Advertisement

ಯುರೋಪ್‌ ಗಡಿ ನಿರ್ಬಂಧ ಜೂ. 15ರ ವರೆಗೆ ವಿಸ್ತರಣೆ

08:59 AM May 11, 2020 | sudhir |

ಯುರೋಪ್‌: ಯುರೋಪ್‌ ದೇಶಗಳ ಒಳಗೆ ಐರೋಪ್ಯೇತರ ಪ್ರಜೆಗಳ ಅನಗತ್ಯ ಪ್ರಯಾಣಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಮುಂದುವರಿಸಲು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಯುರೋಪಿಯನ್‌ ಕಮಿಶನ್‌ ಕರೆ ನೀಡಿದೆ.
ದೇಶಗಳ ಬಾಹ್ಯ ಗಡಿಗಳಲ್ಲಿ ಐರೋಪ್ಯೇತರ ಪ್ರಜೆಗಳಿಗೆ ಇರುವ ಪ್ರಯಾಣ ನಿರ್ಬಂಧವನ್ನು ಜೂ. 15ರ ತನಕ ವಿಸ್ತರಿಸಲು ಕಮಿಶನ್‌ ಸಲಹೆ ಮಾಡಿದೆ. ಯುರೋಪ್‌ ಹಾಗೂ ಒಟ್ಟಾರೆಯಾಗಿ ಜಗತ್ತಿನಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಕಮಿಶನ್‌ ಹೇಳಿದೆ.

Advertisement

ಕೋವಿಡ್ ವೈರಸ್‌ ಹರಡುವುದನ್ನು ತಡೆಯುವ ಸಲುವಾಗಿ ಐರೋಪ್ಯೇತರ ಪ್ರಜೆಗಳಿಗೆ ದೇಶದ ಗಡಿಗಳನ್ನು ಮುಚ್ಚುವ ನಿರ್ಧಾರವನ್ನು ಮಾರ್ಚ್‌ನಲ್ಲಿ ಕೈಗೊಳ್ಳಲಾಗಿತ್ತು. ಇದಕ್ಕೂ ಮೊಲು ಅಮೆರಿಕ ಯುರೋಪ್‌ ದೇಶಗಳಿಗೆ ಪ್ರವಾಸ ಹೋಗುವುದನ್ನು ನಿರ್ಬಂಧಿಸಿತ್ತು.

ಐರೊಪ್ಯೇತರ ಪ್ರಜೆಗಳ ಪ್ರಯಾಣವನ್ನು ನಿರ್ಬಂಧಿಸಿದರೂ ಆಂತರಿಕ ಗಡಿಗಳ ಒಳಗೆ ಮತ್ತು ವೀಸಾ ಮುಕ್ತ ಶೆಂಗೆನ್‌ಗೆ ಯುರೋಪ್‌ ಪ್ರಜೆಗಳ ಅಡಚಣೆ ರಹಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು ಎಂದು ಕಮಿಶನ್‌ ಹೇಳಿದೆ.

ಬಾಹ್ಯ ಗಡಿಗಳ ನಿರ್ಬಂಧವನ್ನು ಸಡಿಲಿಸುವ ಮೊದಲು ಆಂತರಿಕ ಗಡಿಗಳಲ್ಲಿರುವ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸುವ ಅಗತ್ಯವಿದೆ. ಹಂತಹಂತವಾಗಿ ಸಮನ್ವಯದಿಂದ ಈ ಕಾರ್ಯವನ್ನು ನಡೆಸಬೇಕು. ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬಂದರೆ ಶೆಂಗೆನ್‌ನ ಪ್ರಯಾಣಕ್ಕೆ ಆದ್ಯತೆ ನೀಡುವುದು ನಮ್ಮ ಮೊದಲ ಉದ್ದೇಶ ಎಂದು ಐರೋಪ್ಯ ಒಕ್ಕೂಟದ ಗೃಹ ವ್ಯವಹಾರಗಳ ಸಚಿವ ಯಿಲ್ವ ಜಾನ್ಸನ್‌ ಹೇಳಿದ್ದಾರೆ.

ಕೋವಿಡ್ ನಿಯಂತ್ರಿಸುವ ಸಲುವಾಗಿ ಎಲ್ಲ ದೇಶಗಳು ಪ್ರಯಾಣಕ್ಕೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿವೆ. ಯುರೋಪ್‌ನಲ್ಲಿ ನಿರ್ಬಂಧಗಳಿದ್ದರೂ ಇದರಿಂದ ಆರ್ಥಿಕತೆಗೆ ಬಹಳಷ್ಟು ಹಾನಿಯಾಗಿದೆ ಮತ್ತು ಯುರೋಪ್‌ ಖಂಡದಾದ್ಯಂತ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ.

Advertisement

ಈ ಹಿನ್ನೆಲೆಯಲ್ಲಿ ಜೂ.15ರಿಂದಾಚೆಗೆ ಪ್ರಯಾಣ ನಿರ್ಬಂಧ ಮುಂದುವರಿಸುವುದಾದರೆ ಅದಕ್ಕೂ ಮೊದಲು ಪರಿಸ್ಥಿತಿಯ ಮರು ಅವಲೋಕನ ಅಗತ್ಯವಿದೆ ಎಂದು ಕಮಿಶನ್‌ ಅಭಿಪ್ರಾಯಪಟ್ಟಿದೆ. ಯುರೋಪ್‌ ಖಂಡದಲ್ಲೀಗ ಎರಡು ಬಗೆಯ ಗುಂಪುಗಳಿವೆ. ಕೆಲವು ರಾಷ್ಟ್ರಗಳು ಈಗಾಗಲೇ ಸೋಂಕನ್ನು ತಕ್ಕಮಟ್ಟಿಗೆ ತಡೆಗಟ್ಟಿ, ಲಾಕ್‌ಡೌನ್‌ ತೆರವಿಗೆ ಮುಂದಾಗಿವೆ. ಕೆಲವು ರಾಷ್ಟ್ರಗಳು ಈಗಾಗಲೇ ಸಾಕಷ್ಟು ವಿನಾಯಿತಿ ಜಾರಿಗೆ ತಂದಿವೆ. ಇನ್ನು ಕೆಲವು ರಾಷ್ಟ್ರಗಳು ಲಾಕ್‌ಡೌನ್‌ ತೆರವಿಗೆ ಯೋಚಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next