ವರದಿ : ಕೇಶವ ಆದಿ
ಬೆಳಗಾವಿ: ಕೊರೊನಾ ಹಾವಳಿ ಅದರಲ್ಲೂ ಎರಡನೇ ಅಲೆಯ ಪ್ರಭಾವ ಸುಧಾರಣೆಯ ವಿಚಾರದಲ್ಲಿ ಹಲವಾರು ಸಕಾರಾತ್ಮಕ ಚಿಂತನೆಗಳಿಗೆ ದಾರಿ ಮಾಡಿಕೊಟ್ಟಿದೆ. ಅಭಿವೃದ್ಧಿ ಹಾಗೂ ಬದಲಾವಣೆಯಲ್ಲಿ ಹೊಸ ವಿಚಾರಗಳು ಜೀವ ತಳೆದಿವೆ.
ಹಳೆಯ ವ್ಯವಸ್ಥೆಗಳಿಗೆ ಹೊಸ ರೂಪ ಕೊಡುವ ಹಾಗೂ ಜನರಿಗೆ ಅನುಕೂಲ ಮಾಡಿಕೊಡುವ ಚರ್ಚೆ ಮತ್ತು ಪ್ರಯತ್ನಗಳು ನಡೆದಿವೆ. ಇದಕ್ಕೆ ನಗರ ಪ್ರದೇಶಗಳಲ್ಲಿ ವಾರ್ಡ್‌ವಾರು ಮಾರುಕಟ್ಟೆ ಸ್ಥಾಪನೆ ವಿಚಾರ ಹೊಸ ಸೇರ್ಪಡೆ. ಒಂದೇ ಕಡೆ ಜನ ಸೇರುವುದನ್ನು ತಪ್ಪಿಸಿ ಅವರಿಗೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಾರ್ಡ್‌ವಾರು ತರಕಾರಿ, ಹಣ್ಣು ಮಾರಾಟ ಮಾರುಕಟ್ಟೆ ನಿರ್ಮಾಣ ಚಿಂತನೆ ಈಗ ಚರ್ಚೆಗೆ ಬಂದಿದೆ. ಅಧಿಕಾರಿಗಳೂ ಸಹ ಈ ನಿಟ್ಟಿನಲ್ಲಿ ವಿಚಾರ ಮಾಡುತ್ತಿರುವುದು ಬದಲಾವಣೆಯ ಸಂಕೇತ ಎನ್ನಬಹುದು. ಇದಕ್ಕೆ ಪೂರಕವಾಗಿ ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ಈಗ ಕೊರೊನಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬೆಳಗಾವಿ ನಗರದ ಎಲ್ಲ ವಾರ್ಡ್‌ಗಳಲ್ಲಿ ತರಕಾರಿ, ಹಣ್ಣು, ಹೂವು ಮಾರಾಟ ಮಾಡಲು ತೋಟಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜಿಲ್ಲಾ ಹಾಪ್‌ಕಾಮ್ಸ್, ರೈತ ಉತ್ಪಾದಕ ಸಂಸ್ಥೆ ಮುಂದಾಗಿವೆ.
ಇದರಿಂದ ಮುಖ್ಯ ಮಾರುಕಟ್ಟೆಗಳಲ್ಲಿ ಅನಗತ್ಯ ಜನಜಂಗುಳಿ ತಪ್ಪಿಸುವುದು ಇದರ ಮುಖ್ಯ ಉದ್ದೇಶ. ಬೆಳಗಾವಿಯ ನಗರದಲ್ಲಿ 58 ವಾರ್ಡ್‌ಗಳಿವೆ. ಎಲ್ಲ ವಾರ್ಡ್‌ಗಳಿಗೆ ಅಲ್ಲಿನ ಬೇಡಿಕೆಗಳಿಗೆ ಅನುಗುಣವಾಗಿ ಸಣ್ಣ ಪ್ರಮಾಣದ ಮಾರುಕಟ್ಟೆ ಮಾಡಿದರೆ ದೊಡ್ಡ ಮಾರುಕಟ್ಟೆಯ ಮೇಲಿನ ಒತ್ತಡ ತಾನಾಗೇ ಕಡಿಮೆಯಾಗುತ್ತದೆ. ಅದರಲ್ಲೂ ಹಬ್ಬದ ಸಮಯದಲ್ಲಂತೂ ಇದು ಇನ್ನೂ ಅನುಕೂಲವಾಗುತ್ತದೆ. ಇದೆಲ್ಲದರ ಜೊತೆಗೆ ಪಾಲಿಕೆಯ ಆದಾಯದಲ್ಲೂ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ನಾಲ್ಕೈದು ಹೆಜ್ಜೆ ಮುಂದಿಟ್ಟಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅಗತ್ಯವಿರುವ ಕಡೆ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಮೂರ್‍ನಾಲ್ಕು ತಿಂಗಳಲ್ಲಿ ಈ ಹೊಸ ಮಾರುಕಟ್ಟೆಗಳು ಬೆಳಗಾವಿ ಜನರ ಸೇವೆಗೆ ಸಮರ್ಪಣೆಯಾಗಲಿವೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣವಾಗಬೇಕು. ಇದರಿಂದ ರೈತರಿಗೆ, ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ದಿನನಿತ್ಯ ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಯಲ್ಲಿ ಹೊಸ ಬದಲಾವಣೆಯ ಅಗತ್ಯವಿದೆ.
ಒಂದೇ ಮಾರುಕಟ್ಟೆಯಲ್ಲಿ ಹೆಚ್ಚಿನ ಜನದಟ್ಟಣೆ ತಪ್ಪಿಸಬೇಕು. ಹತ್ತಿರದಲ್ಲೇ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಣ್ಣಸಣ್ಣ ಮಾರುಕಟ್ಟೆಗಳ ಸ್ಥಾಪನೆ ಅಗತ್ಯವಾಗಿದೆ. ಇದಕ್ಕೆ ಜಾಗದ ಸಮಸ್ಯೆ ಏನಿಲ್ಲ. ಆದರೆ ಸ್ವತ್ಛತೆಯ ಕಡೆಗೆ ಗಮನ ಹರಿಸಬೇಕು ಎಂಬುದು ಶಾಸಕರ ಅಭಿಪ್ರಾಯ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸ್ಥಾಪನೆಯಾಗುತ್ತಿರುವ ಮಾರುಕಟ್ಟೆಯಲ್ಲಿ ಪ್ರತಿಶತ 60ರಿಂದ 70ರಷ್ಟು ಅಂಗಡಿಗಳನ್ನು ತರಕಾರಿಗೆ ಮೀಸಲಿಡಲು ಉದ್ದೇಶಿಸಲಾಗಿದೆ. ಪ್ರತಿ ಅಂಗಡಿಗೆ 50 ಸಾವಿರ ರೂ. ವೆಚ್ಚ ಬರಲಿದ್ದು, ಅದನ್ನು ಶೂನ್ಯ ಬಡ್ಡಿ ದರದ ಸಾಲದಲ್ಲಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗುವುದು. ಈ ಮಾರುಕಟ್ಟೆಗೆ ಸರಕಾರದಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ.