Advertisement

ದೇಶದ ಮೊದಲ ಅಗ್ರಿಟೆಕ್‌ ಸೆಂಟರ್‌ ಆಫ್ ಎಕ್ಸಲೆನ್ಸ್‌ ಸ್ಥಾಪನೆ

11:02 AM Feb 03, 2018 | |

ಬೆಂಗಳೂರು: ಕೃಷಿ ಕ್ಷೇತ್ರದಿಂದ  ವಿಮುಖವಾಗುತ್ತಿರುವ ರೈತರನ್ನು ಅದರಲ್ಲೂ ಯುವ ರೈತರನ್ನು ಆಕರ್ಷಿಸಲು ಮತ್ತು ಆದಾಯ
ಹೆಚ್ಚಿಸುವ ಮೂಲಕ ಕೃಷಿ ಕ್ಷೇತ್ರವನ್ನು ಸದೃಢ ಗೊಳಿಸುವ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಪೂರಕವಾಗಿ ಕೃಷಿ ಇಲಾಖೆ ಸಹಯೋಗದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿಬಿಟಿ) ಇಲಾಖೆಯು ಅಗ್ರಿಟೆಕ್‌ ಅತ್ಯುನ್ನತ
ಕೇಂದ್ರ ಸ್ಥಾಪನೆಗೆ ಮುಂದಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.

Advertisement

ಬೇಸಾಯ ಹಾಗೂ ಕೃಷಿ ಬೆಳೆ ಮಾರಾಟ ಪ್ರಕ್ರಿಯೆಯಲ್ಲಿ ಹೊಸ ಸಂಶೋಧನೆ, ಆವಿಷ್ಕಾರ ಕೈಗೊಳ್ಳಲು ಪೂರಕವಾಗಿ ಬೆಂಗಳೂರಿನಲ್ಲೇ ಅತ್ಯುನ್ನತ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆದಿದೆ. ಇದಕ್ಕಾಗಿ 2018-19ನೇ ಸಾಲಿನ ಬಜೆಟ್‌ನಲ್ಲಿ 20 ಕೋಟಿ ರೂ. ಅನುದಾನ ಕಾಯ್ದಿರಿಸುವ ನಿರೀಕ್ಷೆಯಿದೆ. ಆ ಮೂಲಕ ದೇಶದಲ್ಲೇ ಪ್ರಥಮ ಅಗ್ರಿಟೆಕ್‌ ಅತ್ಯುನ್ನತ ಕೇಂದ್ರ ಸ್ಥಾಪನೆಗೆ ಕರ್ನಾಟಕ ನಾಂದಿ ಹಾಡಿದಂತಾಗಲಿದೆ. ಬೇಸಾಯ ಕ್ರಮದಲ್ಲಿ ಬದಲಾವಣೆ, ಹೆಚ್ಚು ಇಳುವರಿ ನೀಡುವ ಬಿತ್ತನೆ ಬೀಜಗಳ ಅಭಿವೃದ್ಧಿ,
ಸುಧಾರಿತ ರಸಗೊಬ್ಬರ, ಕೀಟನಾಶಕ ಅಭಿವೃದ್ಧಿ, ಬಹುಪಯೋಗಿ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಸಂಶೋಧನೆ ಕೈಗೊಳ್ಳುವುದು. ಕೃಷಿ ಬೆಳೆ, ಉಪ ಬೆಳೆ, ಉಪ ಉತ್ಪನ್ನ, ಸಿರಿಧಾನ್ಯ, ಸಾವಯವ ಕೃಷಿ, ನೀರಿನ ಸಂರಕ್ಷಣೆ ಸೇರಿ ಕೃಷಿ 
ಸಂಬಂಧಿ ನಾನಾ ಚಟುವಟಿಕೆಗಳಲ್ಲಿ ಸಂಶೋಧನೆ, ಆವಿಷ್ಕಾರಗಳನ್ನು ರೂಪಿಸುವುದು, ಯಶಸ್ವಿ ಪ್ರಯೋಗಗಳ ಬಳಕೆಗೆ ಪ್ರೋತ್ಸಾಹಿಸುವುದು ಈ ಕೇಂದ್ರದ ಉದ್ದೇಶ. 

