ಬೆಂಗಳೂರು: ಬಿಜೆಪಿಯಿಂದ ದೂರವಾಗಿರುವ ಶಾಸಕ ಎಸ್. ಟಿ. ಸೋಮಶೇಖರ್ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ. ರಾಜೀವ್ ಗೌಡ ಅವರನ್ನು ಬೆಂಬಲಿಸಲು ಶುಕ್ರವಾರ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ.
ನಗರದಲ್ಲಿ ಶಾಸಕರು ನಡೆಸಿದ ಸಭೆಯಲ್ಲಿ ರಾಜೀವ್ ಗೌಡ, ಸಚಿವ ಕೃಷ್ಣ ಬೈರೇಗೌಡ ಮತ್ತು ಇತರ ಕಾಂಗ್ರೆಸ್ ಮುಖಂಡರು ಕಾಣಿಸಿಕೊಂಡಿದ್ದು, ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ.
‘ಬಿಜೆಪಿ ಮತ್ತು ಅದರ ಅಭ್ಯರ್ಥಿಯಿಂದ ನನಗೆ ಅವಮಾನ ಮಾಡಲಾಗಿದೆ ಎಂದು ಹೇಳಿರುವ ಸೋಮಶೇಖರ್, ತಮ್ಮ ಬೆಂಬಲಿಗರು ಮತ್ತು ಜನರು ಕ್ಷೇತ್ರದ ಅಭಿವೃದ್ಧಿಗೆ ಸಹಾಯ ಮಾಡುವವರಿಗೆ ಸಹಕರಿಸುವಂತೆ ಕೇಳಿಕೊಂಡಿದ್ದೇನೆ ಎಂದಿದ್ದಾರೆ.
”ಕ್ಷೇತ್ರದಲ್ಲಿ ನನಗೆ ಆತ್ಮೀಯರಾಗಿರುವವರೆಲ್ಲರ ಸಭೆ ಕರೆದು ಇಲ್ಲಿಯವರೆಗಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದೆ.ಲೋಕಸಭಾ ಅಭ್ಯರ್ಥಿ ಘೋಷಣೆಯಾಗಿದೆ, ಅಭ್ಯರ್ಥಿ (ಶೋಭಾ ಕರಂದ್ಲಾಜೆ) ನನ್ನ ಕ್ಷೇತ್ರಕ್ಕೆ ಏಳೆಂಟು ಬಾರಿ ಬಂದಿದ್ದಾರೆ. ಈಗ ಅವರು ನನ್ನನ್ನು ಸಂಪರ್ಕಿಸಿಲ್ಲ, ಬೆಂಬಲವನ್ನು ಕೋರಿಲ್ಲ. ಕೇಳದಿದ್ದಾಗ, ನಾನು ಏನು ಮಾಡಬೇಕು?, ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲರೊಂದಿಗೂ ಮಾತನಾಡಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ” ಎಂದು ಹೇಳಿದ್ದಾರೆ.
ಸಭೆ ನಡೆಸಿದಕ್ಕೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ,’ವಿನಾಶ ಕಾಲೇ ವಿಪರೀತ ಬುದ್ದಿ, ಸೋಮಶೇಖರ್ ಅವರನ್ನು ಪಕ್ಷದಿಂದ ಏಕೆ ಉಚ್ಚಾಟಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ”ರಾಜ್ಯ ಘಟಕಕ್ಕೆ ಶಾಸಕರನ್ನು ಉಚ್ಚಾಟಿಸುವ ಅಧಿಕಾರವಿಲ್ಲ, ಕೇಂದ್ರ ನಾಯಕರಿಗೆ ಮಾತ್ರ ಅಧಿಕಾರವಿದೆ. ಚುನಾವಣೆ ಮುಗಿಯಲಿ, ಕೇಂದ್ರ ನಾಯಕರು ಏನು ಮಾಡಬೇಕೆಂದು ನಿರ್ಧರಿಸುತ್ತಾರೆ. ಮುಂದಿನ ದಿನಗಳಲ್ಲಿ ಪಕ್ಷ ನೋಡಿಕೊಳ್ಳುತ್ತದೆ. ಸೋಮಶೇಖರ್ ರಾಜಕೀಯ ಜೀವನದಲ್ಲಿ ದೊಡ್ಡ ತಪ್ಪನ್ನು ಮಾಡಿದ್ದಾರೆ ಮತ್ತು ಅದಕ್ಕೆ ಅವರು ಬೆಲೆ ತೆರುತ್ತಾರೆ’ ಎಂದರು.
”ಸೋಮಶೇಖರ್ ಬಿಜೆಪಿಯಿಂದ ಹೊರಗೆ ಕಾಲಿಟ್ಟಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲೂ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಾರೆ. ಹಾಗಾಗಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರನ್ನು ಈಗ ನಮ್ಮ ಪಕ್ಷದ ಶಾಸಕ ಎಂದು ಕರೆಯಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯಿಂದ ಎರಡೂ ಕಾಲು ಹೊರಗಿಟ್ಟಿರುವ ಸೋಮಶೇಖರ್ , ಫೆಬ್ರವರಿ 27 ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಆತ್ಮಸಾಕ್ಷಿ ಎಂದು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿ ಬಿಜೆಪಿಗೆ ತೀವ್ರ ಮುಜುಗರವನ್ನುಂಟುಮಾಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರದಿಂದ ಬಿಜೆಪಿ ಅಭ್ಯರ್ಥಿಯಾದ ಬೆನ್ನಲ್ಲೇ ಸೋಮಶೇಖರ್ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದಕ್ಕಾಗಿ ಸೋಮಶೇಖರ್ ಅವರಿಗೆ ಬಿಜೆಪಿ ನೋಟಿಸ್ ಜಾರಿ ಮಾಡಲಾಗಿದ್ದು, ಅದಕ್ಕೆ ಅವರು 170 ಪುಟಗಳ ಉತ್ತರವನ್ನು ನೀಡಿದ್ದಾರೆ.