Advertisement
ಪಟ್ಟಣದಲ್ಲಿ ದಿನೇ ದಿನೆ ಶೌಚಾಲಯ ಹಾಗೂ ಮಲಿನ ನೀರಿನ ಸಂಸ್ಕರಣೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಹೀಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಕೆಯುಡಬ್ಲ್ಯುಎಸ್) ಮಂಗಳೂರು ವತಿಯಿಂದ ಮಲೀನ ನೀರು ಮತ್ತು ಶೌಚಾಲಯ ತ್ಯಾಜ್ಯ ಸಂಸ್ಕರಣ ಘಟಕಕ್ಕೆ 10 ಕೋಟಿ ರೂ.ಅನುದಾನ ಇರಿಸಿ ಸಂಸ್ಕರಣ ಘಟಕ ಸ್ಥಾಪನೆಗೆ ಮುಂದಾಗಿದೆ. ಈ ಹಿಂದೆ ಪ್ರಾಯೋಗಿಕವಾಗಿ ಕೆರಳಕೋಡಿ ಬಡಾವಣೆಯಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಅಲ್ಲಿನ ಜನ ವಿರೋಧ ವ್ಯಕ್ತಪಡಿಸಿದ್ದರಿಂದ ಯೋಜನೆ ಯನ್ನು ರೆಂಕೆದಗುತ್ತು ಬಡಾವಣೆಗೆ ಸ್ಥಳಾಂತರಿಸಲಾಗಿದೆ. ಯೋಜನೆಯ ಸಮರ್ಪಕ ಮಾಹಿತಿ ನೀಡಿದ ಕಾರಣ ಇಲ್ಲೂ ವಿರೋಧ ವ್ಯಕ್ತವಾಗಿದೆ.
Related Articles
Advertisement
ಬೆಳ್ತಂಗಡಿ ಪೇಟೆಯಲ್ಲಿ 2,800 ಮನೆಗಳಿದ್ದು, 100ಕ್ಕೂ ಅಧಿಕ ಖಾಸಗಿ ಕಟ್ಟಡಗಳಿವೆ. ಇವೆಲ್ಲದರ ಶೌಚಾಲಯ ತ್ಯಾಜ್ಯ ತೆರವುಗೊಳಿಸಿ ಹೂಳಲು ಜಾಗವಿಲ್ಲ. ಹೀಗಾಗಿ ಕೆಯುಡಬ್ಲ್ಯುಎಸ್ ಯೋಜನೆಯಡಿ ಕೊಯ್ಯೂರಿನ ಕುಂಟಾಲ ಪಲ್ಕೆಯಲ್ಲೇ ಸಂಸ್ಕರಣೆ ಘಟಕ ಸ್ಥಾಪನೆಗೆ 35 ಸೆಂಟ್ಸ್ ಕಾಯ್ದಿರಿಸಲಾಗಿದೆ.
3 ಎಕ್ರೆಯಲ್ಲಿ ಘನ ತ್ಯಾಜ್ಯ ಸಂಸ್ಕರಣೆ ಘಟಕ
ಸುಮಾರು 4.50 ಎಕ್ರೆ ಪೈಕಿ 3 ಎಕ್ರೆಯನ್ನು ಕಸ ವಿಲೇವಾರಿಗಾಗಿ ಗುರುತಿಸಲಾಗಿದೆ. ಕುಂಟಾಲಪಲ್ಕೆಯಲ್ಲಿ ಪ.ಪಂ. ವ್ಯಾಪ್ತಿಯ ಘನತ್ಯಾಜ್ಯವನ್ನು ಡಂಪಿಂಗ್ ಮಾಡಲಾಗುತ್ತಿದೆ. ಆದರೆ ಹಸಿ, ಒಣ ಕಸ ವಿಂಗಡಣೆಯಾಗದೆ ಪ್ರತೀ ವರ್ಷ ನಾಲ್ಕಾರು ಲಕ್ಷ ರೂ. ಮಣ್ಣಿಗೆ ಸೇರುತ್ತಿದೆ. ವೈಜ್ಞಾನಿಕವಾಗಿ ಘಟಕದ ನಿರ್ಮಾಣವಾಗದೆ ಸಮಸ್ಯೆಯಾಗುತ್ತಿದೆ. 0.50 ಟನ್ ಹಸಿ ಕಸ, 1.50 ಟನ್ ಒಣ ಕಸ ಹಾಗೂ 1 ಟನ್ ಮಿಶ್ರ ತ್ಯಾಜ್ಯ ಹೀಗೆ ದಿನದಲ್ಲಿ ಮೂರು ವಾಹನದಲ್ಲಿ ಸಂಗ್ರಹವಾದ 3 ಟನ್ ಒಣ, ಹಸಿ ಕಸಗಳು ಘಟಕಕ್ಕೆ ಬರುತ್ತಿವೆ.
ಸ್ಥಳೀಯರ ಆತಂಕ
ಮನೆಗಳ ತ್ಯಾಜ್ಯ ನೀರಿನ ಸಂಪರ್ಕ ತೆಗೆದು ನೇರ ಪಿಟ್‌ಗಳಿಗೆ ಸಂಪರ್ಕ ನೀಡುವುದಾಗಿ ತಿಳಿಸಿದ್ದಾರೆ. ಬೇರಾವ ಮಾಹಿತಿಯಿಲ್ಲ. ಆದರೆ ಉತ್ತಮ ರಸ್ತೆಯನ್ನು ಅಗೆದು ಹಾಕಿದ್ದಾರೆ. ಪಿಟ್‌ಗಳು ಮನೆ ಸಮೀಪವೆ ನಿರ್ಮಿಸಿದ್ದರಿಂದ ದುರ್ನಾತ ಬೀರಿದರೆ ಕಷ್ಟ ಎಂದು ರೆಂಕೆದಗುತ್ತು ನಿವಾಸಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.
ಐದು ವರ್ಷ ನಿರ್ವಹಣೆ
ಪೇಟೆ ಸಹಿತ ಬಡಾವಣೆಗಳ ಮಲಿನ ನೀರು ಹಾಗೂ ಶೌಚಾಲಯ ತ್ಯಾಜ್ಯ ನಿರ್ವಹಣೆ ಸವಾಲು. ಹಾಗಾಗಿ ನಿರ್ವಹಣೆ ನಡೆಸಲು ಕೆಯುಡಬ್ಲ್ಯು ಯೋಜನೆಯಡಿ 10 ಕೋ.ರೂ. ಇರಿಸಲಾಗಿದೆ. ಎಲ್ಲ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿದರೆ ಸಮಸ್ಯೆ ದ್ವಿಗುಣವಾಗುತ್ತಲೆ ಹೋಗುತ್ತದೆ. ಪ್ರಸಕ್ತ ಯೋಜ ನೆಯನ್ನು ಕೆಯುಡಬ್ಲ್ಯುಎಸ್ 1 ವರ್ಷ ದಲ್ಲಿ ಪೂರೈಸಿ, 5 ವರ್ಷ ನಿರ್ವಹಣೆ ನಡೆಸಲಿದೆ. –ಸುಧಾಕರ್ ಎಚ್.ಎಂ., ಮುಖ್ಯಾಧಿಕಾರಿ, ಬೆಳ್ತಂಗಡಿ ಪ.ಪಂ.