Advertisement
ತನ್ನ ಮುಂದೆ ನಿಂತ ರೈತನನ್ನು ಅರಸ ಪ್ರೀತಿಯಿಂದ ಮಾತನಾಡಿಸಿದ. ಬಟ್ಟೆಯಲ್ಲಿ ಕಟ್ಟಿಕೊಂಡ ಸೇಬನ್ನು ಯೋನಾಸ್ ಅವನ ಮುಂದಿರಿಸಿದ. ಅರಸನು, “”ಇದೇನಿದು, ಈ ಹಣ್ಣಿನಲ್ಲಿ ಅಂತಹ ವಿಶೇಷ ಏನಿದೆ?” ಎಂದು ಕೇಳಿದ. “”ದೊರೆಯೇ, ಇದು ಬಹು ವಿಶೇಷವಾಗಿದೆ. ದೇವತೆಗಳ ಕೃಪೆಯಿಂದ ಈ ಏಕೈಕ ಹಣ್ಣು ನನ್ನ ತೋಟದ ಮರದಲ್ಲಿ ಬೆಳೆದಿದೆ ಎಂದು ಭಾವಿಸಿದ್ದೇನೆ. ಅದನ್ನು ಕತ್ತಲಿನ ಕೋಣೆಯಲ್ಲಿ ಇಟ್ಟು ನೋಡಿ. ದೀಪಗಳನ್ನುರಿಸುವ ಅಗತ್ಯವಿಲ್ಲದೆ ಬೆಳಕು ಕೊಡುತ್ತದೆ. ಅಮೂಲ್ಯವಾದ ಹಣ್ಣನ್ನು ನನಗೆ ಪ್ರೀತಿಪಾತ್ರರಾದವರಿಗಷ್ಟೇ ಕೊಡಬೇಕು ಎಂದು ನಿರ್ಧರಿಸಿದ್ದೇನೆ. ಪ್ರಜೆಗಳ ಪಾಲಿಗೆ ಹಿತ ನೀಡುವ ಅರಸರನ್ನು ಬಿಟ್ಟರೆ ಬೇರೆ ಯಾರ ಮೇಲೆಯೂ ಪ್ರೀತಿಯಿರಲು ಸಾಧ್ಯವಿಲ್ಲ. ಹೀಗಾಗಿ ತಮಗೆ ಉಡುಗೊರೆಯಾಗಿ ನೀಡಬೇಕೆಂದು ತಂದಿದ್ದೇನೆ, ಸ್ವೀಕರಿಸಬೇಕು” ಎಂದು ಯೋನಾಸ್ ನಿವೇದಿಸಿದ.
Related Articles
Advertisement
ಮಂತ್ರಿಗಳ ಸಲಹೆ ಸರಿಯೆಂದು ಅರಸನಿಗೆ ತೋರಿತು. ಅವರು ಹೇಳಿದ ಹಾಗೆಯೇ ಒಳ್ಳೆಯ ಕುದುರೆಯ ಮೇಲೆ ನಾಣ್ಯಗಳ ಮೂಟೆ ಹೇರಿ ಯೋನಾಸ್‌ನಿಗೆ ಕೊಡುಗೆಯಾಗಿ ನೀಡಿ ಕಳುಹಿಸಿದ. ತನಗೆ ಅಪೇಕ್ಷಿಸದೆ ಸಿಕ್ಕಿದ ಪ್ರತಿಫಲ ಕಂಡು ಯೋನಾಸ್ ತುಂಬ ಸಂತೋಷಪಟ್ಟ. ಕುದುರೆಯ ಮೇಲೆ ಕುಳಿತುಕೊಂಡು ಮನೆಯ ದಾರಿ ಹಿಡಿದ.
