Advertisement

ಹರಿಹರದಲ್ಲಿ ಜವಳಿ ಕಾರ್ಖಾನೆ ಸ್ಥಾಪನೆ

06:28 AM Feb 26, 2019 | Team Udayavani |

ಹರಿಹರ: ರಾಜ್ಯದ ವಿವಿಧ ಭಾಗಗಳಿಗೆ ಸಂಪರ್ಕ ಕೊಂಡಿಯಾಗಿರುವ ಹರಿಹರ ನಗರದಲ್ಲಿ ಜವಳಿ ಕಾರ್ಖಾನೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್‌.ರಾಮಪ್ಪ ಭರವಸೆ ನೀಡಿದರು.

Advertisement

ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಪಂ ಹಾಗೂ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ನಗರದ ಶ್ರೀಶೈಲ ಬಿ.ಇಡಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಿರ್ಲೋಸ್ಕರ್‌ ಕಂಪನಿ ಮುಚ್ಚಿದ ಮೇಲೆ ನಗರದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಜವಳಿ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ನದಿ ನೀರು, ರೈಲು, ಹೆದ್ದಾರಿಗಳ ಸಂಪರ್ಕ ಜಾಲ ಹೊಂದಿರುವ ಹರಿಹರ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಕುಶಲಕರ್ಮಿಗಳು, ಸಣ್ಣ ಕೈಗಾರಿಕೆಗಳು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿವೆ. ಉದ್ಯಮಿಗಳು ಈ ಬಗ್ಗೆ ಚಿಂತನೆ ನಡೆಸಿ ಕೈಗಾರಿಕಾ ಸ್ಥಾಪನೆಗೆ ಮುಂದಾದರೆ ನಗರದಲ್ಲಿ ಇನ್ನಷ್ಟು ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ತಾವು ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

ಇಲಾಖೆ ನಿಗದಿಪಡಿಸಿದ ಕೈಗಾರಿಕೆ ನಿವೇಶನಗಳ ದರ ದುಬಾರಿಯಾಗಿದ್ದು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ದರ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಎನ್‌.ಟಿ. ಎರ್ರಿಸ್ವಾಮಿ ಮಾತನಾಡಿ, ಜವಳಿ ಕೈಗಾರಿಕೆ ಸ್ಥಾಪಿಸುವವರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವಿದೆ. ಜವಳಿ ಉದ್ಯಮ ಉದ್ಯೋಗ ಸೃಷ್ಟಿವಲಯವಾಗಿದೆ. ಸರಕಾರವೂ ಸಹ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದೆ ಎಂದರು.

Advertisement

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಸಪಾರೆ ಶ್ರೀನಿವಾಸ್‌ ಮಾತನಾಡಿ, ಎಸ್ಸಿ, ಎಸ್ಟಿ ವರ್ಗದವರು ಉದ್ಯಮ ಸ್ಥಾಪಿಸಿದರೆ ಶೇ.90 ರಷ್ಟು ಸಬ್ಸಿಡಿ ದೊರೆಯಲಿದೆ. ಜಿಲ್ಲೆಯಲ್ಲಿ 2250 ಜನರಿಗೆ ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲಾಗಿದೆ. ಒಟ್ಟು 77 ಕೋಟಿ ರೂ. ಗಳನ್ನು ಜವಳಿ ಕ್ಷೇತ್ರದಲ್ಲಿ ಹೂಡಲಾಗಿದೆ. 428 ಕೈಮಗ್ಗ ನೇಕಾರರ ಕುಟುಂಬಗಳಿದ್ದು ಎಲ್ಲರೂ ಸಹ ಜವಳಿ ಘಟಕಗಳನ್ನು ಸ್ಥಾಪಿಸಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಬಾಪೂಜಿ ಸಂಸ್ಥೆ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ ಮಾತನಾಡಿದರು. ತಾಪಂ ಅಧ್ಯಕ್ಷ ಶ್ರೀದೇವಿ ಮಂಜಪ್ಪ, ನಗರಸಭೆ ಅಧ್ಯಕ್ಷೆ ಸುಜಾತ ರೇವಣಸಿದ್ದಪ್ಪ, ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಿದ್ಧನಗೌಡ, ಸಂಸ್ಥೆ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಕೈಮಗ್ಗ ಮತ್ತು ಜವಳಿ ಇಲಾಖೆ ವಲಯ ಕಚೇರಿ ಸಹಾಯಕ ನಿರ್ದೇಶಕ ಯೋಗೇಶ್‌, ಕಾಸಿಯಾ ಜವಳಿ ಪ್ಯಾನಲ್‌ ಚೇರಮನ್‌ ಜಯೇಶ್‌ ಭಟಾವಿಯ, ಕಾಸಿಯಾ ನಿರ್ದೇಶಕ ಶೇಷಾಚಲ, ಸಹಾಯಕ ನಿರ್ದೇಶಕ ಸರೇಶ್‌ಎನ್‌. ತಡಕನಹಳ್ಳಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next