Advertisement

ಎತ್ತಿನಹೊಳೆ ಯೋಜನೆ ಕಾಂಗ್ರೆಸ್‌-ಬಿಜೆಪಿಯ ರಾಜಕೀಯ ಗಿಮಿಕ್‌

04:54 PM Jun 20, 2017 | Harsha Rao |

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ ಮೂರು ಸ್ಥಾನಗಳನ್ನಾದರೂ ಗೆಲ್ಲಲೇ ಬೇಕೆಂಬ ಛಲದೊಂದಿಗೆ ಜೆಡಿಎಸ್‌ ಪಕ್ಷವು ಉಭಯ ಜಿಲ್ಲೆಗಳಲ್ಲಿ ಚುನಾವಣಾ ರಣತಂತ್ರಗಳನ್ನು ರೂಪಿಸುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕಳೆದ ಮೂರ್‍ನಾಲ್ಕು ತಿಂಗಳೊಳ ಅವಧಿಯಲ್ಲಿ ಹಲವು ಬಾರಿ ಜಿಲ್ಲೆಗೆ ಬಂದು ಹೋಗಿದ್ದಾರೆ. ಆ ಮೂಲಕ ಕರಾವಳಿ ಭಾಗದಲ್ಲಿ ಜೆಡಿಎಸ್‌ ತನ್ನ ಖಾತೆ ತೆರೆಯುವುದಕ್ಕೆ ಶತಾಯ-ಗತಾಯ ಪ್ರಯತ್ನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಲು ಮಂಗಳೂರಿಗೆ ರವಿವಾರ ಆಗಮಿಸಿದ ಎಚ್‌.ಡಿ. ಕುಮಾರಸ್ವಾಮಿ ಅವರು “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. 

Advertisement

– ಪಶ್ಚಿಮ ಘಟ್ಟದ ಎತ್ತಿನಹೊಳೆ ಯೋಜನೆ ಕಾಮಗಾರಿ ಮುಗಿಸಿ ಇನ್ನು ಒಂದು ವರ್ಷದೊಳಗೆ ಬಯಲು ಸೀಮೆಗೆ ನೀರು ಪೂರೈಸುವುದಾಗಿ ಸರಕಾರ ಹೇಳುತ್ತಿದೆ; ಇದು ಸಾಧ್ಯವೇ ?
ಎತ್ತಿನಹೊಳೆ ಯೋಜನೆ ಎಂಬುದು ಕಾಂಗ್ರೆಸ್‌ ಮತ್ತು ಬಿಜೆಪಿಯವರ ಬಹುದೊಡ್ಡ ರಾಜಕೀಯ ಗಿಮಿಕ್‌. ಆದರೆ ಕುಡಿಯುವ ನೀರಿನ ವಿಚಾರದಲ್ಲಿ ಜನರ ಜತೆಗೆ ಚೆಲ್ಲಾಟವಾಡಬೇಡಿ ಎಂದು ನಾನು ಈ ಸರಕಾರಕ್ಕೆ ಹೇಳ ಬಯಸುವೆ. 

– ಹಾಗೆ ನೋಡಿದರೆ ಎತ್ತಿನಹೊಳೆ ಯೋಜನೆಯಲ್ಲಿ ನಿಮ್ಮ ಪಾತ್ರ ಇಲ್ಲವೇ?
ರಾಜ್ಯದಲ್ಲಿ 2011ರಲ್ಲಿ ಬಿಜೆಪಿ ಸರಕಾರವಿದ್ದಾಗ ಎತ್ತಿನಹೊಳೆ ಯೋಜನೆ ಅನುಷ್ಠಾನದ ಬಗ್ಗೆ ಆರಂಭಿಕ ಚಿಂತನೆ ಶುರುವಾಗಿತ್ತು. ಬಳಿಕ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಆಡಳಿತಾತ್ಮಕ ಮಂಜೂರಾತಿ ದೊರೆತು ಅನಂತರ 2014ರಲ್ಲಿ ಕಾಂಗ್ರೆಸ್‌ ಸರಕಾರವಿದ್ದಾಗ ಯೋಜನೆಗೆ ಶಿಲಾನ್ಯಾಸ ನಡೆಸಲಾಯಿತು. ಎತ್ತಿನಹೊಳೆಯಿಂದ 3 ವರ್ಷದೊಳಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುವುದಾಗಿ ಕಾಂಗ್ರೆಸ್‌ ಸರಕಾರ ಭರವಸೆ ನೀಡಿತ್ತು. ಆದರೆ ಕಾಮಗಾರಿ ಪ್ರಾರಂಭಿಸಿ ನಾಲ್ಕು ವರ್ಷಗಳಾದರೂ ಎತ್ತಿನಹೊಳೆ ಭಾಗದ ಕಾಮಗಾರಿಯೇ ಇನ್ನೂ ಆಗಿಲ್ಲ. ನನ್ನ ಪ್ರಕಾರ ಎತ್ತಿನ ಹೊಳೆ ಯೋಜನಾ ವೆಚ್ಚ ಈಗ 20,000 ಕೋಟಿ ರೂ.ಗೆ ತಲುಪಿರಬಹುದು. ಸದ್ಯದ ಕಾಮಗಾರಿ ವೇಗ ನೋಡಿದರೆ ಇನ್ನು 20 ವರ್ಷ ಕಳೆದರೂ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವುದಿಲ್ಲ. ಸರಕಾರ ಮಾತ್ರ ಬಯಲು ಸೀಮೆ ಜನರಿಗೆ ಎತ್ತಿನಹೊಳೆ ಬಗ್ಗೆ ಸುಳ್ಳು ಹೇಳಿ ನಂಬಿಸುತ್ತಿದೆ. 

