ರಾಯಚೂರು: ರಾಜ್ಯದಲ್ಲಿ ಸಾಕಷ್ಟು ಬುಡಕಟ್ಟು ಜನಾಂಗಗಳಿದ್ದು, ಅವರನ್ನು ಗುರುತಿಸಿ ಅಭಿವೃದ್ಧಿಪಡಿಸಲು ಬುಡಕಟ್ಟು ಅಭಿವೃದ್ಧಿ ನಿಗಮ ಆರಂಭಿಸಲು ಚಿಂತಿಸಲಾಗುವುದು. ಈ ಕುರಿತು ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ ಇರುವ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವದ 2ನೇ ದಿನ ಸೋಮವಾರ ನಡೆದ ಆದಿವಾಸಿ ಸಂಸ್ಕೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಈಚೆಗೆ ಸಂಭವಿಸಿದ ಭೀಕರ ನೆರೆಯಿಂದ ಅಪಾರ ಪ್ರಮಾಣದ ಹಾನಿ ಆಗಿದ್ದು ಪರಿಹಾರ ಕಲ್ಪಿಸುವಲ್ಲಿ ಅಭಿವೃದ್ಧಿಗೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಸಂದರ್ಭದಲ್ಲಿ ಎರಡೂವರೆ ಲಕ್ಷದಿಂದ 3 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಐದು ಲಕ್ಷ ಎಕರೆ ನೀರಾವರಿ ಜಮೀನಿನ ಜತೆಗೆ ಸಾಕಷ್ಟು ಬೆಳೆ ನಷ್ಟ ಆಗಿದೆ. ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ನಡೆದಿದೆ. ಮುಂಬರುವ ಮಾರ್ಚ್ ನಂತರ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಈ ಭಾಗ ಸೇರಿದಂತೆ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಎಚ್. ವಿಶ್ವನಾಥ ಮಾತನಾಡಿ, ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಎಲ್ಲ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆ. ಆದರೆ ಯಡಿಯೂರಪ್ಪ ಅವರು ಅತೀ ಹೆಚ್ಚು ನೆರವು ಒದಗಿಸಿದ್ದಾರೆ. ತಿಂಥಣಿ ಬ್ರಿಡ್ಜ್ ಕನಕ ಗುರು ಪೀಠದಿಂದ ಮಹತ್ವದ ಬೇಡಿಕೆ ಆದಿವಾಸಿ ಅಭಿವೃದ್ಧಿ ನಿಗಮ ಆರಂಭಿಸಬೇಕು ಎನ್ನುವುದಾಗಿದೆ. ಅಲೆಮಾರಿ, ಆದಿವಾಸಿಗಳಿಗೆ ಸರ್ಕಾರಿ ಸೌಲಭ್ಯ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಒತ್ತು ನೀಡಲಿ ಎಂದರು.
ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಕೇಂದ್ರದ ಉಕ್ಕು ಖಾತೆ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಾಸ್ತೆ ಮಾತನಾಡಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ರಾಯಚೂರು ನಗರ ಶಾಸಕ ಡಾ| ಶಿವರಾಜ ಪಾಟೀಲ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಮಾನಪ್ಪ ವಜ್ಜಲ್, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಎಸ್‌ಪಿ ಡಾ| ಸಿ.ಬಿ.ವೇದಮೂರ್ತಿ, ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಮುಖಂಡರಾದ ಎನ್.ಶಂಕ್ರಪ್ಪ, ಶರಣಪ್ಪಗೌಡ ಜಾಡಲದಿನ್ನಿ, ಬಸನಗೌಡ ಬ್ಯಾಗವಾಟ್ ಸೇರಿದಂತೆ ಅನೇಕ ಮುಖಂಡರಿದ್ದರು.