Advertisement

ಎಥೆನಾಲ್‌ ಅಭಾವ; ಪೆಟ್ರೋಲ್‌ ಮಿಶ್ರಣ ಸವಾಲು!

11:29 PM Jan 18, 2023 | Team Udayavani |

ಮಂಗಳೂರು: ಗಗನಕ್ಕೇರುವ ತೈಲ ಬೆಲೆ ನಿಯಂತ್ರಿಸಲು “ಎಥೆನಾಲ್‌’ ಉತ್ಪಾದನೆಗೆ ಕೇಂದ್ರ ಸರಕಾರ ಆದ್ಯತೆ ನೀಡಿದೆಯಾದರೂ ಬೇಡಿಕೆಯಷ್ಟು ಎಥೆನಾಲ್‌ ಲಭಿಸದೆ ರಾಜ್ಯದಲ್ಲಿ ಪೆಟ್ರೋಲ್‌ ಮಿಶ್ರಣ ಪ್ರಮಾಣ ಏರಿಕೆಗೆ ಹೊಡೆತ ಬಿದ್ದಿದೆ.

Advertisement

ಪೆಟ್ರೋಲ್‌ಗೆ 2014ರಲ್ಲಿ ಶೇ. 1ರಷ್ಟಿದ್ದ ಎಥೆನಾಲ್‌ ಮಿಶ್ರಣ 2020ರ ಅಂತ್ಯಕ್ಕೆ ಶೇ. 7.2ಕ್ಕೆ ಏರಿಕೆಯಾಗಿದೆ. ಈಗ ಶೇ. 10ರಷ್ಟು ಮಿಶ್ರಣ ಮಾಡಲಾಗುತ್ತಿದೆ. ಈ ಪ್ರಮಾಣ 2030ರ ಒಳಗೆ ಶೇ. 20 ಆಗಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ. ಆದರೆ ಅಷ್ಟು ಪ್ರಮಾಣದಲ್ಲಿ ಎಥೆನಾಲ್‌ ಲಭ್ಯವಿಲ್ಲದ ಕಾರಣ ಪ್ರಮಾಣ ತಲುಪುವುದು ಸದ್ಯಕ್ಕೆ ಕಷ್ಟ.

ಸಕ್ಕರೆ ಅಂಶವಿರುವ ಸಸ್ಯೋತ್ಪನ್ನಗಳಾದ ಕಬ್ಬು, ಕಬ್ಬಿನ ತ್ಯಾಜ್ಯವಾದ ಕಾಕಂಬಿ, ಗೋಧಿ, ಜೋಳ, ಮೆಕ್ಕೆ ಜೋಳ ಮೊದಲಾದ ಬೆಳೆಗಳಿಂದ ಎಥೆನಾಲ್‌ ಉತ್ಪಾದಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 85 ಸಕ್ಕರೆ ಕಾರ್ಖಾನೆಗಳಿವೆ. ಈ ಪೈಕಿ ಸುಮಾರು 68 ಚಾಲ್ತಿಯಲ್ಲಿವೆ. ಇದರಲ್ಲಿ 14 ಕಾರ್ಖಾನೆಗಳಲ್ಲಿ ಮಾತ್ರ ಎಥೆನಾಲ್‌ ಉತ್ಪಾದನೆಯಾಗುತ್ತಿದೆ. ಅಂದರೆ ರಾಜ್ಯದಲ್ಲಿ ಸುಮಾರು 7.50 ಲಕ್ಷ ಲೀ. ಎಥೆನಾಲ್‌ ಉತ್ಪತ್ತಿಯಾಗುತ್ತಿದ್ದು, ಪೆಟ್ರೋಲ್‌ ಉತ್ಪಾದನೆಯ ಪ್ರಮಾಣಕ್ಕೆ ಹೋಲಿಸಿದರೆ ಎಥೆನಾಲ್‌ ಪ್ರಮಾಣ ಮಾತ್ರ ಕಡಿಮೆಯಿದೆ.
ಎಂಆರ್‌ಪಿಎಲ್‌;

