ಹಾಸನ/ಸಕಲೇಶಪುರ: ಎತ್ತಿನಹೊಳೆಯಲ್ಲಿ ನೀರು ಕಡಿಮೆಯಾಗುವ ಮೊದಲೇ 2 ವಾರದೊಳಗೆ ಮುಖ್ಯಮಂತ್ರಿಗಳಿಂದ ಯೋಜನೆ ಉದ್ಘಾಟಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸಕಲೇಶಪುರ ತಾಲೂಕು ಕುಂಬರಡಿ ಬಳಿ ಎತ್ತಿನಹೊಳೆಯ ವಿಯರ್ -1 (1ನೇ ಚೆಕ್ ಡ್ಯಾಂ)ರಿಂದ ಪ್ರಾಯೋಗಿಕವಾಗಿ ನೀರೆತ್ತುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿದ ಬಳಿಕ ಹರಿಯುತ್ತಿದ್ದ ನೀರಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಎತ್ತಿನಹೊಳೆ ನಮ್ಮ ಸರಕಾರದ ಮಹತ್ವಾಕಾಂಕ್ಷೆ ಯೋಜನೆ. ಒಟ್ಟು 8 ವಿಯರ್‌ಗಳ ಪೈಕಿ ಈಗಾಗಲೇ 5 ವಿಯರ್‌ಗಳಿಂದ ಒಟ್ಟು 1500 ಕ್ಯೂಸೆಕ್ ನೀರೆತ್ತಲಾಗುತ್ತಿದೆ. ಈಗಾಗಲೇ ಸಿಎಂ ಜತೆ ಮಾತನಾಡಿದ್ದೇನೆ. ಶುಭ ದಿನ, ಮುಹೂರ್ತ ನೋಡಿ ದಿನಾಂಕ ನಿಗದಿಪಡಿಸಿ ಮುಖ್ಯಮಂತ್ರಿ, ಸಚಿವರನ್ನು ಆಹ್ವಾನಿಸಿ ಯೋಜನೆ ಉದ್ಘಾಟಿಸಲಾಗುವುದು ಎಂದರು.
ಅವೈಜ್ಞಾನಿಕ ಕಾಮಗಾರಿಯಿಂದ ಭೂ ಕುಸಿತವಾಗುತ್ತಿದೆ. ಒಂದು ರೂ. ಪರಿಹಾರ ನೀಡಿಲ್ಲ ಎಂದು ಸ್ಥಳೀಯ ಶಾಸಕ ಸಿಮೆಂಟ್ ಮಂಜು ಆರೋಪದ ಬಗ್ಗೆ, ಎಲ್ಲೆಲ್ಲಿ ಹಾನಿ ಆಗಿದೆಯೋ ಅದನ್ನು ಪರಿಶೀಲಿಸಿ, ದುರಸ್ತಿಪಡಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.