ಹುಬ್ಬಳ್ಳಿ: ಅವಧಿ ಪೂರ್ಣಗೊಳ್ಳುವ ಗ್ರಾಪಂಗಳಿಗೆ ಆಡಳಿತಾಧಿಕಾರಿ ಸಮಿತಿ ನಿಯೋಜಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನೂ ಯಾವುದೂ ನಿರ್ಧಾರವಾಗಿಲ್ಲ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಮಂಗಳವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ಅಂತ್ಯದೊಳಗೆ ರಾಜ್ಯದ ಸುಮಾರು 2600 ಗ್ರಾಪಂಗಳ ಅವಧಿ ಪೂರ್ಣಗೊಳ್ಳಲಿದೆ. ಡಿಸೆಂಬರ್ ಅಂತ್ಯದೊಳಗೆ ಬಹುತೇಕ ಗ್ರಾಪಂಗಳ ಅವಧಿ ಪೂರ್ಣಗೊಳ್ಳಲಿದೆ. ಚುನಾವಣೆ ನಡೆಸುವ ಬಗ್ಗೆ ಚುನಾವಣಾ ಆಯೋಗ ಅಯಾಜಿಲ್ಲಾಧಿಕಾರಿಗಳ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಿದೆ. ಚುನಾವಣೆ ಯಾವಾಗ ಘೋಷಣೆಯಾದರೂ ನಾವು ಸಿದ್ಧರಿರುವುದಾಗಿ ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ ಅಲ್ಲಿಯವರೆಗೆ ಏನು ವ್ಯವಸ್ಥೆ ಎನ್ನುವ ಬಗ್ಗೆ ಚರ್ಚೆ ನಡೆದಿದ್ದು, ಇರುವವರನ್ನೇ ಮುಂದುವರಿಸಬೇಕೋ, ಆಡಳಿತಾಧಿಕಾರಿ ಸಮಿತಿ, ನಾಮ ನಿರ್ದೇಶನ ಈ ಆಯಾಮಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಆಡಳಿತಾಧಿಕಾರಿ ಸಮಿತಿ ಸೂಕ್ತ ಎನ್ನುವ ಅಭಿಮತ ವ್ಯಕ್ತವಾಗಿದೆ. ಆದರೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದರು.
ನರೇಗಾಕ್ಕೆ ಉತ್ತಮ ಸ್ಪಂದನೆ: ಧಾರವಾಡ ಜಿಲ್ಲೆಯ 144 ಗ್ರಾಪಂ ಸೇರಿದಂತೆ, ರಾಜ್ಯದ 6021 ಗ್ರಾಪಂ ಗಳಲ್ಲಿ ನರೇಗಾ ಯಶಸ್ವಿಯಾಗಿ ನಡೆಯುತ್ತಿದೆ. ಮೇ 25ರಂದು ಒಂದೇ ದಿನ ರಾಜ್ಯದಲ್ಲಿ 9,19,639 ಜನರಿಗೆ ಉದ್ಯೋಗ ನೀಡಲಾಗಿದೆ. ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಪೈಕಿ ದೇಶದಲ್ಲಿ ಛತ್ತಿಸಗಡ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಹಿಂದೆ 245 ರೂ. ಕೂಲಿ ನೀಡಲಾಗುತ್ತಿತ್ತು. ಈಗ 275 ರೂ. ದೊರೆಯುತ್ತಿದೆ. ರಾಜ್ಯಕ್ಕೆ ಮಾತ್ರ ಹೆಚ್ಚಿನ ಕೂಲಿ ದೊರೆಯುವಂತೆ ಪ್ರಧಾನಿಗಳು ಕಾಳಜಿ ತೋರಿದ್ದಾರೆ. ಹಿಂದೆ ಬಾಕಿಯಿದ್ದ 1861 ಕೋಟಿ ರೂ. ಕೂಲಿ ಹಾಗೂ ಇತರೆ ಸಲಕರಣೆಗೆ ನೀಡಬೇಕಿದ್ದ ಬಾಕಿ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಬಂದವರಿಗೆ ಜಾಬ್‌ಕಾರ್ಡ್: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮರಳಿ ಬಂದ ಪ್ರತಿಯೊಬ್ಬರಿಗೆ ಜಾಬ್ ಕಾರ್ಡ್ ನೀಡಿ ಉದ್ಯೋಗ ನೀಡಲಾಗುವುದು. ಚುನಾಯಿತಿ ಪ್ರತಿನಿಧಿ, ಸರಕಾರಿ ನೌಕರ ಹಾಗೂ ಆದಾಯ ತೆರಿಗೆ ಪಾವತಿಸುವವರನ್ನು ಬಿಟ್ಟು ಉಳಿದವರೆಲ್ಲರಿಗೂ ಜಾಬ್ ಕಾರ್ಡ್ ನೀಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಸೋಂಕಿನ ಭಯದಿಂದ ಜನರು ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸುತ್ತಿಲ್ಲ. ಅದರೂ ದಿನದಿಂದ ದಿನಕ್ಕೆ ಉದ್ಯೋಗಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಅಂತರ್ಜಲ ಪುನಶ್ಚೇತನಕ್ಕೆ ಒತ್ತು: ಹಿಂದೆ ಆರ್ಟ್ ಆಫ್ ಲಿವಿಂಗ್ ಸಂಶೋಧನೆ ಪ್ರಕಾರ ಶೇ.40 ಮಳೆ ನೀರು ಇಂಗುತ್ತಿತ್ತು. ಈಗಿನ ಸಂಶೋಧನೆ ಪ್ರಕಾರ ಶೇ.5ಮಾತ್ರ ನೀರು ಇಂಗುತ್ತಿರುವುದು ದೊಡ್ಡ ದುರಂತ. ಹೀಗಾಗಿ ನರೇಗಾ ಯೋಜನೆಯಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಬದು, ಕೃಷಿ ಹೊಂಡ, ಚೆಕ್ ಡ್ಯಾಮ್, ಕಲ್ಯಾಣಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಎರಡು ಮೂರು ವರ್ಷದಲ್ಲಿ ಆರ್ಟ್ ಆಫ್ ಲಿವಿಂಗ್‌ನೊಂದಿಗೆ ಮೂರು ವರ್ಷದ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕೆ ಸರಕಾರದಿಂದ ಯಾವುದೇ ಹಣ ಪಾವತಿ ಮಾಡಲ್ಲ. ಮೂರು ವರ್ಷದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯ ಯಶಸ್ವಿಯಾಗಲಿದೆ. ಆರಂಭದ ಹಂತದಲ್ಲಿ ಶಿವಮೊಗ್ಗ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ 9 ಜಿಲ್ಲೆಗಳಲ್ಲಿ ಆರಂಭವಾಗಿ ಉಳಿದ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದರು.
ಸರಕಾರದಿಂದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ನೀಡಿದ ಅನುದಾನ ಖರ್ಚು ಮಾಡದೆ ವಾಪಸ್ ಹೋಗದಂತೆ ಯೋಜನೆ ರೂಪಿಸಲಾಗಿದೆ. ಒಂದು ರೂಪಾಯಿ ಸರಕಾರಕ್ಕೆ ವಾಪಸ್ ಹೋಗದಂತೆ ಎಲ್ಲಾ ಯೋಜನೆಗಳನ್ನು ಸಕಾರಗೊಳಿಸಿ ಸಂಪೂರ್ಣ ಅನುದಾನ ಸದ್ಬಳಕೆ ಮಾಡಿಕೊಳ್ಳಲಾಗುವುದು.
– ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