ಯೋನಾಸ್ ಮನೆಯ ಪಕ್ಕದಲ್ಲಿ ಡಲ್ಲಾಸ್ ಎಂಬ ಶ್ರೀಮಂತನಾದ ರೈತನಿದ್ದ. ಅವನು ಯಾರಿಗೂ ಕೊಳೆತ ಹಣ್ಣು ಕೂಡ ಉಚಿತವಾಗಿ ಕೊಡುವವನಲ್ಲ. ಲಾಭ ಬರುವಾಗ ಬಿಟ್ಟು ಕೊಡುವ ಸ್ವಭಾವ ಅವನದಲ್ಲ. ಅವನು ಒಳ್ಳೆ ಜಾತಿಯ ಕುದುರೆಯನ್ನೇರಿಕೊಂಡು ಬರುತ್ತಿರುವ ಯೋನಾಸ್‌ನನ್ನು ಕಂಡು ಬೆರಗಾದ. ತಾನು ಕಾಣುತ್ತಿರುವುದು ಕನಸಲ್ಲವಷ್ಟೇ ಎಂದು ಕಣ್ಣುಗಳನ್ನು ಹೊಸಕಿಕೊಂಡ. ಕನಸಲ್ಲ ಎನಿಸಿದ ಮೇಲೆ ಯೋನಾಸ್ ಬಳಿಗೆ ಓಡಿಹೋಗಿ ತಡೆದು ನಿಲ್ಲಿಸಿದ. “”ಏನಿದು ಪರಮಾಶ್ಚರ್ಯ! ನಿನ್ನೆ ತನಕ ಹೊಲ ಉಳಲು ಮುದಿ ಎತ್ತನ್ನು ಕೊಳ್ಳಲು ನಿನ್ನ ಬಳಿ ಶಕ್ತಿಯಿರಲಿಲ್ಲ. ಆದರೆ ಇಂದು ಲಕ್ಷ ಲಕ್ಷ ಬೆಲೆಬಾಳುವ ಕುದುರೆಯ ಮೇಲೆ ಕುಳಿತುಕೊಂಡು ಬರುತ್ತಾ ಇದ್ದೀ ಅಂದರೆ ಏನು ಸಮಾಚಾರ? ಯಾರ ಲಾಯದಿಂದ ಕದ್ದುಕೊಂಡು ಬಂದೆ?” ಎಂದು ಕೇಳಿದ.
ಜೋರಾಗಿ ನಕ್ಕುಬಿಟ್ಟ ಯೋನಾಸ್. “”ಅಯ್ಯೋ ಅಣ್ಣ, ನನಗೇಕೆ ಬರಬೇಕು ಅಂತಹ ಕೇಡುಗಾಲದ ಬುದ್ಧಿ? ಇದು ಪ್ರಾಮಾಣಿಕವಾಗಿಯೇ ದೊರಕಿದೆ. ನನ್ನ ತೋಟದಲ್ಲಿ ಕೆಂಪು ಕೆಂಪಗಾದ ರಕ್ತದ ಬಣ್ಣದ ದೊಡ್ಡ ಸೇಬು ಆಗಿತ್ತಲ್ಲ? ಅದು ಬಹಳ ಅಪೂರ್ವವಾದುದೆಂದು ನನಗೆ ಗೊತ್ತಾಯಿತು. ತೆಗೆದುಕೊಂಡು ಹೋಗಿ ಆಳುವ ಅರಸರಿಗೆ ಉಡುಗೊರೆಯಾಗಿ ಕೊಟ್ಟುಬಿಟ್ಟೆ. ನನಗೆ ಪ್ರತಿಫಲದ ಆಶೆಯಿರಲಿಲ್ಲ ಬಿಡು. ಆದರೂ ಅರಸರು ಕೇಳಬೇಕಲ್ಲ, ಇಷ್ಟು ಒಳ್ಳೆಯ ಉಡುಗೊರೆ ನೀಡಿದವನನ್ನು ಹಾಗೆಯೇ ಕಳುಹಿಸುವ ಪರಿಪಾಠ ಇಲ್ಲ ಅಂತ ಹೇಳಿ ಸಂಚಾರಕ್ಕೆ ಈ ಕುದುರೆ ಕೊಟ್ಟರು. ಅಷ್ಟು ಮಾತ್ರವಲ್ಲ, ಸಣ್ಣ ಕೊಡುಗೆ ಅಂತ ಹೇಳಿ ಕುದುರೆಗೆ ಹೊರಲು ಸಾಧ್ಯವಾಗದಷ್ಟು ಬಂಗಾರದ ನಾಣ್ಯಗಳ ಮೂಟೆಯನ್ನು ಹೊರಿಸಿ ಕಳುಹಿಸಿದರು” ಎಂದು ನಿಜ ವಿಷಯವನ್ನೇ ಹೇಳಿದ.
