Advertisement

ಕಬ್ಬು ಬಾಕಿ ಸಮಸ್ಯೆ ಪರಿಹಾರಕ್ಕೆ ಆವೃತ್ತ ನಿಧಿ ಸ್ಥಾಪನೆ: ತಿಮ್ಮಾಪುರ

06:46 AM Jun 24, 2019 | Lakshmi GovindaRaj |

ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರ ಮಧ್ಯೆ ಪ್ರತಿ ವರ್ಷ ನಡೆಯುವ ಬಾಕಿ ಹಣ ಪಾವತಿ ಸಂಘರ್ಷ ನಿವಾರಣೆಗೆ ಆವೃತ್ತ ನಿಧಿ ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಕ್ಕರೆ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಕಬ್ಬು ಬೆಳೆಗಾರರು ಬಾಕಿ ಹಣಕ್ಕಾಗಿ ಹೋರಾಟ ನಡೆಸುತ್ತಾರೆ. ಕಾರ್ಖಾನೆಗಳು ಸಕಾಲಕ್ಕೆ ಬಾಕಿ ಹಣ ಕೊಡುವುದಿಲ್ಲ. ಎಫ್‌ಆರ್‌ಪಿ ದರ ಹೊರತುಪಡಿಸಿ ಕಾರ್ಖಾನೆ ಮತ್ತು ರೈತರು ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ, ಸರ್ಕಾರ ಎಫ್‌ಆರ್‌ಪಿ ಅನ್ವಯ ಬಾಕಿ ಕೊಡಿಸಲು ಮಾತ್ರ ಸಾಧ್ಯವಿದೆ ಎಂದರು.

ಸಕ್ಕರೆ ಕಾರ್ಖಾನೆಗಳಿಂದ ಸರ್ಕಾರದಲ್ಲಿ ಆವೃತ್ತ ನಿಧಿ ಸ್ಥಾಪಿಸಬೇಕು. ಇದು ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಕೇಂದ್ರವೇ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪತ್ರ ಬರೆಯುತ್ತೇನೆ. ಅಲ್ಲಿಂದ ಯಾವ ರೀತಿ ಸ್ಪಂದನೆ ಬರುತ್ತದೆ ಎಂಬುದನ್ನು ನೋಡಿಕೊಂಡು ರಾಜ್ಯ ಸರ್ಕಾರದಿಂದ ಏನು ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂಬುದರ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದರು.

ಎಥಿನಾಲ್‌ ಬಳಕೆಗೆ ಪ್ರತ್ಯೇಕ ಪತ್ರ: ಎಥಿನಾಲ್‌ ಉತ್ಪಾದನೆ ಹಾಗೂ ಡೀಸೆಲ್‌, ಪೆಟ್ರೋಲ್‌ನಲ್ಲಿ ಅದನ್ನು ಬಳಕೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಇದಕ್ಕೆ ಸಕ್ಕರೆ ಕಾರ್ಖಾನೆಗಳು ಸಬಲಗೊಳ್ಳುವುದರ ಜತೆಗೆ ರೈತರಿಗೂ ಅನುಕೂಲವಾಗುತ್ತದೆ.

ಈ ವಿಷಯದಲ್ಲಿ ಪ್ರತ್ಯೇಕ ಪತ್ರವನ್ನು ಕೇಂದ್ರಕ್ಕೆ ಬರೆಯಲಾಗುವುದು. ರಾಜ್ಯದ ಸಕ್ಕರೆ ಕಾರ್ಖಾನೆಗಳು ಜೂ.30ರೊಳಗಾಗಿ ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ಪಾವತಿಸಬೇಕು. ಇಲ್ಲದಿದ್ದರೆ ಸಕ್ಕರೆ ಜಪ್ತಿ ಮಾಡಿ, ರೈತರ ಬಾಕಿ ಹಣ ಪಾವತಿ ಮಾಡಲಾಗುವುದು ಎಂದರು.

Advertisement

ರಾಜ್ಯದಲ್ಲಿ 67 ಸಕ್ಕರೆ ಕಾರ್ಖಾನೆಗಳಿದ್ದು, ಅದರಲ್ಲಿ 22 ಕಾರ್ಖಾನೆಗಳು ಶೇ.100ರಷ್ಟು ಬಾಕಿ ಹಣ ಪಾವತಿಸಿವೆ. ಬಾಗಲಕೋಟೆಯ ಜಮಖಂಡಿ ಶುಗರ್ ಹಾಗೂ ನಾಯನೇಗಲಿಯ ಇಐಡಿ ಪ್ಯಾರಿ ಶುಗರ್, ರೈತರ ಬಾಕಿ ಚುಕ್ತಾ ಮಾಡಿವೆ. 67 ಕಾರ್ಖಾನೆಗಳಲ್ಲಿ 20 ಕಾರ್ಖಾನೆಗಳು ಶೇ.90ರಷ್ಟು ಬಾಕಿ ಕೊಟ್ಟಿವೆ. ಜಿಲ್ಲೆಯ ಗೋದಾವರಿ ಶುಗರ್, ನಿರಾಣಿ ಶುಗರ್, ಜಮ್‌ ಶುಗರ್ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿವೆ. ಜಿಲ್ಲೆಯ 11 ಕಾರ್ಖಾನೆಗಳಲ್ಲಿ 9 ಕಾರ್ಖಾನೆಗಳು ಬಾಕಿ ಕೊಟ್ಟಿಲ್ಲ ಎಂದರು.

ಶಾಸಕ ರಮೇಶ ಜಾರಕಿಹೊಳಿ ಅಥವಾ ನಮ್ಮ ಪಕ್ಷದ ಯಾರೊಬ್ಬರೂ ಕಾಂಗ್ರೆಸ್‌ ಬಿಟ್ಟು ಹೋಗಲ್ಲ. ಬಿಜೆಪಿಯವರು ಹಗಲುಗನಸು ಬಿಡಬೇಕು. ಬಿಜೆಪಿಯವರಿಗೆ ನಮ್ಮ ಪಕ್ಷದವರೇ ಆಟವಾಡಿಸುತ್ತಿದ್ದಾರೆ. ಇದನ್ನೇ ನಂಬಿರುವ ಬಿಜೆಪಿಯವರು ಸರ್ಕಾರ ಬೀಳುತ್ತದೆ ಎಂದು ಹೇಳುತ್ತ ಹೊರಟಿದ್ದಾರೆ.
-ಆರ್‌.ಬಿ.ತಿಮ್ಮಾಪುರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next