ನಿರೀಕ್ಷೆಯಷ್ಟು ಇಲ್ಲ!
ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಉತ್ಪಾದಿಸುವ ಒಟ್ಟು ಇಂಧನದ ಪೈಕಿ ಶೇ. 90ರಷ್ಟು ಕರ್ನಾಟಕದ ಒಳಗೆ ಹಾಗೂ ಗೋವಾ, ಕೇರಳಕ್ಕೆ ಸರಬರಾಜು ಮಾಡಲಾಗುತ್ತಿದೆ. ಎಚ್‌ಪಿಸಿಎಲ್‌, ಬಿಪಿಸಿಎಲ್‌, ಐಒಸಿಎಲ್‌ಗೆ ಎಂಆರ್‌ಪಿಎಲ್‌ ಇಂಧನ ಪೂರೈಸುತ್ತಿದೆ. ಈ ಪೈಕಿ ಪ್ರತೀ ಲೀಟರ್‌ಗೆ ಶೇ. 10ರಷ್ಟು ಎಥೆನಾಲ್‌ ಮಿಶ್ರಣ ಇಲ್ಲಿ ನಡೆಸಲಾಗುತ್ತಿದೆ. ಕೇಂದ್ರ ಸಚಿವಾಲಯ ಸೂಚಿಸಿದ ಕರ್ನಾಟಕ, ಮಹಾರಾಷ್ಟ್ರದ 14 ಸರಬರಾಜು ಸಂಸ್ಥೆಯವರಿಂದ ಎಥೆನಾಲ್‌ ಖರೀದಿಸಿ, ಟ್ರಕ್‌ಗಳಿಗೆ ಪೆಟ್ರೋಲ್‌ ತುಂಬಿಸುವ ಸಂದರ್ಭ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಎಂಆರ್‌ಪಿಎಲ್‌ನಲ್ಲಿ ಪ್ರತ್ಯೇಕ ಎಥೆನಾಲ್‌ ಸ್ಥಾವರವಿಲ್ಲದ ಕಾರಣ ಬೇಡಿಕೆಗೆ ತಕ್ಕ ಪ್ರಮಾಣದಲ್ಲಿ ಎಥೆನಾಲ್‌ ಲಭ್ಯವಿಲ್ಲದೆ ಮಿಶ್ರಣ ಪ್ರಮಾಣ ಶೇ. 20ಕ್ಕೆ ಏರಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತೈಲ ಬೆಲೆ ನಿಯಂತ್ರಣ ಗುರಿ
ಎಥೆನಾಲ್‌ ಮಿಶ್ರಣದಿಂದ ವಾಹನಗಳ ಕಾರ್ಯಕ್ಷಮತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. ಇದಕ್ಕಾಗಿ ಎಥೆನಾಲ್‌ ಉತ್ಪಾದನೆಯನ್ನು ಅಧಿಕಗೊಳಿಸಲು ಸರಕಾರ ಉದ್ದೇಶಿಸಿದೆ. ಎಥೆನಾಲ್‌ ಬಳಕೆ ಅಧಿಕವಾದಂತೆ ಹೊರದೇಶದಿಂದ ಕಚ್ಚಾ ತೈಲ ಆಮದು ಪ್ರಮಾಣದಲ್ಲೂ ಕಡಿತವಾಗಬಹುದು ಎಂದು ಅಂದಾಜಿಸಲಾಗಿದ್ದು, ಇದರಿಂದ ತೈಲ ಬೆಲೆಯನ್ನು ನಿಯಂತ್ರಿಸುವುದು ಸರಕಾರದ ಗುರಿ.

Advertisement

“ಎಥೆನಾಲ್‌’ ಉತ್ಪಾದನೆಗೆ ಎಂಆರ್‌ಪಿಎಲ್‌ ಮುಂದು
ಪಂಜಾಬ್‌, ಹರಿಯಾಣ ಸೇರಿದಂತೆ ಕೆಲವು ಭಾಗದಲ್ಲಿ ಬೆಳೆ ತೆಗೆದ ಅನಂತರ (ಗೋಧಿ ಸೇರಿದಂತೆ ಇತರ)ಉಳಿಯುವ ಕೂಳೆಯನ್ನು ತೆಗೆಯಲು ದುಬಾರಿ ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ ಬೆಂಕಿ ಕೊಡುತ್ತಾರೆ. ಅಂದರೆ ರೈತರಿಗೆ ಎರಡನೇ ಬೆಳೆ ತೆಗೆಯಲು ಹುಲ್ಲು ಕಟಾವು ಮಾಡಲೇಬೇಕಾಗುತ್ತದೆ. ಇದನ್ನು ಎಥೆನಾಲ್‌ ಯೋಜನೆಗಾಗಿ ಸಂಬಂಧಪಟ್ಟ ತೈಲ ರಿಫೈನರಿಗಳು ಖರೀದಿಸಲಿದ್ದಾರೆ. ಟನ್‌ಗಟ್ಟಲೆ ಇಂತಹ ವಸ್ತುಗಳಿಂದ ಎಥೆನಾಲ್‌ ಉತ್ಪಾದನೆ ಮಾಡಬಹುದು. ಇದೇ ರೀತಿ ಕರ್ನಾಟಕದ ದಾವಣಗೆರೆ ಹಾಗೂ ಸುತ್ತಮುತ್ತ ವ್ಯಾಪ್ತಿಯಲ್ಲಿ ಸಿಗುವ ಬೆಳೆಯ ಉಳಿದ ಭಾಗವನ್ನು ಪಡೆದು ಎಥೆನಾಲ್‌ ತಯಾರಿಗೆ ಎಂಆರ್‌ಪಿಎಲ್‌ ಉದ್ದೇಶಿಸಿದೆ. ಇದರಂತೆ ಹರಿಹರದಲ್ಲಿ 2025ರ ವೇಳೆಗೆ ಎಥೆನಾಲ್‌ ಘಟಕ ಸ್ಥಾಪನೆಯಾಗುವ ನಿರೀಕ್ಷೆಯಿದೆ.

ಪೆಟ್ರೋಲ್‌ ಜತೆಗೆ ಸದ್ಯ ಶೇ. 10ರಷ್ಟು ಎಥೆನಾಲ್‌ ಮಿಶ್ರಣವನ್ನು ಎಂಆರ್‌ಪಿಎಲ್‌ನಲ್ಲಿ ಮಾಡಲಾಗುತ್ತಿದೆ. ಶೇ. 20ರಷ್ಟು ಏರಿಸುವಂತೆ ಸರಕಾರದ ಸೂಚನೆಯಿದೆ. ಆದರೆ ಎಥೆನಾಲ್‌ ಬೇಡಿಕೆಯಷ್ಟು ಲಭ್ಯವಿಲ್ಲದ ಕಾರಣ ಶೇ. 20 ಮಿಶ್ರಣ ಕಷ್ಟ ಸಾಧ್ಯ. ಆದರೆ ಹರಿಹರದಲ್ಲಿ 2ಜಿ ಎಥೆನಾಲ್‌ ಸ್ಥಾವರ ನಿರ್ಮಾಣ ನಡೆಯಲಿದ್ದು 2025ರಲ್ಲಿ ಕಾರ್ಯಾರಂಭಿಸಲಿದೆ.
– ಎಂ. ವೆಂಕಟೇಶ್‌, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್‌

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next