ಇದರಿಂದ ಡಲ್ಲಾಸ್‌ಗೆ ಬಾಯಿ ನೀರೂರಿತು. ಒಂದು ಸಾಧಾರಣ ಸೇಬನ್ನು ಇವನು ತೆಗೆದುಕೊಂಡು ಹೋಗಿ ಕೊಡುವಾಗ ಅರಸನು ಅವನ ಮಾತನ್ನು ನಂಬಿ, ಇಷ್ಟು ದೊಡ್ಡ ಉಡುಗೊರೆ ನೀಡಿದನೆಂಬ ಕತೆ ಕೇಳಿ ಅವನಿಗೆ ಹೊಟ್ಟೆ ಉರಿದುಹೋಯಿತು. ತನ್ನ ತೋಟದಲ್ಲಿ ಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾಗಿರುವ ಸೇಬುಹಣ್ಣುಗಳು ಬೇಕಾದಷ್ಟು ಇವೆ. ಒಂದು ಹಣ್ಣಿಗೆ ಒಂದು ಕುದುರೆ, ಒಂದು ಮೂಟೆ ಚಿನ್ನ ಸಿಗುವುದಾದರೆ ತನ್ನ ಮನೆಯನ್ನು ಅದರಿಂದಲೇ ತುಂಬಿಸಬಹುದು ಎಂದು ಅವನು ಲೆಕ್ಕ ಹಾಕಿದ. ಕೆಲಸದವರನ್ನು ಬರಮಾಡಿಸಿ ಚಂದಚಂದದ ಸೇಬುಹಣ್ಣುಗಳನ್ನು ಕೊಯ್ಯಿಸಿ ಗಾಡಿ ತುಂಬ ಹೇರಿದ. ಅರಸನ ಸನ್ನಿಧಿಗೆ ತೆಗೆದುಕೊಂಡು ಹೋದ. “”ನಾನು ಬಡರೈತ ಡಲ್ಲಾಸ್. ನನ್ನ ತೋಟದಲ್ಲಿ ಅತ್ಯಮೂಲ್ಯವಾದ ಸೇಬುಹಣ್ಣುಗಳು ರಾಶಿರಾಶಿಯಾಗಿ ಬೆಳೆದಿವೆ. ಇದು ಯೋಗ್ಯರಾದವರ ಬಳಿಗೆ ಸೇರಬೇಕು ಎಂಬ ಆಶಯ ನನ್ನದು. ಹೀಗಾಗಿ ಎಲ್ಲವನ್ನೂ ಕೊಯ್ಯಿಸಿ ತಮಗೆ ಸಮರ್ಪಿಸಲು ತಂದಿದ್ದೇನೆ” ಎಂದು ಪ್ರಾರ್ಥಿಸಿದ.