ನಾಲ್ಕು ಹಂತಕ್ಕೂ ಆದ್ಯತೆ: ಪ್ರಯೋಗಾಲಯ- ಕೃಷಿ ಭೂಮಿ- ಸಗಟು ಮಾರಾಟ- ಗ್ರಾಹಕ (ಲ್ಯಾಬ್‌- ಫಾರ್ಮ್- ರಿಟೇಲ್‌- ಪ್ಲೇಟ್‌) ಹೀಗೆ ಪ್ರಯೋಗಾಲಯದಿಂದ ಗ್ರಾಹಕರ ತಟ್ಟೆಗೆ ಬೆಳೆಯಿಂದ ಆಹಾರದವರೆಗಿನ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಬಳಕೆಗೆ ಆದ್ಯತೆ ಅಗತ್ಯ. ಸದ್ಯ ಕೃಷಿ ಇಲಾಖೆಯು ಪ್ರಯೋಗಾಲಯದಿಂದ ಕೃಷಿ ಭೂಮಿವರೆಗೆ ತಂತ್ರಜ್ಞಾನ ಬಳಕೆಗೆ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ. ಆದರೆ ಒಟ್ಟಾರೆ ಸರಪಳಿಯಲ್ಲಿ ಎಲ್ಲ ಹಂತಗಳಲ್ಲೂ ಪರಿಣಾಮಕಾರಿ ತಂತ್ರಜ್ಞಾನ ಅಳವಡಿಕೆಗೆ ಐಟಿಬಿಟಿ ಇಲಾಖೆ ಆದ್ಯತೆ ನೀಡಲು ಮುಂದಾಗಿದೆ.

ಕೃಷಿ ವಿವಿಗಳೂ ಭಾಗಿ: ಸದ್ಯ ರಾಜ್ಯದಲ್ಲಿನ ಕೃಷಿ ವಿವಿಗಳಲ್ಲೂ ತಳಿ ಅಭಿವೃದ್ಧಿ ಸೇರಿ ನಾನಾ ರೀತಿಯ ಸಂಶೋಧನೆ ನಡೆಯುತ್ತಿರುತ್ತವೆ. ಆದರೆ ಉದ್ದೇಶಿತ ಅಗ್ರಿಟೆಕ್‌ ಅತ್ಯುನ್ನತ ಕೇಂದ್ರದಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಪೂರಕವಾಗಿ ಸಂಶೋಧನೆ, ಆವಿಷ್ಕಾರಕ್ಕೆ ಕೇಂದ್ರೀಕೃತವಾಗಿರುತ್ತದೆ. ಜತೆಗೆ ಕೃಷಿ ವಿವಿಗಳನ್ನೂ ಒಳಗೊಂಡಂತೆ ಕಾರ್ಯ
ನಿರ್ವಹಿಸುವ ವ್ಯವಸ್ಥೆ ರೂಪಿಸಲು ಚಿಂತನೆ ನಡೆದಿದೆ. 

3 ವರ್ಷಕ್ಕೆ 20 ಕೋಟಿ ರೂ. ಅನುದಾನ?: ಎರಡೂ ಇಲಾಖೆಗಳ ಸಹಯೋಗದಲ್ಲಿ ಅತ್ಯುನ್ನತ ಕೇಂದ್ರ ನಿರ್ಮಾಣ ಹಾಗೂ 3 ವರ್ಷ ನಿರ್ವಹಣೆಗೆ ಸುಮಾರು 20 ಕೋಟಿ ರೂ. ಅನುದಾನ ಕೋರಿವೆ. ತಾಂತ್ರಿಕ ನೈಪುಣ್ಯ ಸಂಸ್ಥೆಗಳು ಹಾಗೂ ನೂರಾರು
ಪ್ರತಿಷ್ಠಿತ ಸಂಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಬೆಂಗಳೂರಿನಲ್ಲೇ ಇರುವುದರಿಂದ ಈ ಕೇಂದ್ರವನ್ನು ರಾಜಧಾನಿಯಲ್ಲೇ ತೆರೆಯಲಿದೆ. ನಂತರ ಅಗತ್ಯಬಿದ್ದರೆ ರಾಜ್ಯದ ಇತರೆಡೆಯೂ ಆರಂಭಿಸಲು ರೂಪುರೇಷೆ ಸಿದ್ಧಪಡಿಸಲು ಚಿಂತಿಸಿದೆ.

Advertisement

ಕೃಷಿಕರ ಆದಾಯ ಹೆಚ್ಚಿಸುವ ಸಲುವಾಗಿ ಸಂಶೋಧನೆ, ಆವಿಷ್ಕಾರಗಳ ಮೂಲಕ ಹೊಸ ತಂತ್ರಜ್ಞಾನದ ಬಳಕೆ ಉದ್ದೇಶದಿಂದ ಕೃಷಿ ಇಲಾಖೆ ಸಹಯೋಗದಲ್ಲಿ ದೇಶದಲ್ಲೇ ಪ್ರಥಮ ಅಗ್ರಿಟೆಕ್‌ ಅತ್ಯುನ್ನತ ಕೇಂದ್ರ ಸ್ಥಾಪನೆಗೆ ಚಿಂತಿಸಲಾಗಿದೆ. ಈ ಬಾರಿ ರಾಜ್ಯ ಆಯವ್ಯಯದಲ್ಲಿ ಈ ಬಗ್ಗೆ ಘೋಷಣೆಯಾಗುವ ನಿರೀಕ್ಷೆಯಿದೆ. 
ಪ್ರಿಯಾಂಕ್‌ ಖರ್ಗೆ, ಐಟಿಬಿಟಿ ಸಚಿವ

ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next