Advertisement

ನೈತಿಕ ನಿಯಮ ಸರ್ವಕಾಲಕ್ಕೂ ಅನ್ವಯ: ರಂಭಾಪುರಿ ಶ್ರೀ

05:11 PM Dec 29, 2023 | Team Udayavani |

ಗದಗ: ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ವರ್ತಮಾನ ಮತ್ತು ಭವಿಷ್ಯತ್ತಿಗೆ ಇತಿಹಾಸದ ಅರಿವು ಮುಖ್ಯ. ದೇವಸ್ಥಾನಗಳು ಭಾರತೀಯ ಸಂಸ್ಕೃತಿಯ ಶ್ರದ್ಧಾ ಕೇಂದ್ರಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬೆಟಗೇರಿಯ ವೀರಭದ್ರೇಶ್ವರ ಹಾಗೂ ಪರ್ವತ ಮಲ್ಲೇಶ್ವರ ದೇವಸ್ಥಾನದ ಶತಮಾನೋತ್ಸವ-ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಸತ್ಯದ ತಳಹದಿಯ ಮೇಲೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಗೊಳ್ಳುವ ಅವಶ್ಯಕತೆಯಿದೆ. ಸಾಮಾಜಿಕ ಸಂಪ್ರದಾಯಗಳು
ಬದಲಾಗಬಹುದು. ಆದರೆ, ನೈತಿಕ ನಿಯಮಗಳು ಸರ್ವಕಾಲಕ್ಕೂ ಅನ್ವಯಿಸುತ್ತವೆ. ಧರ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸಿಕೊಂಡು ಬರುವ ಅವಶ್ಯಕತೆಯಿದೆ. ಸಂಪತ್ತೂಂದೇ ಸುಖದ ಮೂಲವಲ್ಲ. ಅದರೊಂದಿಗೆ ಒಂದಿಷ್ಟಾದರೂ ಆಧ್ಯಾತ್ಮ ಚಿಂತನದ ಅರಿವು ಮುಖ್ಯವಾಗಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ಬೋಧಿಸಿದ್ದಾರೆ ಎಂದರು.

ನಾಗರಿಕತೆ ಹೆಸರಲ್ಲಿ ಸಂಸ್ಕೃತಿ ನಾಶಗೊಳ್ಳಬಾರದು. ಯುವ ಜನಾಂಗ ಈ ದೇಶದ ಆಸ್ತಿ ಮತ್ತು ಶಕ್ತಿಯಾಗಿದ್ದಾರೆ. ಅವರಿಗೆ ಯೋಗ್ಯ ಮಾರ್ಗದರ್ಶನ ಮತ್ತು ಸಂಸ್ಕಾರ ಕೊಟ್ಟರೆ ದೇಶದ ಸಂಪತ್ತು ಅವರಾಗುತ್ತಾರೆ ಎಂದರು.

ಬೆಟಗೇರಿ ನಗರದ ವೀರಭದ್ರೇಶ್ವರ-ಪರ್ವತ ಮಲ್ಲೇಶ್ವರ ದೇವಸ್ಥಾನದ ಶತಮಾನೋತ್ಸವ ಸಮಾರಂಭ ಸಂಭ್ರಮದಿಂದ ಜರುಗುತ್ತಿರುವುದು ಅತ್ಯಂತ ಸಂತೋಷ ಉಂಟು ಮಾಡಿದೆ ಎಂದರು.

ಈ ವೇಳೆ ಗುಗ್ಗಳ ಪ್ರಿಯ ಎಂಬ ಸ್ಮರಣ ಸಂಚಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು. ಸೂಡಿ ಜುಕ್ತಿ ಹಿರೇಮಠದ ಡಾ| ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಜ್ಞಾನ ಕ್ರಿಯಾತ್ಮಕವಾಗಿ ವೀರಶೈವ ಧರ್ಮ ಸಕಲ ಜೀವಾತ್ಮರ ಶ್ರೇಯಸ್ಸಿಗಾಗಿ ಶ್ರಮಿಸಿದೆ. ಧರ್ಮ ಮತ್ತು ಧರ್ಮಾಚರಣೆ ತಪ್ಪಿದರೆ ಅಪಾಯ ತಪ್ಪಿದ್ದಲ್ಲ. ಅಧರ್ಮದ ವಿರುದ್ಧ ಹೋರಾಡಿ ಜಯತಂದ ಶ್ರೀ ವೀರಭದ್ರಸ್ವಾಮಿಯ ಕ್ರಿಯಾ ಕತೃತ್ವ ಶಕ್ತಿ ಅಪಾರವಾದುದು.

Advertisement

ಶತಮಾನೋತ್ಸವ ಸಮಿತಿಯವರು ವಿಶೇಷ ಶ್ರದ್ಧಾ ಭಕ್ತಿಪೂರ್ವಕ ಸಮಾರಂಭ ಹಮ್ಮಿಕೊಂಡಿದ್ದು ಸ್ತುತ್ಯವಾದುದು ಎಂದರು. ಅಟ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಮತ್ತು ರಾಣೆಬೆನ್ನೂರು ಹಿರೇಮಠದ ಶಿವಯೋಗಿ
ಶಿವಾಚಾರ್ಯ ಸ್ವಾಮಿಗಳು ಶ್ರೀ ವೀರಭದ್ರೇಶ್ವರ ಲೀಲೆ ಪವಾಡಗಳನ್ನು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ರವಿಕುಮಾರ ಪಟ್ಟಣಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಟ್ರಸ್ಟ್‌ನ ಗಂಗಾಧರಪ್ಪ
ಕೋಟಿ, ಡಾ| ಎಸ್‌.ಬಿ. ಶೆಟ್ಟರ್‌, ಕರಬಸಪ್ಪ ಹಂಚಿನಾಳ, ರವೀಂದ್ರ ಕಲಬುರ್ಗಿ, ಪ್ರಭುಸ್ವಾಮಿ ಗಣಾಚಾರಿ, ಪ್ರಭು ಪವಾಡದ
ಪಾಲ್ಗೊಂಡಿದ್ದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ದೇವಸ್ಥಾನದ ಇತಿಹಾಸ-ಬೆಳವಣಿಗೆ ಕುರಿತು ಮಾತನಾಡಿದರು.
ಗಾನಭೂಷಣ ವೀರೇಶ ಕಿತ್ತೂರು ಅವರಿಂದ ಭಕ್ತಿ ಗೀತೆ ಜರುಗಿತು. ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ನಿರೂಪಿಸಿದರು. ಈ ವೇಳೇ ಜರುಗಿದ ಸಾಮೂಹಿಕ ವಿವಾಹದಲ್ಲಿ ಎಂಟು ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next