Advertisement

ಬೆಂಗಳೂರಿನಲ್ಲಿ ಉಡುಪಿ ಶ್ರೀಗಳ ಎರಡನೇ ವೃಂದಾವನ ಸ್ಥಾಪನೆ

10:02 AM Dec 31, 2019 | sudhir |

ಉಡುಪಿ ಸ್ವಾಮೀಜಿಯವರಲ್ಲಿ ಬಹುತೇಕರ ವೃಂದಾವನಗಳು ಸಿಗುವುದು ಸುಮಾರು 500 ವರ್ಷಗಳ ಈಚಿನದು. ಅದಕ್ಕಿಂತ ಹಿಂದಿನವರಲ್ಲಿ ಕೆಲವರು ಜಲಸಮಾಧಿಯಾಗಿರಬಹುದು ಎಂಬ ಮಾತಿದೆ. ಅಷ್ಟಮಠಗಳ ಸ್ವಾಮೀಜಿಯವರಲ್ಲಿ ಬಹುತೇಕರ ವೃಂದಾವನಗಳಿರುವುದು ಅವಿ ಭಜಿತ ದ.ಕ. ಜಿಲ್ಲೆಯಲ್ಲಿ. ಬೆಂಗಳೂರಿನಲ್ಲಿ ಇದುವರೆಗೆ ಶ್ರೀ ಕೃಷ್ಣಾಪುರ ಮಠದ 3 ತಲೆಮಾರು ಹಿಂದಿನ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ವೃಂದಾವನ ಮಾತ್ರ ಇತ್ತು. ಈ ವೃಂದಾವನ ಸ್ಥಾಪನೆಯಾದುದು 1881ರಲ್ಲಿ. ಇದಾಗಿ 139 ವರ್ಷಗಳ ಬಳಿಕ ಪೇಜಾವರ ಶ್ರೀಗಳ ವೃಂದಾವನ ಬೆಂಗಳೂರಿನಲ್ಲಿ ಸ್ಥಾಪನೆ ಯಾಗುತ್ತಿದೆ.

Advertisement

ಶ್ರೀ ಕೃಷ್ಣಾಪುರ ಮಠದ ಈಗಿನ ಸ್ವಾಮೀಜಿ ಯವರ ಪರಮಗುರುಗಳ ಗುರು ಶ್ರೀ ವಿದ್ಯಾಧೀಶತೀರ್ಥರು ತಮ್ಮ ನಾಲ್ಕನೆಯ ಪರ್ಯಾಯವನ್ನು 1878-79ರಲ್ಲಿ ಪೂರೈಸಿ 1880ರಲ್ಲಿ ತಿರುಪತಿ ಶ್ರೀನಿವಾಸನ ದರ್ಶನಕ್ಕೆ ಹೋದರು. ಅದೇ ಹೊತ್ತಿಗೆ ಆ ಕಾಲದಲ್ಲಿ ವಿದ್ವತ್‌ಪ್ರತಿಭೆ, ಪವಾಡಗಳನ್ನು ನಡೆಸುತ್ತಿದ್ದ ಇವರ ಶಿಷ್ಯರಾದ ಜಮಖಂಡಿ ವಾದಿರಾಜ ಆಚಾರ್ಯರು ಕಾಶ್ಮೀರಕ್ಕೆ ತೆರಳಿ ಅಲ್ಲಿನ ವಿದ್ವಾಂಸರ ಬಳಿ ವಿದ್ವತ್ಸಭೆಯಲ್ಲಿ ಪಾಲ್ಗೊಂಡು ಜಯಪತಾಕೆ ಗಳಿಸಿ ತಿರುಪತಿಗೆ ಬಂದಿದ್ದರು. ಕಾಶ್ಮೀರದ ರಾಜನಿಂದ ಜಯಪತಾಕೆ ಉಡುಗೊರೆಯಾಗಿ ಸ್ವೀಕರಿಸಿದ್ದು ಸುವರ್ಣಾಲಂಕೃತ ಗಜದಂತದ ಪಲ್ಲಕ್ಕಿಯನ್ನು. ಇದನ್ನು ತಿರುಪತಿಯಲ್ಲಿ ವಿದ್ಯಾಗುರುಗಳಿಗೆ ಸಮರ್ಪಿಸಿದರು.

ದೇವರ ದರ್ಶನ ಪಡೆದ ಅನಂತರ ಸ್ವಾಮೀಜಿಯವರು ಉಡುಪಿಗೆ ಹಿಂದಿರುಗುವವರಿದ್ದರು. ಆದರೆ ಬೆಂಗಳೂರಿನಲ್ಲಿ ಅವರು ನಿರ್ಯಾಣ ಹೊಂದಿದರು. ಅವರ ವೃಂದಾವನವನ್ನು ಸೆಂಟ್ರಲ್‌ ಮಾರ್ಕೆಟ್‌ ಹಿಂಬದಿ ಗುಂಡೋಪಂತ ಛತ್ರದ ಬಳಿ ನಿರ್ಮಿಸಲಾಯಿತು.

ಬೆಂಗಳೂರಿನಲ್ಲಿ ವೃಂದಾವನಸ್ಥರಾದ ಶ್ರೀ ವಿದ್ಯಾಧೀಶತೀರ್ಥರು ಆ ಕಾಲದಲ್ಲಿ ದಾಖಲೆ ಯಾದ 12 ಸುಧಾ ಮಂಗಲೋತ್ಸವವನ್ನು ನಡೆಸಿ ಪ್ರಖ್ಯಾತಿ ಗಳಿಸಿದ್ದರು. ಪೇಜಾವರ ಶ್ರೀ ವಿಶ್ವೇಶತೀರ್ಥರು 39ನೆಯ ಸುಧಾ ಮಂಗಲೋತ್ಸವ ನಡೆಸಲು ಅಣಿಯಾಗಿದ್ದರು. ಆಗ ಶ್ರೀ ವಿದ್ಯಾಧೀಶತೀರ್ಥರು ತಿರುಪತಿ ಶ್ರೀನಿವಾಸನ ದರ್ಶನ ಪಡೆದು ಹಿಂದಿರುಗುವಾಗ ನಿರ್ಯಾಣ ಹೊಂದಿದರೆ, ಈಗ ಪೇಜಾವರ ಶ್ರೀಗಳು ಡಿ. 17ರಂದು ತಿರುಪತಿ ಶ್ರೀನಿವಾಸನ ದರ್ಶನ ಪಡೆದು ಮರಳುವಾಗ ಜ್ವರಬಾಧೆ ಬಂದು ಡಿ. 29ರಂದು ಇಹಲೋಕ ತ್ಯಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next