– ನೀವು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪದೇಪದೇ ಬಂದು ಹೋಗುತ್ತಿರುವುದರ ಗುಟ್ಟು ಏನು?
 ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮೊದಲಿನಿಂದಲೂ ದಕ್ಷಿಣ ಕನ್ನಡದಲ್ಲಿ ಪಕ್ಷದ ಬಲವರ್ಧನೆಯಲ್ಲಿ  ಸ್ವಲ್ಪ ಕೊರತೆ ಇದೆ. ಇದು ಈಗಿನ ಕೊರತೆ ಅಲ್ಲ; ರಾಮಕೃಷ್ಣ ಹೆಗಡೆ ಕಾಲದಿಂದಲೂ ಈ ಕೊರತೆಯಿದೆ. ಆಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನತಾ ಪಕ್ಷದಿಂದ ಮೂವರು ಶಾಸಕರು ಮಾತ್ರ ಇದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ ಮೂರು ಸ್ಥಾನಗಳನ್ನಾದರೂ ಗೆಲ್ಲುವ ಗುರಿಯನ್ನು ಜೆಡಿಎಸ್‌ ಇರಿಸಿಕೊಂಡಿದೆೆ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯುತ್ತಿದ್ದು, ಜಿಲ್ಲೆಗೆ ಆಗಾಗ ಭೇಟಿ ನೀಡಿ ಪ್ರಮುಖ ನಾಯಕರ ಜತೆ ಚರ್ಚಿಸಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ.

– ಹಾಗಾದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಜಿಲ್ಲೆಯಲ್ಲಿ ಅನುಕೂಲಕರ ವಾತಾವರಣವಿದೆ ?
 ಖಂಡಿತವಾಗಿಯೂ ಇದೆ. ಮುಂದಿನ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ 13 ವಿಧಾನ ಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಸ್ಪರ್ಧೆ ಮಾಡುತ್ತದೆ. ಈ ಬಾರಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಧರ್ಮದ ಹೆಸರಿನಲ್ಲಿ ಮತ್ತು ಸೂಕ್ಷ್ಮವಿಚಾರಗಳನ್ನು ಕೆಣಕಿ ಜನರನ್ನು ಭಾವನಾತ್ಮಕವಾಗಿ ಬಳಸಿಕೊಳುತ್ತಾ ಬಂದಿವೆ. ಆದರೆ ಜನರಿಗೆ ಈಗ ಎರಡೂ ರಾಜಕೀಯ ಪಕ್ಷಗಳ ಸ್ವಾರ್ಥ ಸಾಧನೆಯ ರಾಜಕೀಯ ಅರ್ಥವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ಇಂಥ ಕೋಮುವಾದಿ ಅಜೆಂಡಾ ಕಿತ್ತೂಗೆದು ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳ ಉನ್ನತಿಗೆ ಒಂದು ಬಾರಿ ಜೆಡಿಎಸ್‌ಗೆ ಅವಕಾಶ ನೀಡಿ ನೋಡಿ ಎಂಬುದು ಜನತೆಯಲ್ಲಿ ನನ್ನ ಮನವಿ. 

Advertisement

– ನಿಮ್ಮ ಪ್ರಕಾರ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ಮುನಿಸು ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಬಹುದೇ ?
ಕಾಂಗ್ರೆಸ್‌ ಪಕ್ಷದ ಏಳಿಗೆಗಾಗಿ ಅವಿರತ ಶ್ರಮಿಸಿದ ಜನಾರ್ದನ ಪೂಜಾರಿ, ಎಸ್‌. ವಿಶ್ವನಾಥ ಮುಂತಾದ ಹಿರಿಯ ನಾಯಕರು ಸಿದ್ದರಾಮಯ್ಯನವರ ಕಾರ್ಯವೈಖರಿ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಜನಾರ್ದನ ಪೂಜಾರಿ ಒಬ್ಬ ನಿಷ್ಠಾವಂತ ನಾಯಕ, ಶಿಸ್ತಿನ ಸಿಪಾಯಿ. ಜೀವನದುದ್ದಕ್ಕೂ ಕಾಂಗ್ರೆಸ್‌ಬಿಟ್ಟು ಬೇರೆ ಪಕ್ಷದ ಬಗ್ಗೆ ಚಿಂತನೆಯನ್ನೂ ಮಾಡಿದವರಲ್ಲ. ಸಿದ್ದರಾಮಯ್ಯನವರ ಆಡಳಿತ ವೈಖರಿ ವಿರುದ್ದ ಪೂಜಾರಿಯವರು ಮಾಡುತ್ತಿರುವ ಟೀಕೆಯಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

