳಿ ಮರಿಯಂತೆ- ತಂದೆ ತಾಯಿಯ ಜೊತೆ ಓಡಾಡಿಕೊಂಡು ಆಹಾರ ತಿನ್ನುತ್ತದೆ. ತಂದೆ ತಾಯಿಯೇ ನೀರಿನಲ್ಲಿ ತೇಲುವುದು, ಮುಳುಕು ಹೊಡೆಯುವುದು, ನೀರಿನ ಮೇಲ್ಮೆ„ಯಲ್ಲಿ ನೀರು ಹಾರಿಸುತ್ತಾ ತೇಲುವುದನ್ನು ಕಲಿಸುತ್ತದೆ. ಆ ನಂತರ ಗೂಡು ಬಿಟ್ಟು ಹಾರುತ್ತದೆ. ಈ ಕಾಡು ಬಾತು ಸುಮಾರು 40-50 ಸೆಂ.ಮೀ ಉದ್ದ ಇರುತ್ತದೆ. ಇದರ ರೆಕ್ಕೆಯ ಅಗಲ -7-8 ಸೆಂ.ಮೀ. ಪ್ರಾಯಕ್ಕೆ ಬಂದ ಗಂಡು ಬಾತು-ಕಪ್ಪು-ಬೂದು ಬಣ್ಣದಿಂದ ಕೂಡಿರುತ್ತದೆ. ಸ್ವಲ್ಪ ಗುಲಾಬಿ ವರ್ಣದ ಎದೆ, ಬಿಳಿ ಹೊಟ್ಟೆ, ಕಂದು ಕೆಂಪು ಛಾಯೆಯ ತಲೆ, ಹಳದಿ ಬಣ್ಣದ ಗೆರೆ ನೆತ್ತಿಯಲ್ಲಿರುತ್ತದೆ. ಹೆಣ್ಣಿಗೆ ಹೋಲಿಸಿದರೆ ಗಂಡು ಹೆಚ್ಚು ಗಾಢ ವರ್ಣದಿಂದ ಕೂಡಿರುತ್ತದೆ.
ಇದರ ಮಾಂಸ ಬಹಳರುಚಿಕರ. ಹೀಗಾಗಿ, ಇದನ್ನು ಬೇಟೆಯಾಡಿ ತಿನ್ನುವ ಮಂದಿ ನಮ್ಮಲ್ಲೂ, ವಿದೇಶಗಳಲ್ಲೂ ಇರುವುದರಿಂದ ಇದರ ಸಂಖ್ಯೆ ಕ್ಷೀಣವಾಗುತ್ತಿದೆ.