Advertisement

ಎತ್ತಿನಹೊಳೆ: ಸಮಾನ ಪರಿಹಾರಕ್ಕೆ ತೀರ್ಮಾನ

07:23 AM Feb 11, 2019 | |

ತುಮಕೂರು: ಎತ್ತಿನಹೊಳೆ ಯೋಜನೆಯಡಿ ಮುಳುಗಡೆಯಾಗುವ ಕೊರಟಗೆರೆ ಹಾಗೂ ದೊಡ್ಡ ಬಳ್ಳಾಪುರ ತಾಲೂಕಿನ ಭೂಮಿಗೆ ಒಂದೇ ಮಾದರಿ ಯಲ್ಲಿ ಸಮಾನ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಈ ಸಂಬಂಧ ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಜಲಾಶಯ ನಿರ್ಮಾಣ ಮಾಡಲು 5,000 ಎಕರೆ ಭೂಮಿ ಅವಶ್ಯವಿದೆ. ಈ ಜಮೀನನ್ನು ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ರೈತರಿಂದ ಪಡೆಯಲಾಗುತ್ತದೆ.

ತುಮ ಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಬ್‌ ರಿಜಿಸ್ಟಾರ್‌ ಮಾರುಕಟ್ಟೆ ಮೌಲ್ಯ ಎಕರೆಗೆ 8 ಲಕ್ಷವಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸಬ್‌ ರಿಜಿಸ್ಟಾರ್‌ ಮಾರುಕಟ್ಟೆ ಮೌಲ್ಯ ಎಕರೆಗೆ ಅಂದಾಜು 32 ಲಕ್ಷದಷ್ಟಿದೆ. ಆದರೆ, ಎತ್ತಿನ ಹೊಳೆ ಯೋಜನೆಯ ಬೈರಗೊಂಡ್ಲು ಜಲಾಶಯ ಪ್ರದೇಶಕ್ಕೆ ಎರಡೂ ತಾಲೂಕಿನ ಭೂ ಸ್ವಾಧೀನಪಡಿಸಿ ಕೊಳ್ಳುವು ದರಿಂದ ಏಕರೂಪ ಪರಿಹಾರ ನೀಡುವಂತೆ ಕೊರಟಗೆರೆ ತಾಲೂಕಿನ ರೈತರು ಮನವಿ ಮಾಡಿದ್ದಾರೆ ಎಂದರು.

20 ಕೋಟಿ ರೂ. ಹಣ ಮೀಸಲು: ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಜಲಾಶಯಕ್ಕೆ ಮುಳು ಗಡೆಯಾಗುವ ಕೊರಟಗೆರೆ ತಾಲೂಕಿನ ಸಂತ್ರಸ್ತರಿಗೆ ಪುನರ್‌ ವಸತಿ ಹಾಗೂ ಅಗತ್ಯ ಮೂಲ ಸೌಕರ್ಯ ಒದಗಿಸಲು ಈ ಸಾಲಿನ ಬಜೆಟ್‌ನಲ್ಲಿ 50 ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಕೊರಟಗೆರೆ, ಮಧುಗಿರಿ, ಪಾವಗಡ ಹಾಗೂ ತುಮಕೂರು ತಾಲೂಕಿನ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಹಾಗೂ ಶಿರಾ ತಾಲೂಕಿನ ಅಂರ್ತಜಲ ಅಭಿವೃದ್ಧಿಗೆ 20 ಕೋಟಿ ರೂ. ಹಣ ಮೀಸಲಿಡಲಾಗಿದೆ ಎಂದರು.

ಬಜೆಟ್‌ನಲ್ಲಿ ಹಣ: ಹೇಮಾವತಿ ಯೋಜನೆ ವ್ಯಾಪ್ತಿಯ ತುರುವೇಕೆರೆ, ಗುಬ್ಬಿ, ತುಮಕೂರುಹಾಗೂ ಶಿರಾ ತಾಲೂಕುಗಳ ಸಮರ್ಪಕ ನೀರು ನಿರ್ವಹಣೆಗೆ 200 ಕೋಟಿ ರೂ. ಅನುದಾನ ಹಾಗೂ ತುರುವೇಕೆರೆ ತಾಲೂಕಿನ ಆದಿಶಕ್ತಿ ಮಾತೆಯರ ವೃದ್ಧಾ ಶ್ರಮ ಅಭಿವೃದ್ಧಿಗೆ 2 ಕೋಟಿ ರೂ., ತಿಪಟೂರಿನಲ್ಲಿ ಹಾಸ್ಯ ನಟ ದಿವಂಗತ ನರಸಿಂಹರಾಜು ಅವರ ಹೆಸರಿನಲ್ಲಿ ಸ್ಮಾರಕ ಸಭಾ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

