ವಾಷಿಂಗ್ಟನ್ : ಚಂದ್ರನ ಮೇಲೆ ಕಾಲಿಟ್ಟಿದ್ದ ಅಮೆರಿಕದ ಗಗನಯಾನಿ ಯುಜೀನ್ ಸೆರ್ನಾನ್ ಅವರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ . ಅವರಿಗೆ 82 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತಿದ್ದ ಅವರು ಕೊನೆಯುಸಿರೆಳೆದಿರುವ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ.
ಸೆರ್ನಾನ್ ಅವರು 1996 ರ ಜೂನ್ ತಿಂಗಳಿನಲ್ಲಿ ‘ಜೆಮಿನಿ 9 ಎ’ ,1969 ರ ಮೇ ತಿಂಗಳಿನಲ್ಲಿ ‘ಅಪೋಲೊ 10’ ಮತ್ತು 1972 ರಲ್ಲಿ ಕೊನೆಯ ಮತ್ತು 3 ನೇಯ ‘ಅಪೊಲೊ- 17 ‘ಬಾಹ್ಯಾಕಾಶ ಯಾನದ ಕಮಾಂಡರ್ ಆಗಿ ಚಂದ್ರಯಾನ ಕೈಗೊಂಡಿದ್ದರು. ಮೂರು ಬಾರಿ ಗಗನ ಯಾನ ನಡೆಸಿರುವ ಸೆರ್ನಾನ್ 2 ಬಾರಿ ಚಂದ್ರನ ಮೇಲೆ ಕಾಲಿಟ್ಟಿರುವುದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ.
ಇದುವರೆಗೆ ಚಂದ್ರನ ಮೇಲ್ಮೈ ಮೇಲೆ ಪಾದವಿರಿಸಿದ ಕೊನೆಯ ಮಾನವ ಎಂಬ ಖ್ಯಾತಿ ಸೆರ್ನಾನ್ ಅವರದ್ದಾಗಿದ್ದು, ಅವರ ನಿಧನಕ್ಕೆ ನಾಸಾ ತೀವ್ರ ಕಂಬನಿ ಮಿಡಿದಿದೆ.
ಅಮೆರಿಕದ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿದ್ದ ಸೆರ್ನಾನ್ ಅವರು ಗಗನಯಾತ್ರಿ ಮಾತ್ರವಲ್ಲದೆ ನೌಕಾ ವಿಮಾನ ಚಾಲಕ, ಎಲೆಕ್ಟ್ರಿಕಲ್ ಎಂಜಿನಿಯರ್, ಏರೋನಾಟಿಕಲ್ ಎಂಜಿನಿಯರ್ ಮತ್ತು ಪೈಲಟ್ ಆಗಿ ಅಪಾರ ಅನುಭವ ಹೊಂದಿ ಸಾಟಿಯಿಲ್ಲದ ಸಾಧಕ ಎನಿಸಿಕೊಂಡಿದ್ದರು.
ಸೆರ್ನಾನ್ ಅವರು ಪತ್ನಿ ಜಾನ್,ಓರ್ವ ಪುತ್ರಿ, ಇಬ್ಬರು ಮಲಮಕ್ಕಳು ಮತ್ತು 9 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.