ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಲೋಕಸಭಾ ನೈತಿಕ ಸಮಿತಿ ಅಭಿಪ್ರಾಯವ್ಯಕ್ತಪಡಿಸಿದ್ದು, ಲೋಕಸಭೆ ಸದಸ್ಯತ್ವದಿಂದ ಉಚ್ಛಾಟಿಸಬೇಕೆಂದು ಶಿಫಾರಸು ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:World Cup 2023; ವಿರಾಟ್ ಸ್ವಾರ್ಥಿ ಎಂದ ಹಫೀಜ್ ಗೆ ಸರಿಯಾಗಿ ತಿರುಗೇಟು ನೀಡಿದ ಮೈಕಲ್ ವಾನ್
ಮೊಯಿತ್ರಾ ಅವರ ನಡವಳಿಕೆ ಅನೈತಿಕವಾಗಿದ್ದು, ಸಂಸದೀಯ ವಿಶೇಷಾಧಿಕಾರದ ಉಲ್ಲಂಘನೆ ಮತ್ತು ಸದನದ ಅವಹೇಳನವಾಗಿದೆ ಎಂದು ಸಮಿತಿಯ ಕರಡು ಶಿಫಾರಸ್ಸಿನಲ್ಲಿರುವುದಾಗಿ ಮೂಲಗಳು ಹೇಳಿವೆ.
ಅಲ್ಲದೇ ಉಡುಗೊರೆ ವಿಚಾರಕ್ಕೆ ಸಂಬಂಧಿಸಿದಂತೆ ಮೊಯಿತ್ರಾ ಹಾಗೂ ಉದ್ಯಮಿ ಹೀರಾನಂದಾನಿ ನಡುವಿನ ಹೇಳಿಕೆಯ ವಿರೋಧಾಭಾಸಗಳನ್ನು ಲೋಕಸಭಾ ನೈತಿಕ ಸಮಿತಿಯು ಪರಿಶೀಲನೆ ವೇಳೆ ಎತ್ತಿ ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಲೋಕಸಭಾ ನೈತಿಕ ಸಮಿತಿಯ ಕರಡು ಶಿಫಾರಸಿಗೆ ಸಂಬಂಧಿಸಿದಂತೆ ಇದೊಂದು ರಾಜಕೀಯ ಪ್ರೇರಿತ ವರದಿಯಾಗಿದೆ. ಅವರ ಏಕೈಕ ಉದ್ದೇಶವೇ ಸಂಸತ್ ನಿಂದ ಅಮಾನತುಗೊಳಿಸುವುದಾಗಿದೆ ಎಂದು ಮೊಯಿತ್ರಾ ಪ್ರತಿಕ್ರಿಯೆ ನೀಡಿರುವುದಾಗಿ ವರದಿಯಾಗಿದೆ.
ನಾನು ತನಿಖೆಗೆ ಸಿದ್ಧಳಿದ್ದೇನೆ, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತೇನೆ. ಆದರೆ ವಿಚಾರಣೆಗೂ ಒಂದು ಶಿಸ್ತಿದೆ. ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಒಂದು ವೇಳೆ ನಾನು ಏನಾದರೂ ನಿಯಮ ಉಲ್ಲಂಘಿಸಿದ್ದರೆ, ಆ ಬಗ್ಗೆ ನನಗೆ ಮಾಹಿತಿ ಕೊಡಬೇಕು ಎಂದು ಮೊಯಿತ್ರಾ ಈ ಹಿಂದೆ ಪಿಟಿಐ ಏಜೆನ್ಸಿ ಜೊತೆ ಮಾತನಾಡುತ್ತ ತಿಳಿಸಿದ್ದರು.