Advertisement

ಮೆಟ್ರೋ ರೈಲು ಮಾರ್ಗಕ್ಕೆ ಚಿಂತನೆ: ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶವನ್ನು ಒಳ ಗೊಂಡಂತೆ ಚೆನ್ನೈ-ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ, ಇಂಡಸ್ಟ್ರಿ ಟೌನ್‌ಶಿಪ್‌ ಸ್ಥಾಪನೆಗೆ ಕ್ರಮ, ಮುಂದಿನ 5 ವರ್ಷಗಳಲ್ಲಿ ಸುಮಾರು 50 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದ್ದು, 2 ಲಕ್ಷ ರೂ. ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ಬೆಂಗಳೂರು-ತುಮಕೂರು-ವಸಂತನರಸಾಪುರ-ಬೆಂಗಳೂರು ರೈಲು ಮಾರ್ಗ ಹಾಗೂ ಮೆಟ್ರೋ ರೈಲು ಮಾರ್ಗಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದರು.

ವಿಶೇಷ ಪ್ಯಾಕೇಜ್‌: ತುಮಕೂರು ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಈ ಸಾಲಿನ ಬಜೆಟ್‌ನಲ್ಲಿ 4 ಕೋಟಿ ರೂ. ಅನುದಾನ, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗಾಗಿ 125 ಕೋಟಿ ರೂ. ವಿಶೇಷ ಪ್ಯಾಕೇಜ್‌ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕೆ 7 ಕೋಟಿ ರೂ. ವೆಚ್ಚದಲ್ಲಿ ಕೆ-ಟೆಕ್‌ ನಾವೀನ್ಯತಾ ಕೇಂದ್ರ ಸ್ಥಾಪಿಸಲಾಗುವುದು, ಜಿಲ್ಲಾಸ್ಪತ್ರೆ ಆವರಣದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್‌ ಸ್ತನರೇಖನ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

125 ಕೋಟಿ ರೂ.ಅನುದಾನ: ಜಿಲ್ಲೆಯ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತುರುವೇ ಕೆರೆ ತಾಲೂಕಿನ ಮಣಿಚೆಂಡೂರಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಸಂಕೀರ್ಣ ಹಾಗೂ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗದಲ್ಲಿ ಇಂದಿರಾ ಗಾಂಧಿ ವಸತಿ ಶಾಲಾ ಸಂಕೀರ್ಣ, ಚಿಕ್ಕನಾಯಕನಹಳ್ಳಿ ತಾಲೂಕಿನ ಅಂದನಕೆರೆ ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲಾ ಸಂಕೀರ್ಣ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣಕ್ಕೆ ಸುಮಾರು 125 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ ಎಂದರು.

ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ: ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿ ಕಳೆದು ಕೊಂಡಿರುವ ರೈತರ ಮಕ್ಕಳ ಹಿತದೃಷ್ಟಿಯಿಂದ ಸ್ಥಳೀಯರಿಗೆ ಉದ್ಯೋಗ ನೀಡಲು ಈಗಾಗಲೇ ಸರ್ಕಾರ ಆದೇಶ ನೀಡಿದ್ದು, ಈ ನಿಟ್ಟಿನಲ್ಲಿ ಮುಂದಿನ ವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಉದ್ಯಮಿಗಳ ಸಭೆ ಕರೆದು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ಶುಭಾ ಕಲ್ಯಾಣ್‌, ಎಸ್‌ಪಿ ಡಾ.ಕೋನಂ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಶಿವಕುಮಾರ್‌, ಡಿಎಚ್ಒ ಡಾ.ಚಂದ್ರಿಕಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next