ಅರಸನು ಕಣ್ಣರಳಿಸಿ ಹಣ್ಣುಗಳನ್ನು ನೋಡಿದ. “”ತುಂಬ ಸಂತೋಷವಾಯಿತು. ಈ ಹಣ್ಣುಗಳಿಗಾಗಿ ನೀನು ಯಾವ ಪ್ರತಿಫಲ ಬೇಕು ಎಂದು ಬಯಸಿದರೂ ಅದನ್ನು ಕೊಡುವ ವ್ಯವಸ್ಥೆ ಮಾಡುತ್ತೇನೆ” ಎಂದು ಉದಾರವಾಗಿ ಹೇಳಿದ. ತಾನು ಏನನ್ನಾದರೂ ಅಪೇಕ್ಷಿಸಿದರೆ ಅದು ಸಣ್ಣದಾಗಬಹುದು, ಅರಸನೇ ಯೋಚಿಸಿ ಕೊಟ್ಟರೆ ದೊಡ್ಡ ಕೊಡುಗೆ ಸಿಗಬಹುದು ಎಂದು ಡಲ್ಲಾಸ್ ಮನಸ್ಸಿನೊಳಗೆ ಲೆಕ್ಕ ಹಾಕಿದ. “”ಛೇ, ನಾನು ಕೊಡುಗೆಯಾಗಿ ಇದನ್ನು ತಂದುದು ಪ್ರತಿಫಲದ ಬಯಕೆಯಿಂದ ಅಲ್ಲವೇ ಅಲ್ಲ. ನನಗೆ ಏನೂ ಬೇಡ” ಎಂದು ಹೇಳಿದ. ಅರಸನು, “”ಹಾಗೆಂದರೆ ಹೇಗೆ? ಪ್ರಜೆಗಳಿಂದ ನಾನು ಯಾವ ವಸ್ತುವನ್ನೂ ಉಚಿತವಾಗಿ ಸ್ವೀಕರಿಸುವ ಪದ್ಧತಿಯಿಲ್ಲ. ಅದಕ್ಕೆ ಪ್ರತಿಫಲ ಕೊಡಲೇಬೇಕಾಗುತ್ತದೆ. ಏನು ಬೇಕಿದ್ದರೂ ಕೋರಿಕೋ, ಕೊಡುತ್ತೇನೆ” ಎಂದು ಹೇಳಿದ.
ತನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಿತೆಂದು ಡಲ್ಲಾಸ್ ಮನಸ್ಸಿನಲ್ಲಿ ಸಂತೋಷಪಟ್ಟ. “”ಅರಸರು ಬಲವಂತ ಮಾಡುವುದಾದರೆ ನಾನು ಪ್ರತಿಫಲ ಸ್ವೀಕರಿಸುತ್ತೇನೆ. ತಮಗೆ ಪ್ರೀತಿಯಿಂದ ಏನು ಪ್ರತಿಫಲ ಕೊಡಬೇಕು ಎಂದು ಅನಿಸುತ್ತದೋ ಅದನ್ನು ಕೃತಜ್ಞತೆಯಿಂದ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ. ಒಂದು ಗಾಡಿ ತುಂಬ ಹಣ್ಣು ತಂದಿರುವ ಇವನು ಬಡವನಲ್ಲ ಎಂದು ಅರಸ ನಿರ್ಧರಿಸಿದ. ಅವನ ಬೆರಳುಗಳಲ್ಲಿ ಉಂಗುರಗಳನ್ನು ಧರಿಸಿರುವ ಗುರುತನ್ನು ಕಂಡು ದುಡಿಯುವವನೂ ಅಲ್ಲ ಅನಿಸಿತು. ರೈತ ಯೋನಾಸ್ ತಂದುಕೊಟ್ಟ ಸೇಬು ಹಣ್ಣನ್ನು ಒಳಗಿನಿಂದ ತರಿಸಿ ಅವನ ಕೈಯಲ್ಲಿಟ್ಟ. “”ಇದು ನನಗೆ ತುಂಬ ಪ್ರೀತಿಯ ಹಣ್ಣು, ಬಡರೈತನೊಬ್ಬನ ಶ್ರಮದ ಫಲ. ಇದರ ಬೆಲೆ ಕಟ್ಟಲಾಗದು. ಇದನ್ನು ತೆಗೆದುಕೊಂಡು ಹೋಗು” ಎಂದು ಹೇಳಿದ.
ಪ. ರಾಮಕೃಷ್ಣ ಶಾಸ್ತ್ರಿ