– ವಿಶ್ವನಾಥ್‌ ಅವರ ಜೆಡಿಎಸ್‌ಗೆ ಸೇರ್ಪಡೆ ಕಾರ್ಯಕ್ರಮ ಯಾವಾಗ ?
ವಿಶ್ವನಾಥ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿ ತನಗೆ ಆಗಿರುವ ನೋವುಗಳನ್ನು ಹೇಳಿಕೊಂಡಾಗ ಆ ಪಕ್ಷದ ನಾಯಕರಿಂದ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಬಹುಶಃ ಬೇರೆ ಮಾರ್ಗವಿಲ್ಲದೆ ಅನಿವಾರ್ಯವಾಗಿ ಅವರು ಕಾಂಗ್ರೆಸ್‌ ಪಕ್ಷ ತ್ಯಜಿಸಬಹುದು. ಇದು ಅವರ ಮಾತುಗಳಿಂದ ವ್ಯಕ್ತವಾಗುತ್ತಿದೆ. ಜೆಡಿಎಸ್‌ ಸೇರುವ ಬಗ್ಗೆ ಮೂರ್‍ನಾಲ್ಕು ಬಾರಿ ಚರ್ಚೆ ನಡೆಸಿರುವುದು ನಿಜ. ಆದರೆ ನಮ್ಮ ಪಕ್ಷಕ್ಕೆ ಬರುವ ಬಗ್ಗೆ  ಇನ್ನೂ ಅಂತಿಮ ತೀರ್ಮಾನವಾಗಿಲ್ಲ.

– ರಾಜ್ಯಕ್ಕೆ ರಕ್ಷಣೆ ನೀಡಬೇಕಾದ ಮುಖ್ಯಮಂತ್ರಿಗಳ ಸೊಸೆಗೇ ರಕ್ಷಣೆ ಇಲ್ಲ ಎಂಬ ದೂರು ಬಂದಿದೆಯಲ್ಲ?
ನಿಜಕ್ಕೂ ಇದೊಂದು ಗಂಭೀರ ವಿಚಾರ. ರಾಜ್ಯದ ಮುಖ್ಯಮಂತ್ರಿಗಳ ಕುಟುಂಬದ ಹೆಣ್ಮಗಳು ರಕ್ಷಣೆ ಕೋರಿ ಪೊಲೀಸ್‌ ಠಾಣೆಯಲ್ಲಿ ಮನವಿ ಮಾಡಿರುವುದು ದುರದೃಷ್ಟಕರ. ರಾಜ್ಯದಲ್ಲಿ ಮುಖ್ಯಮಂತ್ರಿ ಕುಟುಂಬದ ಮಹಿಳೆಯೇ ಭಯದ ವಾತಾವರಣದಲ್ಲಿ ಇದ್ದಾರೆ ಎಂದಾದರೆ ಇನ್ನು ಜನಸಾಮಾನ್ಯರ ಪಾಡೇನು ? 

– ನಿಮ್ಮ ವಿರುದ್ಧªದ ಜಂತಕಲ್‌ ಮೈನಿಂಗ್‌ ಪ್ರಕರಣದ ತನಿಖೆ ಮರುಜೀವ ಪಡೆದಿರುವುದು ಏಕೆ? 
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಗಳಿಸುವ ಜನರ ವಿಶ್ವಾಸ, ಬೆಂಬಲಕ್ಕೆ ಬ್ರೇಕ್‌ ಹಾಕುವ ವ್ಯರ್ಥ ಪ್ರಯತ್ನವಿದು. 10 ವರ್ಷಗಳ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾ ಗ ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದೆ. ಅನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ ಸರಕಾರಗಳು ನಾನು ಮಾಡಿದ ನಿರ್ಧಾರಗಳಲ್ಲಿ  ತಪ್ಪು ಕಂಡು ಹುಡುಕುವ ಪ್ರಯತ್ನ ಮಾಡುತ್ತಾ ಬಂದಿವೆ. ಆ ಮೂಲಕ ನನ್ನ ವರ್ಚಸ್ಸಿಗೆ ಧಕ್ಕೆಯುಂಟುಮಾಡುವ ಹುನ್ನಾರ ನಡೆಯುತ್ತಿದೆ. 

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next